ADVERTISEMENT

`ಜ 1ರಿಂದ ಫಲಾನುಭವಿಗಳ ಖಾತೆಗೆ ಹಣ'

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2012, 6:27 IST
Last Updated 21 ಡಿಸೆಂಬರ್ 2012, 6:27 IST

ಧಾರವಾಡ:  `ಕೇಂದ್ರ ಸರ್ಕಾರವು ಪ್ರಾಯೋಗಿಕ ವಾಗಿ ವಿವಿಧ ಇಲಾಖೆಗಳ ಒಟ್ಟು 34 ಯೋಜನೆಗಳ ನಗದು ಸೌಲಭ್ಯವನ್ನು ಬರುವ ಜನವರಿ ಒಂದರಿಂದ ಜಿಲ್ಲೆಯ ಫಲಾನುಭವಿಗಳ ಖಾತೆಗೆ ನೇರವಾಗಿ ವರ್ಗಾಯಿಸಲು ನಿರ್ಧರಿಸಿದೆ ಎಂದು ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ತಿಳಿಸಿದರು. 

 
ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಿದ್ಧತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, `ಇದರಲ್ಲಿ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಇಲಾಖೆಯಿಂದ 12, ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಉನ್ನತ ಶಿಕ್ಷಣ ವಿಭಾಗದ 4, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ವಿಭಾಗದ 2, ಬುಡಕಟ್ಟುಗಳ ವ್ಯವಹಾರ ಇಲಾಖೆಯ 5 ಹಾಗೂ ಅಲ್ಪಸಂಖ್ಯಾತರ ಇಲಾಖೆಯು ನೀಡುವ 3, ಹೀಗೆ ಒಟ್ಟು 26 ಶಿಷ್ಯ ವೇತನಗಳಲ್ಲದೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಇಂದಿರಾಗಾಂಧಿ ಮಾತೃತ್ವ ಸಹಯೋಗ ಹಾಗೂ ಧನಲಕ್ಷ್ಮಿ ಯೋಜನೆಗಳು, ಆರೋಗ್ಯ ಇಲಾಖೆಯ ಜನನಿ ಸುರಕ್ಷಾ ಯೋಜನೆ, ಕಾರ್ಮಿಕ ಖಾತೆಯಿಂದ ಬೀಡಿ ಕೆಲಸಗಾರರಿಗೆ ಸಂಬಂಧಿಸಿದ ಮಕ್ಕಳ ಶಿಷ್ಯವೇತನ, ಮನೆ ನಿರ್ಮಾಣ ಸಹಾಯಧನ, ಬಾಲಕಾರ್ಮಿಕ ವಿಶೇಷ ಶಾಲೆಗಳ ಸ್ಟೈಫಂಡ್, ವಿಮೆಗೆ ಒಳಪಟ್ಟವರಿಗೆ ಕಾಯಂ ಅಂಗವಿಕಲ, ಅವಲಂಬಿತ, ಚಿಕಿತ್ಸಾ ವೆಚ್ಚದ ಸೌಲಭ್ಯಗಳು ಸೇರಿವೆ. ಇದೇ ಇಲಾಖೆಯಿಂದ ಪಿಎಫ್, ಪೆನ್‌ಶನ್ ಹಾಗೂ ಅವಧಿ ಮುನ್ನವೇ ಹಣ ಪಡೆಯುವಿಕೆ, ಉದ್ಯೋಗಿಗಳ ವಿಮೆ ಕುರಿತ ಸೌಲಭ್ಯಗಳ ಫಲಾನುಭವಿ ಇವರೆಲ್ಲರಿಗೆ ಆಗಬೇಕಾದ ಹಣ ಪಾವತಿಯನ್ನು ನೇರವಾಗಿ ಅವರ ಖಾತೆಗೆ ಜಮಾ ಮಾಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಆಧಾರ್ ಸಂಖ್ಯೆಯ ಹಾಗೂ ಫಲಾನುಭವಿಯ ಬ್ಯಾಂಕ್ ಖಾತೆ ಸಂಖ್ಯೆಯನ್ನು ಒಳಗೊಳಿಸುವ (ಸೀಡಿಂಗ್) ಮೂಲಕ ನೈಜ ಫಲಾನುಭವಿಗೆ ಸಂಬಂಧಿತ ನಗದು ಸಂದಾಯವಾಗಬೇಕು ಎನ್ನುವುದೇ ಇದರ ಮೂಲ ಉದ್ದೇಶವಾಗಿದೆ ಎಂದು ವಿವರಿಸಿದರು. 
 
