ADVERTISEMENT

ನಾಗರಿಕರ ಮನಸೆಳೆವ ರಸ್ತೆಗಳು

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2012, 6:10 IST
Last Updated 18 ಮಾರ್ಚ್ 2012, 6:10 IST

ಹೊನ್ನಾಳಿ ಪಟ್ಟಣ ಪಂಚಾಯ್ತಿ ನಾಗರಿಕರಿಗೆ ಮೂಲ ಸೌಲಭ್ಯ ಕಲ್ಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಆರಂಭಿಸಿದೆ. ರಸ್ತೆ, ಕುಡಿಯುವ ನೀರು ಪೂರೈಕೆ, ಸ್ವಚ್ಛತೆ ಸೇರಿದಂತೆ ಎಲ್ಲಾ ಮೂಲ ಸೌಲಭ್ಯಗಳನ್ನು ಅಚ್ಚುಕಟ್ಟಾಗಿ ನೀಡುತ್ತಿದೆ.

ಪಟ್ಟಣದ ಬಹುತೇಕ ಎಲ್ಲಾ ವಾರ್ಡ್‌ಗಳ ರಸ್ತೆಗಳು ಡಾಂಬರೀಕರಣಗೊಳ್ಳುತ್ತಿರುವುದೇ ಇದಕ್ಕೆ ಸಾಕ್ಷಿ. ಕಳೆದ ಒಂದು ವರ್ಷಕ್ಕಿಂತಲೂ ಅಧಿಕ ಕಾಲದಿಂದಲೂ ರಸ್ತೆಗಳು ಹಾಳಾಗಿದ್ದವು. ಆದರೆ, ಅವುಗಳ ದುರಸ್ತಿಗೆ ಪ.ಪಂ. ಮುಂದಾಗಿರಲಿಲ್ಲ. ಒಳಚರಂಡಿ ಯೋಜನೆಗೆ ರಾಜ್ಯ ಸರ್ಕಾರ ರೂ 30 ಕೋಟಿ ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಅದು ಅನುಷ್ಠಾನಗೊಂಡ ಬಳಿಕ ರಸ್ತೆ ದುರಸ್ತಿ ಮಾಡಿದರಾಯಿತು ಎಂಬುದು ಪ.ಪಂ. ನಿಲುವಾಗಿತ್ತು. ಆದರೆ, ಕಾರಣಾಂತರಗಳಿಂದ ಒಳಚರಂಡಿ ಟೆಂಡರ್ ಪ್ರಕ್ರಿಯೆ ವಿಳಂಬವಾದ ಹಿನ್ನೆಲೆಯಲ್ಲಿ ಪ.ಪಂ. ವಿವಿಧ ವಾರ್ಡ್‌ಗಳ ರಸ್ತೆಗಳು ಡಾಂಬರೀಕರಣಕ್ಕೆ ಮುಂದಾಯಿತು.

ಪಟ್ಟಣದ ಅನೇಕ ಸಂಘಟನೆಗಳು, ಸಾರ್ವಜನಿಕರು ರಸ್ತೆಗಳು ದುರಸ್ತಿಗೊಳ್ಳದ ಕಾರಣ ಪ.ಪಂ.ಗೆ ಹಿಡಿಶಾಪ ಹಾಕುತ್ತಿದ್ದರು. ಆದರೆ, ಇದೀಗ ರಸ್ತೆಗಳು ಅಭಿವೃದ್ಧಿಗೊಳ್ಳುತ್ತಿರುವುದರಿಂದ ಜನತೆ ಹರ್ಷಗೊಂಡಿದ್ದಾರೆ.
`ಪಟ್ಟಣದ 10 ವಾರ್ಡ್‌ಗಳಲ್ಲಿ ಇದೀಗ ರಸ್ತೆಗಳ ಡಾಂಬರೀಕರಣ ಕಾಮಗಾರಿ ಪ್ರಗತಿಯಲ್ಲಿದ್ದು, ಪ್ರತಿ ವಾರ್ಡ್‌ಗೆ ರೂ  6-8 ಲಕ್ಷ ಖರ್ಚು ಮಾಡಲಾಗುತ್ತಿದೆ. ಎಸ್‌ಎಸ್‌ಪಿ, ಎಸ್‌ಇಪಿ, ಮುಖ್ಯಮಂತ್ರಿ ವಿಶೇಷ ನಿಧಿ ಸೇರಿದಂತೆ ವಿವಿಧ ಮೂಲಗಳ ಹಣ ವ್ಯಯಿಸಲಾಗುತ್ತಿದೆ~ ಎಂದು ಪ.ಪಂ. ಮುಖ್ಯಾಧಿಕಾರಿ ಟಿ.ಎಲ್. ಮಂಜುನಾಥ್ ಹೇಳುತ್ತಾರೆ.

`ಎಲ್ಲಾ ಸದಸ್ಯರು ಪ್ರತಿನಿಧಿಸುವ ವಾರ್ಡ್‌ಗಳಿಗೆ ಸಮಾನ ಆದ್ಯತೆ ನೀಡಲಾಗುತ್ತಿದೆ. ರಸ್ತೆ ಡಾಂಬರೀಕರಣದ ಜತೆ ಚರಂಡಿ ಕಾಮಗಾರಿಗಳನ್ನೂ ಅನುಷ್ಠಾನಗೊಳಿಸಲಾಗುತ್ತದೆ. ಈ ಎಲ್ಲಾ ಅಭಿವೃದ್ಧಿ ಕಾಮಗಾರಿಗಳಿಗೆ ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ಸರ್ಕಾರದಿಂದ ಸಾಕಷ್ಟು ಹಣಕಾಸಿನ ನೆರವು ದೊರಕಿಸುತ್ತಿದ್ದಾರೆ~ ಎಂದು ಪ.ಪಂ. ಅಧ್ಯಕ್ಷ ಚಾಟಿ ಶೇಖರಪ್ಪ ಹೇಳುತ್ತಾರೆ.ಅಭಿವೃದ್ಧಿ ಕಾಮಗಾರಿಗಳಿಗೆ ಪ.ಪಂ. ಸದಸ್ಯರು ನೀಡುತ್ತಿರುವ ನೆರವಿಗೆ ಕೃತಜ್ಞತೆ ಹೇಳುವುದನ್ನೂ ಅವರು ಮರೆಯುವುದಿಲ್ಲ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.