ಹುಬ್ಬಳ್ಳಿ: ನವಲಗುಂದ ಪಟ್ಟಣದಲ್ಲಿ ಗುರುವಾರ ನಡೆದ ರೈತ ಸಮಾವೇಶದಲ್ಲಿ ಸ್ಥಳೀಯ ನಾಯಕರು ಕಾಣಿಸಲಿಲ್ಲ. ವಾರದ ಹಿಂದೆ ನವಲಗುಂದ ಮತ್ತು ಯಮನೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಬಂಧನಕೊಳ್ಳಗಾಗಿದ್ದ ಸ್ಥಳೀಯ ನಾಯಕರು, ರೈತರು ಇನ್ನೂ ಜೈಲಿನಲ್ಲಿರುವುದರಿಂದ ಅವರ ಕೊರತೆ ಎದ್ದು ಕಾಣಿಸುತ್ತಿತ್ತು. ಆದರೆ, ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ರೈತ ಮುಖಂಡರು ಈ ಕೊರತೆ ಕಾಡದ ರೀತಿಯಲ್ಲಿ ಹೋರಾಟ ಸಂಘಟಿಸಿದರು. ಸರ್ಕಾರ ಮತ್ತು ಪೊಲೀಸರ ವಿರುದ್ಧ ವಾಗ್ದಾಳಿ ನಡೆಸಿದರು.
ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಚಾಮರಸ ಮಾಲಿಪಾಟೀಲ ಮಾತನಾಡಿ, ‘ಪೊಲೀಸರು ಮಹಿಳೆಯರನ್ನು ಹೊಡೆದದ್ದಕ್ಕಿಂತ ಹೆಚ್ಚಾಗಿ ಅವರನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದು, ಅವರಿಗೆ ನೋವು ತಂದಿದೆ’ ಎಂದರು. ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು’ ಎಂದು ಅವರು ಒತ್ತಾಯಿಸಿದರು.
ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯ ವರಿಷ್ಠ ಮತ್ತು ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಮಾತನಾಡಿ, ‘ಐಎಎಸ್ ಅಧಿಕಾರಿ ಡಿ.ಕೆ. ರವಿ ಸತ್ತರೆ ಜನಪ್ರತಿನಿಧಿಗಳು ಕಣ್ಣೀರು ಸುರಿಸುತ್ತಾರೆ. ಆದರೆ, ರೈತರು ಸತ್ತರೆ ಮಾತನಾಡುವುದಿಲ್ಲ. ರೈತರೂ ಕೂಡ ಐಎಎಸ್ (ಇಂಡಿಯನ್ ಅಗ್ರಿಕಲ್ಚರ್ ಸರ್ವಿಸ್) ಮಾಡಿರುತ್ತಾರೆ. ಯಾವ ಉನ್ನತ ಅಧಿಕಾರಿಗಿಂತ ರೈತರು ಕಡಿಮೆ ಅಲ್ಲ’ ಎಂದರು.
ರೈತ ಸಂಘದ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಕೆ.ಟಿ. ಗಂಗಾಧರ ಮಾತನಾಡಿ, ‘ನೀರಿಗಾಗಿ ಒಂದು ವರ್ಷದಿಂದ ಹೋರಾಟ ನಡೆಸುತ್ತಿದ್ದೇವೆ. ಪ್ರಪಂಚದ ಯಾವ ದೇಶದಲ್ಲಿಯೂ ನೀರಿಗಾಗಿ ಇಷ್ಟು ದೀರ್ಘ ಹೋರಾಟ ನಡೆದಿಲ್ಲ. ಆದರೂ ಸರ್ಕಾರದ ಗಮನಕ್ಕೆ ಇದು ಬರದಿರುವುದು ವಿಷಾದನೀಯ’ ಎಂದರು.
‘ಪೊಲೀಸರು ನಮ್ಮನ್ನು ಹಿಂಬಾಲಿಸುತ್ತಿದ್ದಾರೆ. ದರೋಡೆಕೋರರಂತೆ ಕಾಣುತ್ತಿದ್ದಾರೆ. ಮಫ್ತಿಯಲ್ಲಿ ಗಸ್ತು ತಿರುಗುತ್ತಿದ್ದಾರೆ. ಪೊಲೀಸರ ವರ್ತನೆ ನೋವು ತಂದಿದೆ’ ಎಂದು ಅವರು ಹೇಳಿದರು.
‘ಮೊದಲು ಶಾಂತಿಯುತವಾಗಿ ಹೋರಾಟ ನಡೆಯುತ್ತಿತ್ತು. ಆದರೆ, ಇತ್ತೀಚೆಗೆ ಈ ಹೋರಾಟವನ್ನು ರೈತರು ಮತ್ತು ಪೊಲೀಸರ ನಡುವಿನ ಹೋರಾಟ ಎಂಬಂತೆ ಬಿಂಬಿಸಲಾಗುತ್ತಿದೆ. ಹೋರಾಟದ ಹಾದಿ ತಪ್ಪದಂತೆ ಎಚ್ಚರ ವಹಿಸಬೇಕು. ಸಂವಿಧಾನಬದ್ಧವಾಗಿ ಸಮಸ್ಯೆ ಪರಿಹರಿಸಿಕೊಳ್ಳಬೇಕು. ಆದರೆ, ಇಲ್ಲಿನ ಜನಪ್ರತಿನಿಧಿಗಳಿಗೆ ಚುನಾವಣೆ ಸಂದರ್ಭದಲ್ಲಿ ಪಾಠ ಕಲಿಸಬೇಕು’ಎಂದರು.