ಸಮಾಜ ಕಲ್ಯಾಣ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಇಲಾಖೆಗಳು, ಕಾಲೇಜುಗಳು, ವಿ.ವಿ.ಗಳು ಈ ಕಾರ್ಯಕ್ರಮದಡಿ ಸೂಚಿತ ಯೋಜನೆಗಳ ಫಲಾನುಭವಿ ವಿದ್ಯಾರ್ಥಿಗಳ ಪಟ್ಟಿಯನ್ನು ಇಂಗ್ಲಿಷ್‌ನಲ್ಲಿ (ಎಕ್ಸ್‌ಎಲ್‌ದಲ್ಲಿ) ಕ್ರಮ ಸಂಖ್ಯೆ, ಫಲಾನುಭವಿ ಹೆಸರು, ಆಧಾರ್ ಸಂಖ್ಯೆ ಅದಿಲ್ಲದಿದ್ದಲ್ಲಿ ಬ್ಯಾಂಕ್ ವಿವರಗಳಲ್ಲಿ ಶಾಖೆ ಹೆಸರು, ಐಎಫ್‌ಎಸ್‌ಸಿ ಸಂಖ್ಯೆ ಮತ್ತು ಫಲಾನುಭವಿ ಬ್ಯಾಂಕ್ ಖಾತೆ ಸಂಖ್ಯೆ ನಮೂದಿಸಿದ ಪಟ್ಟಿಯನ್ನು ಸಿದ್ಧಪಡಿಸಬೇಕು. ಅದೇ ರೀತಿ ಆರೋಗ್ಯ, ಮಹಿಳಾ, ಕಾರ್ಮಿಕ, ಬಾಲಕಾರ್ಮಿಕ ಇಲಾಖೆಗಳ ಅಧಿಕಾರಿಗಳು ಪಟ್ಟಿಗಳನ್ನು ಸಿದ್ಧಪಡಿಸಬೇಕು. ಬಹುತೇಕ ಸೌಲಭ್ಯಗಳ ವಿತರಣೆ ಕುರಿತಂತೆ ಬ್ಯಾಂಕ್ ಖಾತೆಗಳನ್ನು ಫಲಾನುಭವಿಗಳನ್ನು ಹೊಂದಿರುವ ಹಿನ್ನೆಲೆಯಲ್ಲಿ ಆ ವಿವರಗಳನ್ನು ಪಟ್ಟಿಯಲ್ಲಿ ಸೇರಿಸಬೇಕು ಎಂದು ಶುಕ್ಲಾ ತಿಳಿಸಿದರು.
 
ಈ ಕುರಿತು ಸಂಬಂಧಿತ ಇಲಾಖೆಗಳ ಅಧಿಕಾರಿಗಳ ಅದರೊಂದಿಗೆ ಆಧಾರ್ ನೋಂದಣಿಯ ಘಟಕ, ಸಂಬಂಧಿಸಿದ ಪ್ರದೇಶದ ಬ್ಯಾಂಕ್ ಅಧಿಕಾರಿಗಳ ತಂಡಗಳನ್ನು ಹೋಬಳಿ ಮಟ್ಟದಲ್ಲಿ ಹಾಗೂ ಫಲಾನುಭವಿಗಳು ಹೆಚ್ಚಿನ ಸಂಖ್ಯೆ ಇದ್ದಲ್ಲಿ ಹಳ್ಳಿಗೂ ಹೋಗಬೇಕು. ಈ ಕುರಿತು ಫಲಾನುಭವಿಗಳ ಪಟ್ಟಿ ಹಾಗೂ ಸಂಖ್ಯೆ ಆಧರಿಸಿ ಆಧಾರ ಹಾಗೂ ಬ್ಯಾಂಕ್ ಖಾತೆಗೆ ನೋಂದಣಿಗಾಗಿ ತಂಡಗಳು ಸಂಚರಿಸಬೇಕಾದ ರೂಟ್‌ಮ್ಯಾಪ್ ತಯಾರಿಸಲು ಉಪವಿಭಾಗಾಧಿಕಾರಿ ಸುರೇಶ ಹಿಟ್ನಾಳ ಅವರಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು ಅಗತ್ಯ ಸೌಲಭ್ಯ ಒದಗಿಸಲಿದೆ ಎಂದು ಅವರು ಹೇಳಿದರು. 
 
ಸಭೆಯಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಪಿ.ಎ.ಮೇಘಣ್ಣವರ, ಹೆಚ್ಚುವರಿ ಜಿಲ್ಲಾಧಿ ಕಾರಿ ಮಹಾಂತೇಶ ಬೀಳಗಿ, ಪ್ರೊಬೇಶನರಿ ಐಎಎಸ್ ಅಧಿಕಾರಿ ಸಿಂಧು, ಉಪವಿಭಾಗಾಧಿಕಾರಿ ಸುರೇಶ ಹಿಟ್ನಾಳ ಸೇರಿದಂತೆ ಯೋಜನಾ ಸಂಬಂಧಿತ ಇಲಾಖೆಗಳ, ಸಂಸ್ಥೆಗಳ ಜಿಲ್ಲಾ ಮುಖ್ಯಸ್ಥರು ಲೀಡ್ ಬ್ಯಾಂಕ್ ಹಾಗೂ ನಬಾರ್ಡ್ ಅಧಿಕಾರಿಗಳು ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.