ADVERTISEMENT

`ನಾವೇ `ಸ್ಟಾರ್'ಗಳು;ಬಾಲಿವುಡ್ ಕರೆಸಲ್ಲ'

ಅಭ್ಯರ್ಥಿ ಆಯ್ಕೆಯ ಚಿಂತೆಯಲ್ಲಿ ಸಿಎಂ; ಪತಿ ಪರ ಪ್ರಚಾರದಲ್ಲಿ ಶಿಲ್ಪಾ ಶೆಟ್ಟರ್

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2013, 5:24 IST
Last Updated 5 ಏಪ್ರಿಲ್ 2013, 5:24 IST

ಹುಬ್ಬಳ್ಳಿ: `ನಮಗೆ ನಾವೇ `ಸ್ಟಾರ್'ಗಳು. ಹಾಲಿವುಡ್, ಬಾಲಿವುಡ್‌ನಿಂದ ನಾವು ಯಾರನ್ನೂ ಕರೆಸಲ್ಲ...'
ನೆತ್ತಿ ಸುಡುವ ಬಿಸಿಲಿನಲ್ಲಿ ಪತಿ, ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಪರ ಬಿರುಸಿನ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಶಿಲ್ಪಾ ಶೆಟ್ಟರ್ ಅವರ ಗಟ್ಟಿ ನಿರ್ಧಾರವಿದು!

ತಲೆಗೆ ಸೆರಗು ಸುತ್ತಿಕೊಂಡು, `ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಜಗದೀಶ ಶೆಟ್ಟರ್‌ಗೆ ಮತ ನೀಡಿ' ಎಂಬ ಕರಪತ್ರ ಹಿಡಿದು ಮಹಿಳಾ ದಂಡಿನ ಜೊತೆ ಕ್ಷೇತ್ರ ಸುತ್ತಾಟದಲ್ಲಿ ಬ್ಯುಸಿ ಆಗಿರುವ ಶಿಲ್ಪಾ, ಮತದಾರರೊಬ್ಬರ ಮನೆಯಲ್ಲಿ ತಂಬಿಗೆ ಎತ್ತಿ ಗಟ... ಗಟ... ನೀರು ಕುಡಿಯುತ್ತಲೇ ಒಂದೇ ಉಸಿರಿನಲ್ಲಿ ಹೀಗೆ ಹೇಳಿದರು.

ಅಭ್ಯರ್ಥಿಗಳ ಪಟ್ಟಿ ಆಖೈರುಗೊಳಿಸುವ ಸಂಬಂಧ ಮೂರು ದಿನಗಳಿಂದ ಪಕ್ಷದ ರಾಜ್ಯ ಘಟಕ ಅಧ್ಯಕ್ಷ ಪ್ರಹ್ಲಾದ ಜೋಶಿ ಸಹಿತ ಮುಖಂಡರ ಜೊತೆ ಜಗದೀಶ ಶೆಟ್ಟರ್ ಇಲ್ಲಿನ ತಮ್ಮ ಮನೆಯಲ್ಲಿ ಗಹನವಾದ ಚರ್ಚೆಯಲ್ಲಿ ತಲ್ಲೆನರಾಗಿದ್ದರೆ, ಶಿಲ್ಪಾ ಅವರು ಪತಿಯ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ.
ಗೆಲ್ಲುವ ಸಾಮರ್ಥ್ಯದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿ, ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುವ ಲೆಕ್ಕಾಚಾರದಲ್ಲಿ  ಶೆಟ್ಟರ್ ತೊಡಗಿದ್ದರೆ, `ಪತಿ ನಿರಾಯಾಸವಾಗಿ ಮರು ಆಯ್ಕೆಯಾಗಿ ರಾಜ್ಯ ಮುಖ್ಯಮಂತ್ರಿ ಪಟ್ಟ ಅಲಂಕರಿಸುವುದು ಖಚಿತ' ಎಂದು ಶಿಲ್ಪಾ, ಮನೆ ಮನೆ ಕದ ತಟ್ಟಿ ಪತಿಯನ್ನು ಗೆಲ್ಲಿಸುವಂತೆ ಕೋರುತ್ತಿದ್ದಾರೆ.

`ಇತರ ಪಕ್ಷಗಳ ಪರ ಪ್ರಚಾರಕ್ಕೆ ಯಾರೇ ಬರಲಿ. ನಾವಂತೂ ಯಾರ ಹಿಂದೆಯೂ ಹೋಗಲ್ಲ. ಇಲ್ಲಿ ನಾವೆಲ್ಲ (ಜೊತೆಗಿದ್ದ ಮಹಿಳೆಯರನ್ನು ತೋರಿಸಿ) ಇದ್ದೇವಲ್ಲ... ನಾವೆಲ್ಲ ಸ್ಟಾರ್‌ಗಳೇ. ಕಾರ್ಯಕರ್ತರೂ, ಮತದಾರರೂ ನಮ್ಮ ಪಾಲಿಗೆ ಸ್ಟಾರ್‌ಗಳು. ನನ್ನವರು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ನಾವೆಲ್ಲ ಮೂರು ದಿನಗಳಿಂದ ಕ್ಷೇತ್ರದ ಮತದಾರರ ಮನೆ ಬಾಗಿಲಿಗೆ ಹೋಗುತ್ತಿದ್ದೇವೆ. ಮನೀಗೆ ಬರಬ್ಯಾಡ್ರಿ.. ಯಾಕ್ ಬರ‌್ತೀರೀ... ಅಂತ ಮಂದಿ ಕೇಳಾಕತ್ತಾರ.. ಆದ್ರೂ ನಮ್ ಸಮಾಧಾನಕ್ಕಂತ ಹೋಂಟೇವಿ' ಎಂದು ಪ್ರಜಾವಾಣಿಗೆ ತಿಳಿಸಿದರು.

