ಹುಬ್ಬಳ್ಳಿ: ‘ಜೈನ ಧರ್ಮೀಯರು ಶಾಂತಿ, ಸೌಹಾರ್ದ ಗುಣಗಳಿಂದ ಅನ್ಯ ಸಮಾಜದ ಎಲ್ಲ ಧರ್ಮಗಳಿಗೆ ಮಾದರಿಯಾಗಿದ್ದಾರೆ. ನಾಡಿಗೆ ಸಾಹಿತ್ಯ, ಆರ್ಥಿಕ, ಸಾಮಾಜಿಕ ಕ್ಷೇತ್ರಗಳಿಗೆ ಅನನ್ಯ ಕೊಡುಗೆ ನೀಡಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಅಭಿಪ್ರಾಯಪಟ್ಟರು.
ಹಳೆಹುಬ್ಬಳ್ಳಿಯ ಭಗವಾನ ಶ್ರೀ ಅನಂತನಾಥ ಜಿನಮಂದಿರದಲ್ಲಿ ಭಾನುವಾರ ಜೈನ ವಿದ್ಯಾರ್ಥಿ ನಿಲಯ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.‘ಜೈನ್ ಸಮಾಜ ನಿರ್ಮಿಸಲು ಉದ್ದೇಶಿಸಿರುವ ಉದ್ಯೋಗಸ್ಥ ಮಹಿಳೆಯರು ಮತ್ತು ವಿದ್ಯಾರ್ಥಿ ನಿಲಯ ನಿರ್ಮಾಣ ಕಾರ್ಯಕ್ಕೆ ಶಾಸಕರ ಅನುದಾನದಡಿಯಲ್ಲಿ ತಲಾ ಎರಡು ಕಂತುಗಳಲ್ಲಿ ರೂ. 5 ಲಕ್ಷ ನೆರವು ನೀಡಲಾಗುವುದು’ ಎಂದು ಭರವಸೆ ನೀಡಿದರು.
ಸರ್ಕಾರವು ಎಲ್ಲ ಸಮಾಜಗಳ ಅಭಿವೃದ್ಧಿಗೆ ಸಹಕಾರ ಒದಗಿಸುತ್ತಿದೆ ಎಂದು ದತ್ತಾ ಡೋರ್ಲೆ ಹೇಳಿದರು. ಡಾ. ತ್ರಿಶಲಾ ಪಾಟೀಲ ಮಾತನಾಡಿದರು. ಬಸದಿ ಸಮಿತಿಯ ಅಧ್ಯಕ್ಷ ಚಂದ್ರಕಾಂತ ಹೊಸಮನಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಮಹಾವೀರ ಎನ್. ಸೂಜಿ ಮತ್ತು ಧರ್ಮದರ್ಶಿ ಅಜಿತ್‌ನಾಥ ಮುತ್ತಗಿ ತಲಾ ಲಕ್ಷ ಹಾಗೂ ಕೀರಪ್ಪ ಹೋತಪೇಟಿ 50 ಸಾವಿರ ರೂಪಾಯಿಗಳನ್ನು ನಿರ್ಮಾಣ ಕಾರ್ಯಕ್ಕೆ ಸಹಾಯ ನೀಡುವುದಾಗಿ ಘೋಷಿಸಿದರು.
ಬಿ.ಟಿ. ರಾಜಮಾನೆ, ಸಾರಂಗ ಶಹಾ, ರಾಜೇಶ ಹರ್ದಿ, ಜಗತ್ಪಾಲ ಹೋತಪೇಟಿ ಇತರರಿದ್ದರು. ಸುಭಾಷ ಹೊಸಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಲ್ಲವಿ ಶಿರಗುಪ್ಪಿ ಪ್ರಾರ್ಥಿಸಿದರು. ತವನಪ್ಪ ಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.