ADVERTISEMENT

ದಯಾಮರಣ ಕೋರಲು ದೆಹಲಿ ಚಲೋ

ರೈಲು ಮೂಲಕ ದೆಹಲಿಗೆ ಹೊರಟ ಮಹದಾಯಿ ಕಳಸಾ–ಬಂಡೂರಿ ಹೋರಾಟಗಾರರು

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2018, 10:31 IST
Last Updated 26 ಏಪ್ರಿಲ್ 2018, 10:31 IST

ಹುಬ್ಬಳ್ಳಿ: ಮಹದಾಯಿ ಮತ್ತು ಕಳಸಾ–ಬಂಡೂರಿ ಯೋಜನೆ ಜಾರಿಗೊಳಿಸಬೇಕು ಇಲ್ಲವೇ, ದಯಾಮರಣಕ್ಕೆ ಅನುಮತಿ ನೀಡಬೇಕು ಎಂದು ಒತ್ತಾಯಿಸಿ, ರೈತ ಸೇನಾ ಕರ್ನಾಟಕ ನೇತೃತ್ವದಲ್ಲಿ ಸುಮಾರು 250 ರೈತರು ಬುಧವಾರ ದೆಹಲಿ ಚಲೋ ಅಂಗವಾಗಿ ಇಲ್ಲಿನ ಮೂರುಸಾವಿರ ಮಠದಿಂದ ದೆಹಲಿಗೆ ಹೊರಟರು.

ರೈತ ಸೇನಾ ಕರ್ನಾಟಕದ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ, ‘ಯೋಜನೆ ಜಾರಿಗಾಗಿ ನರಗುಂದದಲ್ಲಿ ನಡೆಯುತ್ತಿರುವ ಹೋರಾಟ ಸಾವಿರ ದಿನಗಳನ್ನು ತಲುಪಿದೆ. ಆದರೆ, ಇದುವರೆಗೆ ಯಾವ ಸರ್ಕಾರವೂ ಹೋರಾಟಕ್ಕೆ ಸ್ಪಂದಿಸಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಕೆಸರೆರೆಚಾಟದಿಂದಾಗಿ ಯೋಜನೆಗೆ ಚಾಲನೆ ಸಿಕ್ಕಿಲ್ಲ. ರಾಜಕೀಯ ಪಕ್ಷಗಳು ನಿರ್ಲಕ್ಷ್ಯ ವಹಿಸಿವೆ. ಇದರಿಂದಾಗಿ ನಾಲ್ಕು ಜಿಲ್ಲೆಗಳ 11 ತಾಲ್ಲೂಕಿನ ಜನರು ಹತಾಶರಾಗಿದ್ದಾರೆ. ಇನ್ನಾದರೂ, ಜನಪ್ರತಿನಿಧಿಗಳು ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಲಿ’ ಎಂದು ಒತ್ತಾಯಿಸಿದರು.

ADVERTISEMENT

ಅಂತಿಮ ಮಾರ್ಗ: ‘ಹೋರಾಟದ ಅಂತಿಮ ಮಾರ್ಗವಾಗಿ ಇದೀಗ ದೆಹಲಿ ಚಲೋ ಹಮ್ಮಿಕೊಂಡಿದ್ದೇವೆ. ಶುಕ್ರವಾರ ದೆಹಲಿ ತಲುಪಿ, ಶನಿವಾರ ಮತ್ತು ಭಾನುವಾರ ಸಂಸತ್ ರಸ್ತೆಯಲ್ಲಿ ಧರಣಿ ನಡೆಸಲಾಗುವುದು. ಸೋಮವಾರ ರಾಷ್ಟ್ರಪತಿ
ರಾಮನಾಥ ಕೋವಿಂದ್ ಅವರನ್ನು ಭೇಟಿ ಮಾಡಿ, ಸಮಸ್ಯೆ ಬಗೆಹರಿಸಬೇಕು ಇಲ್ಲವೇ ದಯಾಮರಣಕ್ಕೆ ಅನುಮತಿ ನೀಡಬೇಕು ಎಂದು ಮನವಿ ಸಲ್ಲಿಸಲಾಗುವುದು’ ಎಂದರು.

‘ಒಂದು ವೇಳೆ ರಾಷ್ಟ್ರಪತಿಯೂ ನಮ್ಮ ಮನವಿಗೆ ಸ್ಪಂದಿಸದಿದ್ದರೆ, ದೆಹಲಿಯ ಜಂತರ್ ಮಂತರ್‌ನಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡು ಅಲ್ಲೇ ಪ್ರಾಣ ತ್ಯಾಗ ಮಾಡುತ್ತೇವೆ’ ಎಂದು ಹೇಳಿದರು.

ಮಠದ ಆವರಣದಿಂದ ಮೆರವಣಿಗೆ ಮೂಲಕ ರೈಲು ನಿಲ್ದಾಣಕ್ಕೆ ಬಂದ ರೈತರು, ನಂತರ ದೆಹಲಿಗೆ ಪ್ರಯಾಣ ಬೆಳೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.