ADVERTISEMENT

ಧಾರಾನಗರಿಯಲ್ಲಿ ತಂಪು ತಂದ ಮಳೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2012, 6:15 IST
Last Updated 17 ಜುಲೈ 2012, 6:15 IST

ಧಾರವಾಡ: ಬಿಸಿಲಿನ ತಾಪದಿಂದ ಕಂಗೆಟ್ಟಿದ್ದ ಜನತೆಗೆ ಸೋಮವಾರ ಸುರಿದ ಮಳೆ ತಂಪೆರೆದಿದೆ. ಸೋಮವಾರ ಬೆಳಿಗ್ಗೆಯಿಂದಲೇ ಬಿಸಿಲಿನ ಬೇಗೆ ಬಿರುಸುಗೊಂಡಿತ್ತು. ಮಳೆಗಾಲದಲ್ಲೂ ಇಂಥ ಬಿಸಿಲು ಚುರುಗುಡುತ್ತಿದೆ ಎಂದು ಜನ ಅಂದುಕೊಳ್ಳುವಷ್ಟರಲ್ಲಿ ಸಂಜೆ ಹೊತ್ತಿಗೆ ತಂಪು ಗಾಳಿಯೊಂದಿಗೆ ಮೋಡಗಳು ತಾಸಿಗೂ ಹೆಚ್ಚು ಕಾಲ ನೀರನ್ನು ಸುರಿಸಿದವು.

ಜೋರಾಗಿ ಮಳೆ ಸುರಿಯುತ್ತದೆ ಎಂದು ಕೆಲವರು ಮನೆ ಸೇರಿದರೆ, ಬಹಳ ದಿನಗಳ ಮೇಲೆ ಮಳೆ ಸುರಿಯುತ್ತಿದೆ ಎಂದು ಮಳೆಯನ್ನೇ ನೋಡುತ್ತಾ ಅನೇಕರು ನಿಂತರು. ಸರಿಯಾಗಿ 4 ಗಂಟೆಯಿಂದ ನಗರದಲ್ಲಿ ಆರಂಭವಾದ ಮಳೆ 5 ಗಂಟೆಯವರೆಗೂ ಸುರಿಯಿತು. ನಂತರ ತಂಪು ವಾತಾವರಣದೊಂದಿಗೆ ಜಡಿ ಮಳೆ ಹತ್ತಿಕೊಂಡಿತು. ಕೆಲವರು ಮಳೆಯಲ್ಲಿಯೇ ದ್ವಿಚಕ್ರ ವಾಹನದ ಮೇಲೆ ಸಂಚರಿಸಿದರು.

ರಸ್ತೆಗಳಲ್ಲಿ ನೀರು ಹರಿಯಿತಾದರೂ ವಾಹನ ಸಂಚಾರಕ್ಕೇನೂ ಅಡೆತಡೆ ಆಗಲಿಲ್ಲ. ಅನೇಕ ಶಾಲಾ ವಿದ್ಯಾರ್ಥಿಗಳು ಹುರುಪಿನಿಂದಲೇ ಮಳೆಯಲ್ಲಿಯೇ ನೆನೆದುಕೊಂಡು ಹೋದರು. ನಗರದ ಜೆಎಸ್‌ಎಸ್ ಮೈದಾನದಲ್ಲಂತೂ ನೀರು ತುಂಬಿಕೊಂಡು ಕೆರೆಯಂತೆ ಭಾವಿಸುತ್ತಿತ್ತು. ಆದರೆ ಮಳೆಯಿಂದ ಯಾವುದೇ ಅನಾಹುತಗಳು ಸಂಭವಿಸಿಲ್ಲ. ಜಿಲ್ಲೆಯಲ್ಲಿ 31.8 ಮಿ.ಮೀ. ಮಳೆಯಾದ ಬಗ್ಗೆ ವರದಿಯಾಗಿದೆ ಎಂದು ಹವಾಮಾನ ಇಲಾಖೆ `ಪ್ರಜಾವಾಣಿಗೆ~ ತಿಳಿಸಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.