ADVERTISEMENT

ಧರ್ಮ-ಸಂಸ್ಕೃತಿಯ ಸ್ಪರ್ಶ ಅಗತ್ಯ

​ಪ್ರಜಾವಾಣಿ ವಾರ್ತೆ
Published 9 ಜುಲೈ 2012, 5:45 IST
Last Updated 9 ಜುಲೈ 2012, 5:45 IST

ಹುಬ್ಬಳ್ಳಿ:  `ವಾಣಿಜ್ಯ ಮನೋಭಾವದಲ್ಲಿ ಬದುಕುತ್ತಿರುವ ಜನರಿಗೆ ಧರ್ಮ, ನೀತಿ, ಸಂಸ್ಕೃತಿ ಹಾಗೂ ಸಜ್ಜನಿಕೆಯ ಸ್ಪರ್ಶ ಅಗತ್ಯವಾಗಿದೆ~ ಎಂದು ಅಪರ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

ಬಾಳೆಹೊನ್ನೂರಿನ ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಹುಬ್ಬಳ್ಳಿ ಘಟಕವು ನಗರದಲ್ಲಿ ಸ್ಥಾಪಿಸಲಿರುವ ವೇದ, ಜೋತಿಷ್ಯ ಮತ್ತು ಸಂಸ್ಕೃತ ಪಾಠಶಾಲೆಯ ಕಟ್ಟಡಕ್ಕೆ ಭಾನುವಾರ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

`ಮನುಷ್ಯ ಇಂದು ಎಲ್ಲವನ್ನೂ ಲಾಭದ ದೃಷ್ಟಿಯಲ್ಲಿ ನೋಡುತ್ತಿದ್ದಾನೆ. ಇದರಿಂದ ಸಾಮಾಜಿಕ ಮತ್ತು ಸಮುದಾಯದ ಹಿತ ಕಾಪಾಡಲು ಸಾಧ್ಯವಾಗುತ್ತಿಲ್ಲ. ನಿತ್ಯದ ಬದುಕಿನಲ್ಲಿ ಸಂಸ್ಕಾರವಂತರಾಗಲು ವೇದ, ಜೋತಿಷ್ಯ ಮತ್ತು ಸಂಸ್ಕೃತ ಪಾಠಶಾಲೆಯಂಥ ಸಂಸ್ಥೆಗಳು ಅಗತ್ಯ~ ಎಂದು ಅವರು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಬಾಳೆಹೊನ್ನೂರಿನ ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಶ್ರೀಗಳು ಆಶೀರ್ವಚನ ನೀಡಿ, ವಿಜ್ಞಾನ ಬೆಳೆದಾಗ ವೈಚಾರಿಕತೆಯ ಹೆಸರಿನಲ್ಲಿ ಭಾರತೀಯ ಧರ್ಮ-ಸಂಸ್ಕೃತಿ ಧಕ್ಕೆಯಾಗುವ ಕಾರ್ಯ ನಡೆಯಬಾರದು. ಸಮಾಜ, ಸಮುದಾಯದ ಹಿತಕ್ಕಾಗಿ ಮತ್ತು ಲೋಕಕಲ್ಯಾಣಕ್ಕಾಗಿ ಈ ಪಾಠಶಾಲೆ ಮಾರ್ಗದರ್ಶನ ನೀಡಬೇಕು ಎಂದರು.

ಪಾಠಶಾಲೆಯ ಮಾರ್ಗದರ್ಶಕ ಸೂಡಿ ಜುಕ್ತಿಹಿರೇಮಠದ ಡಾ.ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಸಂಸ್ಕೃತ ದೇವಭಾಷೆ. ಎಲ್ಲ ಭಾಷೆಗಳ ಮಾತೆಯಾದ ಸಂಸ್ಕೃತವನ್ನು ಅಧ್ಯಯನ ಮಾಡಿದರೆ ಭಾರತೀಯ ದಾರ್ಶನಿಕ ಜಗತ್ತಿನ ಸೂಕ್ಷ್ಮಗಳನ್ನು ಅರಿಯಬಹುದಾಗಿದೆ ಎಂದರು.

ಪಾಠಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಜಿ.ಎಂ. ಚಿಕ್ಕಮಠ, ಹಿರಿಯ ವಕೀಲ ಜಿ.ಆರ್.ಅಂದಾನಿಮಠ, ಹುಡಾ ಅಧ್ಯಕ್ಷ ಲಿಂಗರಾಜ ಪಾಟೀಲ ಮತ್ತಿತರರು ಮಾತನಾಡಿದರು. ಪಾಠಶಾಲೆಯ ಆಡಳಿತ ಮಂಡಳಿ ಕಾರ್ಯದರ್ಶಿ ಮಹದೇವಪ್ಪ ಕುಮಶಿ, ಧರ್ಮದರ್ಶಿಗಳಾದ ಡಾ.ಎನ್.ಎ.ಚರಂತಿಮಠ, ರವೀಂದ್ರ ವಸ್ತ್ರದ, ಎಸ್.ಎಸ್. ಪಾಟೀಲ ಅದರಗುಂಚಿ, ಬಸವರಾಜ ತೊರಗಲ್ಲಮಠ, ಐ.ಎಚ್.ಕಡ್ಲಿಮಟ್ಟಿ, ಎಸ್.ಸಿ.ಕುಂದಗೋಳಮಠ, ಎಚ್. ಎಸ್. ರೂಗಿ, ಜಗದೀಶ ಕೂಡಲಮಠ, ಎಸ್.ಕೆ.ಸವಡಿ, ಎಸ್.ಎಚ್.ಕುರುಡಗಿ, ಬಸವರಾಜ ಸುಳ್ಳದ, ಶಿಲ್ಪಾ ಚಂದ್ರಶೇಖರ ಮುದಗಲ್ಲ, ಸುವರ್ಣ ಪುರಾಣಿಕಮಠ ಉಪಸ್ಥಿತರಿದ್ದರು.ಡಾ.ಎನ್.ಎ. ಚರಂತಿಮಠ ಸ್ವಾಗತಿಸಿದರು. ಗದಗಯ್ಯ ಹಿರೇಮಠ (ಜೀವಿ) ನಿರೂಪಿಸಿದರು.

ಸಂಸ್ಕೃತ ಪಾಠಶಾಲೆ: ಅನುದಾನಕ್ಕೆ ಆಗ್ರಹ
ಹುಬ್ಬಳ್ಳಿ: `
ರಾಜ್ಯದ ಎಲ್ಲ ಸಂಸ್ಕೃತ ಪಾಠಶಾಲೆಗಳಿಗೆ ಸರಕಾರ ಅನುದಾನ ನೀಡಬೇಕು~ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಶ್ರೀಗಳು ಆಗ್ರಹಿಸಿದರು.
`ರಾಜ್ಯ ಸರಕಾರದ ಸಂಸ್ಕೃತ ವಿವಿ ವ್ಯಾಪ್ತಿಗೆ ಎಲ್ಲ ಸಂಸ್ಕೃತ ಪಾಠಶಾಲೆಗಳನ್ನು ಸೇರಿಸಬೇಕು, ಈ ಮೂಲಕ ಅಧ್ಯಾತ್ಮ  ಕ್ಷೇತ್ರದ ಪುನರುತ್ಥಾನ ಮಾಡಲು ಮುಂದಾಗಬೇಕು~ ಎಂದು ಅವರು ಹೇಳಿದರು.

`ಆರೋಗ್ಯಪೂರ್ಣ ಸಮಾಜದ ನಿರ್ಮಾಣ ಎಲ್ಲ ಧರ್ಮಗಳ ಮೂಲ ಆಶಯ. ವೀರಶೈವ ಸಿದ್ಧಾಂತದ ಬಹುಪಾಲು ಸಂಸ್ಕೃತ ಭಾಷೆಯಲ್ಲಿವೆ. ಈ ಜನಪರ ಆಲೋಚನೆಗಳು ಜನಸಾಮಾನ್ಯರಿಗೆ ತಿಳಿಯಬೇಕಾಗಿದೆ. ವಿಜ್ಞಾನ, ಬಾಹ್ಯಾಕಾಶ ವಿಜ್ಞಾನ, ಗಣಿತ ಮತ್ತಿತರ ಕ್ಷೇತ್ರಗಳ ಸೂಕ್ಷ್ಮ ವಿಚಾರಗಳೆಲ್ಲವೂ ಸಂಸ್ಕೃತ ಜನ್ಯವಾಗಿರುವುದರಿಂದ ಆ ಭಾಷೆಯ ಅಧ್ಯಯನದ ಅವಶ್ಯಕತೆ ಇದೆ~ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT