ADVERTISEMENT

ಪತ್ರಕರ್ತ ನವೀನ್ ಬಿಡುಗಡೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2012, 8:11 IST
Last Updated 19 ಡಿಸೆಂಬರ್ 2012, 8:11 IST

ಧಾರವಾಡ: ಪತ್ರಕರ್ತ ನವೀನ್ ಸೂರಿಂಜೆಯನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಸಮುದಾಯ, ಎಸ್‌ಎಫ್‌ಐ ಸಂಘಟನೆಗಳ ಕಾರ್ಯ ಕರ್ತರು ಮಂಗಳವಾರ ಜಿಲ್ಲಾಧಿಕಾರಿ ಮುಖಾಂತರ ರಾಜ್ಯ ಪಾಲರಿಗೆ ಮನವಿ ಸಲ್ಲಿಸಿದರು.

ಹೋಂ ಸ್ಟೇ ಮೇಲೆ ದಾಳಿ ನಡೆಯುವ ಸುದ್ದಿ ಮೊದಲೇ ಗೊತ್ತಿದ್ದರೂ ನವೀನ್ ಪೊಲೀಸರಿಗೆ ತಿಳಿಸಲಿಲ್ಲ ಎಂಬ ನೆಪವೊಡ್ಡಿ ಅವರನ್ನು ಬಂಧಿಸಿದ್ದು ಖಂಡನೀಯ. ಪಬ್ ಮೇಲೆ ದಾಳಿ ನಡೆಸಿ ಮಹಿಳೆಯರನ್ನು ಹಿಗ್ಗಾಮುಗ್ಗಾ ಹೊಡೆದವರನ್ನು ಸರ್ಕಾರ ರಕ್ಷಿಸಿದೆ.

ಆದರೆ ಅದೇ ಹೊತ್ತಿನಲ್ಲಿ ಹೋಂ ಸ್ಟೇ ಮೇಲಿನ ದಾಳಿಯನ್ನು ಮಾಧ್ಯಮದ ಮೂಲಕ ಬಿತ್ತರಿಸಿ ಆರೋಪಿಗಳನ್ನು ಜಗತ್ತಿಗೆ ತೋರಿಸಿದ್ದಕ್ಕಾಗಿ ಮತ್ತು ಸತ್ಯವನ್ನು ಬಯಲುಗೊಳಿಸಿದ್ದಕ್ಕಾಗಿ ನವೀನ್ ಅವರ ಮೇಲೆ ಪೊಲೀಸ್ ಇಲಾಖೆಯು ಸೇಡು ತೀರಿಸಿಕೊಳ್ಳಲು ಹೊರಟಿದೆ ಎಂದು ಸಮುದಾಯ ಸಂಘಟನೆಯ ಜಿಲ್ಲಾ ಸಂಚಾಲಕ ಬಿ.ಐ.ಈಳಿಗೇರ ಟೀಕಿಸಿದರು.

`ಕೋಮುಭಾವನೆಯಿಂದ ಕರಾವಳಿಯಾದ್ಯಂತ ನಡೆಯುತ್ತಿರುವ ಇಂಥ ದಾಳಿಗಳನ್ನು ತಡೆಗಟ್ಟಲಾಗದ ಹೇಡಿತನವನ್ನು ಪ್ರದರ್ಶಿಸುವ ಪೊಲೀಸ್ ಇಲಾಖೆಯು ನಿರಪರಾಧಿ ಪತ್ರಕರ್ತರನ್ನು ಬಂಧಿಸಿ ತನ್ನ ಪಕ್ಷಪಾತಿ ನಿಲುವು ಮತ್ತು ಸೇಡು ಪ್ರೇರಿತ ಪ್ರವೃತ್ತಿಯನ್ನು ಜಾರಿಗೊಳಿಸಿದಂತಾಗಿದೆ. ಪ್ರಕರಣದಲ್ಲಿ ನಿಜವಾದ ಆರೋಪಿಗಳನ್ನು ಶಿಕ್ಷೆಗೆ ಒಳಪಡಿಸುವ ಇಚ್ಛೆ ಸರ್ಕಾರಕ್ಕಿಲ್ಲ.

ಕಂಡವರ ಮಕ್ಕಳ ಮೇಲೆ ದಾಳಿ ಮಾಡಿದವರ ಮೇಲೂ ಒಂದೇ ಪ್ರಕರಣ ಹಾಗೂ ಸುದ್ದಿ ಬಿತ್ತರಿಸಿದ ನವೀನ್ ಅವರ ಮೇಲೂ ಏಕ ರೀತಿಯ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುತ್ತಿರುವ ಪೊಲೀಸರ ನಿಲುವು ಅತ್ಯಂತ ಅನುಮಾನಾಸ್ಪದವಾ ಗಿದೆ. ತಕ್ಷಣ ನವೀನ್ ಅವರನ್ನು ಬಿಡುಗಡೆಗೊಳಿಸ ಬೇಕು ಎಂದು ಆಗ್ರಹಿಸಿದರು.

ಎಸ್.ಎಂ.ಅನಿಲ, ಲಕ್ಷ್ಮಣ ಪೀರಗಾರ, ಎ.ಎಂ. ಖಾನ್, ಸಂದೀಪ ಕೊಳೊರಗಿ, ವಿನಾಯಕ ಕುರುಬರ, ಸುನಿಲ ಜಾಲಿಕಟ್ಟಿ, ರಮೇಶ ಬಾಣಿ, ಮಾರುತಿ ಅಂಬಿಗೇರ, ಬಸವರಾಜ ಗುರುವ ಮತ್ತಿತರರು ಈ ಸಂದರ್ಭದಲ್ಲಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.