ಹಾಗಾದರೆ ನೀವು ಇತರೆ ಕ್ಷೇತ್ರಗಳಿಗೂ `ಪ್ರಚಾರ'ಕ್ಕೆ ಹೋಗ್ತೀರಾ ಎಂದು ಕೇಳಿದಾಗ, `ಬೇರೆ ಬೇರೆ ಕ್ಷೇತ್ರಗಳ ಶಾಸಕರು ನಮ್ಮ ಕ್ಷೇತ್ರಕ್ಕೂ ಬನ್ನಿ ಎಂದು ಕರೆದರೆ, ಇಲ್ಲ ಅನ್ನಲ್ಲ. ಖಂಡಿತಾ ಹೋಗ್ತೀನಿ. ಈಗಾಗಲೇ ಧಾರವಾಡ, ಗಜೇಂದ್ರಗಡಕ್ಕೆ ಹೋಗಿದ್ದೀನಿ' ಎಂದು ಉತ್ತರಿಸಿದರು.

`ಪತಿ ಮತ್ತೆ ಆಯ್ಕೆಯಾಗುವುದರಲ್ಲಿ, ರಾಜ್ಯದ ಮುಖ್ಯಮಂತ್ರಿ ಪಟ್ಟ ಅಲಂಕರಿಸುವುದರಲ್ಲಿ ಯಾವುದೇ ಸಂದೇಹವಿಲ್ಲ. ಜನ ಕೂಡಾ ಅವನು (ಮುಖ್ಯಮಂತ್ರಿ) ಒಳ್ಳೆಯ ವ್ಯಕ್ತಿ ಇದ್ದಾನೆ. ಅಧಿಕಾರ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡ್ದ್ದಿದಾನೆ. ನಾವೆಲ್ಲ ಅವನಿಗೇ ಓಟ್ ಹಾಕ್ತೇವೆ. ಮುಖ್ಯಮಂತ್ರಿ ಮಾಡ್ತೇವೆ ಎಂದು ಆಶ್ವಾಸನೆ ಕೊಡುತ್ತಿದ್ದಾರೆ' ಎಂದರು.

ಇನ್ನೂ ಅಭ್ಯರ್ಥಿ ಘೋಷಣೆಯೇ ಆಗಿಲ್ಲ, ಅಷ್ಟರಲ್ಲೇ ಪ್ರಚಾರ ಆರಂಭಿಸಿದ್ದೀರಲ್ಲಾ? ಎಂದು ಕೇಳಿದಾಗ, `ಅವರಿಗೆ (ಪತಿ) ರಾಜ್ಯದ ಜವಾಬ್ದಾರಿ ಹೆಚ್ಚು ಇದೆ. ಹೀಗಾಗಿ ಕುಟುಂಬದ ಪರವಾಗಿ ಯಾರಾದರೂ ಹೋಗಬೇಕು ಎಂಬ ಕಾರಣಕ್ಕೆ ನಾನೇ ಮತದಾರರ ಮನೆಗೆ ಹೋಗಲು ನಿರ್ಧರಿಸಿದ್ದೇನೆ. ಆದರೂ ಕೆಲವು ಮತದಾರರು ಸ್ಲಂಗಳಿಗೆ ಹೋಗಿ... ನಮ್ಮಲ್ಲಿಗೆ ಬರಬೇಡಿ ಅಂತಾರೆ.

ಸ್ಲಂಗಳಿಗೆ ಹೋದರೆ ನಿಮ್ಮ ಪರವಾಗಿ ನಾವೇ ಮತ ಕೇಳಲು ಬರುತ್ತೇವೆ. ಇಲ್ಲಿಗೆ ಬರಬೇಡಿ ಅಂತಾರೆ. ಆದರೂ ಕಳೆದ 5-6 ತಿಂಗಳಿನಿಂದ ಕ್ಷೇತ್ರದ ಮತದಾರರ ಜೊತೆ ಹೆಚ್ಚು  ಸಮಯ ಕಳೆಯಲು ಸಾಧ್ಯವಾಗದಿದ್ದರಿಂದ ಎಲ್ಲ ಕಡೆ ಅಡ್ಡಾಡುತ್ತಿದ್ದೇನೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.