ADVERTISEMENT

ನಾಯಕತ್ವದ ಗುಣ ಬೆಳೆಸಿಕೊಳ್ಳಿ: ಶೆಟ್ಟರ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2011, 5:35 IST
Last Updated 10 ಅಕ್ಟೋಬರ್ 2011, 5:35 IST

ಹುಬ್ಬಳ್ಳಿ: `ಸಾಮಾಜಿಕ ಕಾರ್ಯದಲ್ಲಿ ವಿದ್ಯಾರ್ಥಿನಿಯರು ತೊಡಗಿಕೊಳ್ಳಬೇಕು~ ಎಂದು ಜಗದೀಶ ಶೆಟ್ಟರ ಸಲಹೆ ನೀಡಿದರು.

ತಾರಿಹಾಳ ಬಳಿಯ ದಯಾನಂದ ವಿದ್ಯಾರಣ್ಯ ಭಾರತಿ ಆಂಗ್ಲ ಮಾಧ್ಯಮ ವಸತಿ ಶಾಲೆಯಲ್ಲಿ  ಭಾನುವಾರ ಏರ್ಪಡಿಸಿದ ಬೆಳಗಾವಿ ವಲಯ ಮಟ್ಟದ ಎನ್‌ಎಸ್‌ಎಸ್ ಬಾಲಕಿಯರ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಸ್ವಸಾಮರ್ಥ್ಯದಿಂದ ವಿದ್ಯಾರ್ಥಿನಿಯರು ಮುಂದೆ ಬರಬೇಕು. ಗುಲ್ಬರ್ಗದಲ್ಲಿ ಜಿಲ್ಲಾ ಪಂಚಾಯಿತಿಯ ಕಲಾಪಗಳಲ್ಲಿ ಭಾಗವಹಿಸಲು ತಮ್ಮ ಬದಲು ಪತಿಗೆ ಅವಕಾಶ ನೀಡಬೇಕೆಂದು ಸದಸ್ಯೆಯರು ಕೋರಿದ್ದರು. ಹೀಗೆ ಕೋರದೆ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು. ಇದಕ್ಕೆ ಎನ್‌ಎಸ್‌ಎಸ್ ಶಿಬಿರ ಸದವಕಾಶ ನೀಡುತ್ತದೆ~ ಎಂದು ಅವರು ಹೇಳಿದರು.

`ಗ್ರಾಮೀಣ ನೈರ್ಮಲ್ಯ ಕುರಿತು ಗಂಭೀರವಾಗಿ ಯೋಚಿಸಬೇಕಿದೆ. ಮುಖ್ಯವಾಗಿ ಬಯಲು ಶೌಚಾಲಯ ಗ್ರಾಮೀಣ ಭಾಗದಲ್ಲಿ ನಿರ್ಮೂಲನೆಗೊಳ್ಳಬೇಕಿದೆ. ಇದಕ್ಕಾಗಿ ಸರ್ಕಾರ ಸಹಾಯಧನ ನೀಡುತ್ತಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ಈ ಬಗ್ಗೆ ಎನ್‌ಎಸ್‌ಎಸ್ ವಿದ್ಯಾರ್ಥಿನಿಯರು ಅರಿವು ಮೂಡಿಸಬೇಕು~ ಎಂದು ಕಿವಿಮಾತು ಹೇಳಿದರು.

ಮುಖ್ಯ ಅತಿಥಿಯಾದ ಬಸವರಾಜ ಹೊರಟ್ಟಿ, ವಿದ್ಯಾರ್ಥಿನಿಯರು ಶಿಕ್ಷಣ ಪಡೆಯಬೇಕು. ಸಮಾಜ ಸೇವೆ ಹಾಗೂ ಸಹಬಾಳ್ವೆ ಮತ್ತು ಸಹಭಾಗಿತ್ವ ಬೆಳೆಸಿಕೊಂಡು ಸಂಸ್ಕೃತಿಯನ್ನು ರೂಢಿಸಿಕೊಳ್ಳಬೇಕು~ ಎಂದರು.

`ಅವಿಭಕ್ತ ಕುಟುಂಬಗಳು ನಾಶವಾಗುತ್ತಿವೆ. ಇದರಿಂದ ಸಂಬಂಧಗಳು ಸಂಕುಚಿತಗೊಳ್ಳುತ್ತಿವೆ. ಇದಕ್ಕಾಗಿ ವಿಶಾಲ ಮನೋಭಾವ ರೂಢಿಸಿಕೊಳ್ಳಬೇಕು~ ಎಂದರು.

ವಿಧಾನ ಪರಿಷತ್ ಸದಸ್ಯ ಮೋಹನ ಲಿಂಬಿಕಾಯಿ, ಗೋಪನಕೊಪ್ಪದ ಸರ್ಕಾರಿ ಪ್ರೌಢಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಎಸ್.ಬಿ. ಹಳ್ಯಾಳ, ಎಸ್‌ಬಿಸಿ ಉಪಾಧ್ಯಕ್ಷ ದತ್ತು ಉಣಕಲ್, ವಾರ್ತಾ ಮತ್ತು ಪ್ರಚಾರ ಇಲಾಖೆ ಸಹಾಯಕ ನಿರ್ದೇಶಕ ಪಿ.ಎಸ್. ಪರ್ವತಿ ಮೊದಲಾದವರು ಹಾಜರಿದ್ದರು. ಗೋಪುನಕೊಪ್ಪದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಂ.ಕೆ. ಬೆಳಗಲಿ ಅಧ್ಯಕ್ಷತೆ ವಹಿಸಿದ್ದರು. ಎನ್‌ಎಸ್‌ಎಸ್ ಶಿಬಿರಾಧಿಕಾರಿ ಎಫ್.ಬಿ. ಸೊರಟೂರ ಸ್ವಾಗತಿಸಿದರು. ಯು.ಎ. ಜವಳಿ ನಿರೂಪಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.