ADVERTISEMENT

ಧಾರವಾಡ ಜಿಪಂ ಸಾಮಾನ್ಯ ಸಭೆ:ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2012, 5:10 IST
Last Updated 20 ಮಾರ್ಚ್ 2012, 5:10 IST

ಧಾರವಾಡ: ಸಭೆಯಲ್ಲಿ ಚರ್ಚಿಸಿದ ವಿಷಯವನ್ನು ಅನುಸರಣಾ ವರದಿಯಲ್ಲಿ ಕಾಣಿಸದಿರುವ ಬಗ್ಗೆ ಸೋಮವಾರ ನಡೆದ ಜಿಲ್ಲಾ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಗಂಭೀರ ಚರ್ಚೆಯಾಗಿ ಇಬ್ಬರು ಸದಸ್ಯರು ಅಧ್ಯಕ್ಷರ ಎದುರು ಧರಣಿ ನಡೆಸಿದ ಪ್ರಸಂಗ ನಡೆಯಿತು.

ಸಭೆ ಆರಂಭವಾಗುತ್ತಿದ್ದಂತೆ ಜೆಡಿಎಸ್ ಸದಸ್ಯ ಅಮೃತ ದೇಸಾಯಿ, ಕಳೆದ ಜನೆವರಿಯಲ್ಲಿ ನಡೆದ ಸಾಂಆನ್ಯ ಸಭೆಯಲ್ಲಿ ಸಭೆಯ ನಡುವಳಿಕೆ ಮೇಲೆ ತೆಗೆದುಕೊಂಡ ಅನುಸರಣಾ ವರದಿಯನ್ನು ಪರಿಶೀಲಿಸುವುದಾಗಿ ತಿಳಿಸಲಾಗಿದೆ. ಆದರೆ ಅನುಸರಣಾ ವರದಿಯಲ್ಲಿ ವಿಷಯ ಸೇರಿಲ್ಲ.

ಜಿಪಂ ನೂತನ ಸಭಾಭವನದ ಒಳಾಂಗಣ ವಿನ್ಯಾಸ ಹಾಗೂ ಪೀಠೋಪಕರಣ ಅಳವಡಿಕೆಗೆ ಸಂಬಂಧಿಸಿದಂತೆ ಅವ್ಯವಹಾರ ನಡೆದಿರುವ ಆರೋಪವಿದೆ.ಇಂಥ ಗಂಭೀರ ವಿಷಯವನ್ನು ಅನುಸರಣಾ ವರದಿಯಲ್ಲಿ ಕೈಬಿಡುವ ಮೂಲಕ ಸದಸ್ಯರನ್ನು ಕತ್ತಲಲ್ಲಿಡುವ ತಂತ್ರ ನಡೆದಿದೆ ಎಂದು ಆರೋಪಿಸಿದರು.

ಕರ್ತವ್ಯಲೋಪ ಎಸಗುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಅಧ್ಯಕ್ಷರ ಪೀಠದ ಎದುರು ಧರಣಿಗೆ ಮುಂದಾದರು. ಕಾಂಗ್ರೆಸ್ ಪಕ್ಷದ ಸದಸ್ಯೆ ಕಸ್ತೂರಿ ಅಷ್ಟಗಿ ಇದಕ್ಕೆ ದನಿಗೂಡಿಸಿ ಧರಣಿ ಕುಳಿತರು. ಮತ್ತೊಬ್ಬ ಸದಸ್ಯ ಬಿ.ವೈ.ದಾಸನಕೊಪ್ಪ ಕಠಿಣ ಕ್ರಮಕ್ಕೆ ಆಗ್ರಹಿಸಿದರು.

ಮುಜುಗರಕ್ಕೊಳಗಾದಂತೆ ಕಂಡುಬಂದ ಅಧ್ಯಕ್ಷ ಅಡಿವೆಪ್ಪ ಮನಮಿ ಮತ್ತು ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಪಿ.ಎ.ಮೇಘಣ್ಣವರ ಧರಣಿ ಹಿಂತೆಗೆದು ಕೊಳ್ಳುವಂತೆ ಮಾಡಿದ ಮನವಿ ಪ್ರಯೋಜನವಾಗಲಿಲ್ಲ. ಸದಸ್ಯರು ಕ್ರಮ ತೆಗೆದುಕೊಳ್ಳಲೇಬೇಕು ಎಂದು ಪಟ್ಟು ಹಿಡಿದರು.

ಸಂಬಂಧಿಸಿದ ಅಧಿಕಾರಿಗಳಿಗೆ ನೋಟೀಸು ನೀಡಿ, ಈ ಕುರಿತು ತನಿಖೆಗೆ ಸಮಿತಿ ರಚನೆ ಮಾಡುಲು ನಿರ್ಧರಿಸಿದ ನಂತರ ಧರಣಿ ಹಿಂದಕ್ಕೆ ಪಡೆಯಲಾಯಿತು.

ಧರಣಿ ನಂತರ ಕಸ್ತೂರಿ ಅಷ್ಟಗಿ ಅವರು ಜಿಪಂ ಸಹಾಯಕ ಎಂಜನಿಯರಾದ ವಿಜಯ ಹಾಗೂ ಮುಳಗುಂದಮಠ ಅವರನ್ನು ಅಮಾನತು ಮಾಡಲಾ ಗಿತ್ತು. ಆದರೆ ಕೆಲವೇ ದಿನಗಳಲ್ಲಿ ಅವರನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಂಡಿದ್ದು ಕಾನೂನು ಪ್ರಕಾರ ಸರಿಯಾಗಿದೆಯೇ ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಸಭೆಯಲ್ಲಿ ಕಾವೇರಿದ ಚರ್ಚೆ ನಡೆಯಿತು.

ಸಿಇಒ ಮೇಘಣ್ಣವರ ಮಾತನಾಡಿ, ಹಳೆ ತೇಗೂರು ಪೈಪ್‌ಲೈನ್ ಅಳವಡಿಕೆ ಕಾಮಗಾರಿಯಲ್ಲಿ ನ್ಯೂನ್ಯತೆ ಕಂಡು ಅವರನ್ನು ಅಮಾನತುಗೊಳಿಸಲಾಗಿತ್ತು. ಬಳಿಕ ಅವರಿಂದ ಸ್ಪಷ್ಟೀಕರಣ ಪಡೆದು ಪುನಃ ನೇಮಕ ಮಾಡಿಕೊಳ್ಳಲಾಗಿದೆ ಎಂದು ಹೇಳುತ್ತಿದ್ದಂತೆ, ಹಾರಿಕೆ ಉತ್ತರ ನೀಡುವುದು ಸರಿಯಲ್ಲ.

ಅವರ ಪುನರ್ ನೇಮಕದಲ್ಲಿ `ಒಳ ವ್ಯವಹಾರ~ ನಡೆದಿರುವ ಶಂಕೆ ವ್ಯಕ್ತಪಡಿಸಿದರು. ಅಮೃತ ದೇಸಾಯಿ ಮಧ್ಯ ಪ್ರವೇಶಿಸಿ, ಈ ವಿಷಯವನ್ನು ಸಹ ಈಗಾಗಲೇರಚಿಸಲು ನಿರ್ಧರಿಸಿರುವ ಸಮಿತಿಯಿಂದ ತನಿಖೆಗೊಳಪಡಿಸಬೇಕು ಎಂದರು. ಅಧ್ಯಕ್ಷ ಅಡಿವೆಪ್ಪ ಮನಮಿ ಇದಕ್ಕೆ ಒಪ್ಪಿಗೆ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.