ADVERTISEMENT

ಪಾಟೀಲ ಪುಟ್ಟಪ್ಪಗೆ ಎಸ್‌. ನಿಜಲಿಂಗಪ್ಪ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 19 ಜೂನ್ 2017, 5:43 IST
Last Updated 19 ಜೂನ್ 2017, 5:43 IST
ಹುಬ್ಬಳ್ಳಿಯಲ್ಲಿ ಭಾನುವಾರ ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಅವರನ್ನು ವಾಟಾಳ್‌ ನಾಗರಾಜ್‌ ಅಭಿನಂದಿಸಿದರು
ಹುಬ್ಬಳ್ಳಿಯಲ್ಲಿ ಭಾನುವಾರ ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಅವರನ್ನು ವಾಟಾಳ್‌ ನಾಗರಾಜ್‌ ಅಭಿನಂದಿಸಿದರು   

ಹುಬ್ಬಳ್ಳಿ: ಕನ್ನಡ ಒಕ್ಕೂಟದಿಂದ ಈ ವರ್ಷದಿಂದ ಪ್ರಥಮ ಬಾರಿಗೆ ಕೊಡಲು ಉದ್ದೇಶಿಸಿರುವ ‘ಎಸ್‌.ನಿಜಲಿಂಗಪ್ಪ ಪ್ರಶಸ್ತಿ’ಗೆ ಕರ್ನಾಟಕ ಏಕೀಕರಣಕ್ಕಾಗಿ ಶ್ರಮಿಸಿದ ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ವಾಟಾಳ್‌ ನಾಗರಾಜ್‌ ತಿಳಿಸಿದರು.

ಪಾಪು ಅವರಿಗೆ 98 ವರ್ಷ ತುಂಬಿದ ಹಿನ್ನೆಲೆಯಲ್ಲಿ ಭಾನುವಾರ ಅವರ ಮನೆಗೆ ತೆರಳಿ, ಮೈಸೂರು ಪೇಟೆ ತೊಡಿಸುವ ಮೂಲಕ ಅಭಿನಂದಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಪ್ರಶಸ್ತಿ ಮೊತ್ತ, ಪ್ರದಾನ ದಿನಾಂಕ ಮತ್ತು ಸ್ಥಳವನ್ನು ಶೀಘ್ರದಲ್ಲೇ ನಿಗದಿ ಪಡಿಸಲಾಗುವುದು ಎಂದರು. 

ಪ್ರತಿಮೆ ಬದಲಾವಣೆಗೆ ಆಗ್ರಹ:
ವಿಧಾನಸೌಧದ ಎದುರು ಇರುವ ಎಸ್‌.ನಿಜಲಿಂಗಪ್ಪ ಅವರ ಪ್ರತಿಮೆ ಅವರನ್ನು ಸರಿಯಾಗಿ ಹೋಲುತ್ತಿಲ್ಲ. ಕಾರಣ ಈಗಿರುವ ಪ್ರತಿಮೆಯನ್ನು ಬದಲಾಯಿಸಬೇಕು ಎಂದು ಅವರು ಆಗ್ರಹಿಸಿದರು.

ADVERTISEMENT

ಹೆದ್ದಾರಿ ತಡೆ: ಮಹಾದಾಯಿ ವಿವಾದವನ್ನು ಬಗೆಹರಿಸುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ಗೋವಾ ಸರ್ಕಾರದ ಕ್ರಮವನ್ನು ಖಂಡಿಸಿ ಇನ್ನು 15ರಿಂದ 20 ದಿನಗಳ ಒಳಗಾಗಿ ಕಾರವಾರದಲ್ಲಿ ಹೆದ್ದಾರಿ ತಡೆ ನಡೆಸಲಾಗುವುದು ಎಂದು ಹೇಳಿದರು.

ಮಹಾದಾಯಿ, ಕಳಸಾ–ಬಂಡೂರಿ ಯೋಜನೆಗೆ ಆಗ್ರಹಿಸಿ ನರಗುಂದದಲ್ಲಿ ಎರಡು ವರ್ಷದಿಂದ ರೈತರು ಹೋರಾಟ ನಡೆಯುತ್ತಿದ್ದರೂ ಈ ಬಗ್ಗೆ ಅಧಿವೇಶನದಲ್ಲಿ ಚರ್ಚೆಯೇ ನಡೆಯುತ್ತಿಲ್ಲ. ಉತ್ತರ ಕರ್ನಾಟಕ ಭಾಗದ ಒಬ್ಬ ಜನಪ್ರತಿನಿಧಿಯೂ ಈ ಬಗ್ಗೆ ಧ್ವನಿ ಎತ್ತದಿರುವುದು ವಿಷಾದನೀಯ ಎಂದರು.

ಶಾಸಕರ ಕೊಠಡಿಗೆ ಬೀಗ: ವಿಧಾನಸಭಾ ಅಧಿವೇಶನ ಗಂಭೀರ ಚರ್ಚೆಗಳು ನಡೆಯದೇ ಸೊರಗಿದೆ. ಮಹತ್ವದ ಮಸೂದೆಗಳು ಚರ್ಚೆಗಳಿಲ್ಲದೇ ಪಾಸಾಗುತ್ತಿವೆ. ಅಧಿವೇಶನಕ್ಕೆ ಶಾಸಕರು ಸರಿಯಾಗಿ ಹಾಜರಾಗುತ್ತಿಲ್ಲ. ಇದನ್ನು ಖಂಡಿಸಿ ಮುಂದಿನ ಅಧಿವೇಶನದ ವೇಳೆಗೆ ಶಾಸಕರ ಕೊಠಡಿಗಳಿಗೆ ಬೀಗ ಹಾಕಿ ಪ್ರತಿಭಟಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕರ್ನಾಟಕ ಏಕೀಕರಣ, ಗಡಿ ವಿವಾದದ ಬಗ್ಗೆ ಈಗಿನ ಶಾಸಕರಿಗೆ, ವಿಧಾನ ಪರಿಷತ್‌ ಸದಸ್ಯರಿಗೆ ಹಾಗೂ ಸಂಸದರಿಗೆ ಸರಿಯಾದ ಅರಿವಿಲ್ಲ. ಚುನಾವಣೆ, ಭ್ರಷ್ಟಾಚಾರ, ಜಾತಿ ರಾಜಕಾರಣದಲ್ಲಿ ಮುಳುಗಿ ಹೋಗಿದ್ದಾರೆ. ಈ ಸಂಬಂಧ ರಾಜ್ಯ ಸರ್ಕಾರವು ಕರ್ನಾಟಕ ಏಕೀಕರಣ ಕುರಿತು ಪುಸ್ತಕವನ್ನು ಪ್ರಕಟಿಸಿ, ಜನಪ್ರತಿನಿಧಿಗಳಿಗೆ ಓದಲು ನೀಡಬೇಕು ಎಂದರು.

* *  

ವಾಟಾಳ್ ಮಾತು, ಹೋರಾಟ ಕೆಲವರಿಗೆ ಇಷ್ಟವಾಗದೇ ಇರಬಹುದು ಆದರೆ, ನಾಡು, ನುಡಿ ವಿಷಯ ಬಂದಾಗ ಅವರು ಮುಂಚೂಣಿಯಲ್ಲಿ ನಿಂತು ಪ್ರಶ್ನಿಸುತ್ತಾರೆ. 
ಪಾಟೀಲ ಪುಟ್ಟಪ್ಪ
ಹಿರಿಯ ಪತ್ರಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.