ADVERTISEMENT

ನುಡಿದಂತೆ ನಡೆಯಿರಿ, ಇಲ್ಲವೇ ಕುರ್ಚಿ ಬಿಡಿ

ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಅಧ್ಯಕ್ಷ ಹಿರೇಮಠ ಒತ್ತಾಯ

​ಪ್ರಜಾವಾಣಿ ವಾರ್ತೆ
Published 30 ಮೇ 2018, 9:09 IST
Last Updated 30 ಮೇ 2018, 9:09 IST
ಎಸ್.ಆರ್‌. ಹಿರೇಮಠ
ಎಸ್.ಆರ್‌. ಹಿರೇಮಠ   

ಹುಬ್ಬಳ್ಳಿ: ‘ಜೆಡಿಎಸ್‌ ಪಕ್ಷವು ಅಧಿಕಾರಕ್ಕೆ ಬಂದರೆ ರೈತರ ₹ 53 ಸಾವಿರ ಕೋಟಿ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿತ್ತು. ಇದೀಗ ಕಾಂಗ್ರೆಸ್‌ ವರಿಷ್ಠರೊಂದಿಗೆ ಚರ್ಚಿಸಿದ ಬಳಿಕ ಮುಂದಿನ ನಿರ್ಣಯ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳುತ್ತಿದ್ದಾರೆ. ಸಾಲ ಮನ್ನಾ ಮಾಡುವಂತಿದ್ದರೆ ಅಧಿಕಾರದಲ್ಲಿ ಮುಂದುವರಿ
ಯಿರಿ. ಇಲ್ಲವೇ ಕುರ್ಚಿ ಬಿಟ್ಟು ಕೆಳಗಿಳಿಯಿರಿ’ ಎಂದು ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್‌. ಹಿರೇಮಠ ತಾಕೀತು ಮಾಡಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತಮಗೆ ನಿರ್ಣಯ ಕೈಗೊಳ್ಳುವ ಅಧಿಕಾರ ಇಲ್ಲವೆಂದು ಗೊತ್ತಾದ ತಕ್ಷಣವೇ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿತ್ತು. ಚುನಾವಣೆಗೂ ಮುನ್ನ ಪತ್ರಿಕೆಗಳಿಗೆ ನೀಡಿದ ಜಾಹೀರಾತಿನಲ್ಲಿ ಎಸಿಬಿಯನ್ನು ಕಿತ್ತು ಹಾಕಿ ಲೋಕಾಯುಕ್ತ ಸಂಸ್ಥೆಯನ್ನು ಮತ್ತಷ್ಟು ಬಲಪಡಿಸುವುದಾಗಿ ಭರವಸೆ ನೀಡಿದ್ದರು. ಕೊಟ್ಟ ಮಾತಿಗೆ ತಕ್ಕಂತೆ ನಡೆದುಕೊಳ್ಳುವ ಹಂತವಾಗಿ ಎಸಿಬಿಯನ್ನು ರದ್ದು ಮಾಡುವಂತೆ ಕರ್ನಾಟಕ ಸರ್ಕಾರವು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಬೇಕು’ ಎಂದು ಒತ್ತಾಯಿಸಿದರು.

‘ಎಲ್ಲ ಪಕ್ಷದವರೂ ಅಧಿಕಾರ ಸಿಗುವ ತನಕ ಒಂದು ಮಾತು. ಆ ಮೇಲೆ ಮತ್ತೊಂದು ಮಾತನ್ನು ಆಡುತ್ತಾರೆ. ತಾವು ನೀಡಿದ್ದ ಭರವಸೆಗಳನ್ನು ಈಡೇರಿಸಬೇಕು ಎಂಬ ಬದ್ಧತೆಯೇ ಅವರಲ್ಲಿ ಇಲ್ಲವಾಗಿದೆ’ ಎಂದು ವಿಷಾದಿಸಿದರು. ಎಸ್‌ಪಿಎಸ್‌ ಸದಸ್ಯ ಐ.ಜಿ. ಪುಲ್ಲಿ ಗೋಷ್ಠಿಯಲ್ಲಿದ್ದರು.

ADVERTISEMENT

‘ಒಳ್ಳೆಯ ಅಭ್ಯರ್ಥಿಗಳು ಗೆಲ್ಲಲಿಲ್ಲ’

‘ಪರ್ಯಾಯ ರಾಜಕಾರಣದ ಭಾಗವಾಗಿ ದೇವನೂರು ಮಹಾದೇವ, ಯೋಗೇಂದ್ರ ಯಾದವ್‌, ಪ್ರಶಾಂತ್ ಭೂಷಣ್‌ ಅವರನ್ನೆಲ್ಲ ಸೇರಿಸಿ ನಾವು ಜನಾಂದೋಲನ ಮಹಾಮೈತ್ರಿ (ಜೆಎಂಎಂ)ಯನ್ನು ಮಾಡಿಕೊಂಡಿದ್ದೆವು. ಸುಮಾರು 20 ಕ್ಷೇತ್ರಗಳಲ್ಲಿ ಸಚ್ಚಾರಿತ್ರ್ಯವಿರುವ ಅಭ್ಯರ್ಥಿಗಳನ್ನೇ ಚುನಾವಣೆಗೆ ನಿಲ್ಲಿಸಿದ್ದೆವು. ಆದರೂ ಜನರು ಅವರನ್ನು ಆಯ್ಕೆ ಮಾಡದೇ ಇರುವುದು ಬೇಸರ ಮೂಡಿಸಿದೆ’ ಎಂದು ಎಸ್‌.ಆರ್‌. ಹಿರೇಮಠ ಕಳವಳ ವ್ಯಕ್ತಪಡಿಸಿದರು.

ಈ ಕುರಿತು ಚರ್ಚಿಸಲು ಜೂನ್‌ 25–26ರಂದು ಬೆಂಗಳೂರಿನಲ್ಲಿ ಚಿಂತನಾ ಶಿಬಿರವನ್ನು ಆಯೋಜಿಸಿದ್ದೇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.