ರೈತ ಸಂಘದ ವಿವಿಧ ಜಿಲ್ಲಾ ಘಟಕದ ಅಧ್ಯಕ್ಷರು ಮಾತನಾಡಿದರು. ರಾಮಣ್ಣ ಕೆಂಚಳ್ಳಿ, ಹಾವೇರಿಯ ಮಂಜುಳಾ, ಬಡಗಲಪುರ ನಾಗೇಂದ್ರ, ಚಿತ್ರದುರ್ಗದ ಶಂಕರಪ್ಪ ಇತರರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಕರ್ನಾಟಕ ಮಹಿಳಾ ವೇದಿಕೆ, ಉತ್ತರ ಕರ್ನಾಟಕ ಪ್ರದೇಶ ರೈತ ಸಂಘ, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕ ಸೇರಿದಂತೆ ಹಲವು ಸಂಘಟನೆಗಳ ಸದಸ್ಯರು ನವಲಗುಂದಕ್ಕೆ ಬಂದು ಹೋರಾಟಕ್ಕೆ ಬೆಂಬಲ ನೀಡಿದರು.
ವ್ಯಾಪಾರಿಗಳ ನಿಟ್ಟುಸಿರು: ಪಟ್ಟಣದಲ್ಲಿ ಪೊಲೀಸ್ ಸರ್ಪಗಾವಲು ಇದ್ದರೂ, ವ್ಯಾಪಾರ – ವಹಿವಾಟು ನಡೆಸಲು ಅಡ್ಡಿ ಇರಲಿಲ್ಲ. ಮಾರುಕಟ್ಟೆ ಪ್ರದೇಶದಲ್ಲಿ ಪ್ರತಿಭಟನೆಯ ಕಾವು ಲವ–ಲೇಶವೂ ಇರಲಿಲ್ಲ. ಮದ್ಯದಂಗಡಿ ಹೊರತು ಪಡಿಸಿ ಹೋಟೆಲ್–ಅಂಗಡಿ ಮುಂಗಟ್ಟುಗಳು ತೆರೆದಿದ್ದವು. ಸರಣಿ ಪ್ರತಿಭಟನೆಗಳಿಂದ ನಷ್ಟಕ್ಕೀಡಾಗಿದ್ದ ವ್ಯಾಪಾರಿಗಳು ಗುರುವಾರ ನಿಟ್ಟುಸಿರು ಬಿಟ್ಟರು. ವಿವಿಧ ಭಾಗಗಳಿಂದ ಬಂದಿದ್ದ ರೈತರು, ಹೋರಾಟಗಾರರು ಹೋಟೆಲ್ಗಳಿಗೆ ಲಗ್ಗೆ ಇಟ್ಟು ಮಂಡಕ್ಕಿ, ಮಿರ್ಚಿ, ಉಪ್ಪಿಟ್ಟು ಸವಿದರು. ರೈತ ಸಂಘದ ವತಿಯಿಂದಲೂ ರೈತರು ಮತ್ತು ಸಾರ್ವಜನಿಕರಿಗೆ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.
ರೈತರು ಚಿರತೆಗಿಂತ ಕ್ರೂರಿಗಳಾ ?
‘ಕಾಡಿನಿಂದ ಚಿರತೆ ತಪ್ಪಿಸಿಕೊಂಡು ಬೆಂಗಳೂರಿಗೆ ಬಂದರೆ, ಅದಕ್ಕೆ ಉಪಚಾರ ನೀಡಿ, ಆಹಾರ ನೀಡಿ ಅರಣ್ಯ ಅಥವಾ ಮೃಗಾಲಯಕ್ಕೆ ಬಿಟ್ಟು ಬರುತ್ತೀರಿ. ಆದರೆ, ನೀರು ಕೇಳಿಕೊಂಡು ರೈತರು ಬಂದರೆ ಹೊಡೆದು ಕಳಿಸುತ್ತೀರಿ. ರೈತರು ಚಿರತೆಗಿಂತ ಕ್ರೂರಿಗಳೇ? ಎಂದು ಕೆ.ಎಸ್. ಪುಟ್ಟಣ್ಣಯ್ಯ ಖಾರವಾಗಿ ಪ್ರಶ್ನಿಸಿದರು.
ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು
* ರೈತರು, ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಖಂಡನೆ
* ಅಶಾಂತಿಗೆ, ಗಲಭೆಗೆ ಸರ್ಕಾರದ ವೈಫಲ್ಯವೇ ಕಾರಣ
* ಹೋರಾಟಗಾರರ ವಿರುದ್ಧದ ಮೊಕದ್ದಮೆ ವಾಪಸ್ ಪಡೆಯಬೇಕು
* ಪೊಲೀಸ್ ದೌರ್ಜನ್ಯ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ
* ಶಾಂತಿಯುತವಾಗಿ ಹೋರಾಟ ಮುಂದುವರಿಸಲು ನಿರ್ಧಾರ
* ಪ್ರಧಾನಮಂತ್ರಿ ಮಧ್ಯಪ್ರವೇಶಕ್ಕೆ ಒತ್ತಾಯಿಸಲು ತೀರ್ಮಾನ
* ಸಂಸದರು ನಿರ್ಲಕ್ಷಿಸಿದರೆ ರಾಜೀನಾಮೆಗೆ ಒತ್ತಾಯಿಸಬೇಕು. ಈ ನಿಟ್ಟಿನಲ್ಲಿ ಚಳವಳಿ ರೂಪಿಸಬೇಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.