ADVERTISEMENT

ಧಾರವಾಡ ಜಿ.ಪಂ: ಗದ್ದುಗೆ ಏರಿದ ಬಿಜೆಪಿ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2011, 7:00 IST
Last Updated 1 ಫೆಬ್ರುವರಿ 2011, 7:00 IST

ಧಾರವಾಡ: ಜಿಲ್ಲಾ ಪಂಚಾಯಿತಿ ಮೊದಲನೇ ಅವಧಿಗೆ (20 ತಿಂಗಳ) ಅಧ್ಯಕ್ಷರಾಗಿ ನವಲಗುಂದ ತಾಲ್ಲೂಕಿನ ಮೊರಬ ಕ್ಷೇತ್ರದ ಅಡಿವೆಪ್ಪ ಮಹಾದೇವಪ್ಪ ಮನಮಿ ಹಾಗೂ ಉಪಾಧ್ಯಕ್ಷರಾಗಿ ಕುಂದಗೋಳ ತಾಲ್ಲೂಕಿನ ಯಲಿವಾಳ ಕ್ಷೇತ್ರದ ಮಮತಾಜಬಿ ಹಜರೇಸಾಬ್ ನದಾಫ್ ಅವಿರೋಧವಾಗಿ ಆಯ್ಕೆಯಾದರು.

ಜಿಲ್ಲಾ ಪಂಚಾಯಿತಿಯಲ್ಲಿ ಪ್ರಥಮ ಬಾರಿಗೆ ಅಧಿಕಾರದ ಗದ್ದುಗೆಗೇರಿದ ಬಿಜೆಪಿ, ಯಾವುದೇ ಅಸಮಾಧಾನ, ಭಿನ್ನಾಭಿಪ್ರಾಯವಿಲ್ಲದೆ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಆಯ್ಕೆ ಮಾಡಿದೆ. ಅಧ್ಯಕ್ಷ ಸ್ಥಾನವನ್ನು ಸಾಮಾನ್ಯ ವರ್ಗಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಹಿಂದುಳಿದ ಅ ವರ್ಗದ ಮಹಿಳೆಗೆ ಮೀಸಲಾಗಿತ್ತು.

ಅಧ್ಯಕ್ಷ ಹುದ್ದೆಯ ಆಕಾಂಕ್ಷಿಗಳು ಹೆಚ್ಚಿದ್ದರೂ, ಸಚಿವ ಜಗದೀಶ ಶೆಟ್ಟರ ಹಾಗೂ ಸಂಸದ ಪ್ರಹ್ಲಾದ ಜೋಶಿ ಎಲ್ಲರನ್ನೂ ಸಮಾಧಾನ ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಸೋಮವಾರ ನಡೆದ ಚುನಾವಣೆಯಲ್ಲಿ, ಅಧ್ಯಕ್ಷ ಸ್ಥಾನಕ್ಕೆ ಅಡಿವೆಪ್ಪ ಮನಮಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮಮತಾಜಬಿ ನದಾಫ್ ತಲಾ ಎರಡೆರಡು ನಾಮಪತ್ರಗಳನ್ನು ಸಲ್ಲಿಸಿದ್ದರು. ಅಧ್ಯಕ ಸ್ಥಾನದ ನಾಮಪತ್ರಕ್ಕೆ ಕೋಳಿವಾಡ ಕ್ಷೇತ್ರದ ಮಹಾಬಳೇಶ್ವರ ಅಣ್ಣಿಗೇರಿ, ಮಿಶ್ರಿಕೋಟಿ ಕ್ಷೇತ್ರದ ವೈ.ಬಿ.ದಾಸನಕೊಪ್ಪ ಮತ್ತು ಉಪಾಧ್ಯಕ್ಷ ಸ್ಥಾನದ ನಾಮಪತ್ರಕ್ಕೆ ನರೇಂದ್ರ ಕ್ಷೇತ್ರದ ಪ್ರೇಮಾ ಕೊಮಾರದೇಸಾಯಿ ಹಾಗೂ ತಬಕದ ಹೊನ್ನಿಹಳ್ಳಿಯ ಬಸವರಾಜ ಕರಡಿಗುಡ್ಡ ಸೂಚಕರಾಗಿದ್ದರು.

ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಅವಿರೋಧ ಆಯ್ಕೆಯನ್ನು ಪ್ರಾದೇಶಿಕ ಆಯುಕ್ತ ಹಾಗೂ ಚುನಾವಣಾಧಿಕಾರಿ ಸಿ.ಎಂ.ಶಿರೋಳ ಘೋಷಿಸಿದರು. ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಶಿಖಾ, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಂ.ನೂರಮನ್ಸೂರ, ಜಿಪಂ ಉಪಕಾರ್ಯದರ್ಶಿ ಎಸ್.ಬಿ.ಮುಳ್ಳೊಳ್ಳಿ ಉಪಸ್ಥಿತರಿದ್ದರು. ಜಿಲ್ಲಾ ಪಂಚಾಯತಿಯ ಒಟ್ಟು 22 ಸದಸ್ಯರ ಪೈಕಿ ಬಿಜೆಪಿ 15 ಸದಸ್ಯರನ್ನು ಹೊಂದಿದೆ. ಕಾಂಗ್ರೆಸ್ ಆರು ಹಾಗೂ ಜೆಡಿಎಸ್ ಒಬ್ಬರು ಸದಸ್ಯರನ್ನು ಹೊಂದಿದೆ.

ಭ್ರಷ್ಟಾಚಾರ ರಹಿತ ಆಡಳಿತ: ‘ಭ್ರಷ್ಟಾಚಾರ ರಹಿತ ಆಡಳಿತ ನೀಡಲಾಗುವುದು. ಕುಡಿಯುವ ನೀರು, ಶಿಕ್ಷಣ, ಆರೋಗ್ಯ, ರಸ್ತೆ ಸುಧಾರಣೆಗೆ ಆದ್ಯತೆ ನೀಡಲಾಗುವುದು. ಪಕ್ಷದ ಜಿಲ್ಲೆಯ ನಾಯಕರ ಮಾರ್ಗದರ್ಶನದಲ್ಲಿ, ಎಲ್ಲ ಸದಸ್ಯರ ಜೊತೆಗೂಡಿ ಕೆಲಸ ಮಾಡುತ್ತೇನೆ. ಜಿಲ್ಲೆಯನ್ನು ಅಭಿವೃದ್ಧಿ ಪಥದಲ್ಲಿ ತೆಗೆದುಕೊಂಡು ಹೋಗಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಅಧ್ಯಕ್ಷ ಅಡಿವೆಪ್ಪ ಮನಮಿ ಆಯ್ಕೆ ನಂತರ ಪತ್ರಕರ್ತರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.