ADVERTISEMENT

ಪಾಲಿಕೆಯ ನಿರ್ಲಕ್ಷ್ಯ: ನಾಗರಿಕರ ಆಕ್ರೋಶ

ನಾಲಾಗಳ ಹೂಳೆತ್ತಿಲ್ಲ, ಚರಂಡಿಗಳು ಸ್ವಚ್ಛವಾಗಿಲ್ಲ, ಮಳೆ ನೀರು ಸರಾಗವಾಗಿ ಹರಿಯಲು ವ್ಯವಸ್ಥೆಯೂ ಇಲ್ಲ

ಗುರು ಪಿ.ಎಸ್‌
Published 23 ಮಾರ್ಚ್ 2018, 10:22 IST
Last Updated 23 ಮಾರ್ಚ್ 2018, 10:22 IST
ಹುಬ್ಬಳ್ಳಿಯ ಶಿರೂರ ಪಾರ್ಕ್‌ ಮುಖ್ಯರಸ್ತೆ ಬದಿಯ ನಾಲಾ ಹೂಳಿನಿಂದ ತುಂಬಿರುವುದು
ಹುಬ್ಬಳ್ಳಿಯ ಶಿರೂರ ಪಾರ್ಕ್‌ ಮುಖ್ಯರಸ್ತೆ ಬದಿಯ ನಾಲಾ ಹೂಳಿನಿಂದ ತುಂಬಿರುವುದು   

ಹುಬ್ಬಳ್ಳಿ: ಕೇವಲ ಒಂದೆರಡು ಗಂಟೆ ಸುರಿದಿರುವ ಮಳೆಗೆ ಧಾರವಾಡದ ಹಲವು ಬಡಾವಣೆಗಳು ಜಲಾವೃತವಾಗಿವೆ. ಹುಬ್ಬಳ್ಳಿಯಲ್ಲಿ ಚರಂಡಿಗಳು ತುಂಬಿ, ಕೊಳಚೆ ನೀರು ರಸ್ತೆಗೆ ಹರಿದಿದೆ. ಮಳೆಗಾಲಕ್ಕೆ ಮಹಾನಗರ ಪಾಲಿಕೆ ಸಿದ್ಧಗೊಂಡಿಲ್ಲದಿರುವುದಕ್ಕೆ ಇದು ಸಾಕ್ಷಿ ಎಂದು ಸ್ಥಳೀಯರು ದೂರುತ್ತಿದ್ದಾರೆ.

‘ಮಳೆ ನೀರು ಸರಾಗವಾಗಿ ಹೋಗಲು ವ್ಯವಸ್ಥೆ ಇಲ್ಲ. ಚರಂಡಿಗಳು ಕಟ್ಟಿಕೊಂಡಿವೆ. ನಾಲಾಗಳ ಹೂಳೆತ್ತಿಲ್ಲ. ಪಾಲಿಕೆ ಎಚ್ಚೆತ್ತುಕೊಳ್ಳದಿದ್ದರೆ, ಸಾರ್ವಜನಿಕರು ತೊಂದರೆ ಅನುಭವಿಸಬೇಕಾಗುತ್ತದೆ’ ಎಂದು ವೈದ್ಯ ವಿ.ಬಿ. ನಿಟಾಲಿ ಹೇಳಿದರು.

‘ಎಷ್ಟೋ ಕಡೆ ಚರಂಡಿಗಳು ಒಡೆದಿವೆ. ಅರ್ಧ ತಾಸು ಮಳೆಯಾದರೂ, ನೆಲಮಹಡಿ ಜಲಾವೃತವಾಗಿ ಬಿಡುತ್ತವೆ. ಮನೆಗಳಿಗೆ ನೀರು ನುಗ್ಗುತ್ತದೆ. ಸಮರ್ಪಕ ನಿರ್ವಹಣೆ ಇಲ್ಲದಿರುವುದೇ ಇದಕ್ಕೆಲ್ಲ ಕಾರಣ’ ಎಂದು ಧಾರವಾಡದ ಬಸವಲಿಂಗ ಪಟ್ಟಣಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಹೋರ್ಡಿಂಗ್, ಫ್ಲೆಕ್ಸ್‌ನಿಂದ ಅಪಾಯ: ‘ಚುನಾವಣೆ ಸಂದರ್ಭದಲ್ಲಿ ಎಲ್ಲ ಪಕ್ಷಗಳು ನಾಯಕರು ಅವಳಿ ನಗರದಲ್ಲಿ ದೊಡ್ಡ, ದೊಡ್ಡ ಹೋರ್ಡಿಂಗ್‌ ಹಾಕುತ್ತಿದ್ದಾರೆ. ಜೋರಾಗಿ ಮಳೆ ಬಂದರೆ, ಗಾಳಿ ಬೀಸಿದರೆ ಇವು ಜನರ ಮೇಲೆ ಬೀಳುವ ಅಪಾಯವಿದೆ’ ಎಂದು ವಿ.ಬಿ. ನಿಟಾಲಿ ಆತಂಕ ವ್ಯಕ್ತಪಡಿಸಿದರು.

‘ಇತ್ತೀಚೆಗೆ ಕಿಮ್ಸ್‌ ಎದುರಿಗಿನ ಹೋರ್ಡಿಂಗ್‌ ಬಿತ್ತು. ಅದೃಷ್ಟವಶಾತ್‌ ಪ್ರಾಣಾಪಾಯ ಸಂಭವಿಸಿಲ್ಲ. ಯಾರಾದರೂ ಅಸುನೀಗಿದ್ದರೆ, ಪಾಲಿಕೆ ಹೊಣೆ ಹೊರಬೇಕಾಗುತ್ತಿತ್ತು’ ಎಂದು ಹೇಳಿದರು.

ಪತ್ರ ಬರೆದು ಎಚ್ಚರಿಕೆ: ‘ಚುನಾವಣಾ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಅವರ ಅಭಿಮಾನಿಗಳು ಹೋರ್ಡಿಂಗ್‌, ಫ್ಲೆಕ್ಸ್‌ ಹಾಕುತ್ತಿದ್ದಾರೆ. ಮಳೆ ಅಥವಾ ಗಾಳಿಗೆ ಈ ಹೋರ್ಡಿಂಗ್‌ಗಳು ಬಿದ್ದು ಜನರಿಗೆ ಅಪಾಯವಾದರೆ, ಆ ಹೋರ್ಡಿಂಗ್‌ನ ಭಾವಚಿತ್ರದಲ್ಲಿರುವ ಪಕ್ಷಗಳ ಮುಖಂಡರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಲ್ಲರಿಗೆ ಪತ್ರ ಬರೆದು ಎಚ್ಚರಿಸಲಾಗಿದೆ’ ಎಂದು ಪಾಲಿಕೆ ಕಂದಾಯ ವಿಭಾಗದ ಉಪ ಆಯುಕ್ತ ಐ.ಎಸ್. ಶಿರಹಟ್ಟಿ ಹೇಳಿದರು.

‘ಚುನಾವಣಾ ನೀತಿ ಸಂಹಿತೆ ಜಾರಿ ಆಗುವುದರಿಂದ ಯಾವುದೇ ರಾಜಕೀಯ ಪಕ್ಷಗಳ ಬ್ಯಾನರ್‌ ಅಳವಡಿಸತಕ್ಕದ್ದಲ್ಲ ಎಂದು ತಿಳಿಸಲಾಗಿದೆ. ಅನಧಿಕೃತ ಜಾಹೀರಾತು ಫಲಕಗಳನ್ನು ತೆರವುಗೊಳಿಸುವ ಅಧಿಕಾರವನ್ನು ಆಯಾ ವಲಯ ಮುಖ್ಯಾಧಿಕಾರಿಗೆ ನೀಡಲಾಗಿದೆ’ ಎಂದು ಅವರು ತಿಳಿಸಿದರು.

ಟೆಂಡರ್‌ ಕರೆಯಲಾಗಿದೆ: ‘ಮೇ– ಜೂನ್‌ ನಂತರ ಮಳೆ ಪ್ರಾರಂಭವಾಗುತ್ತಿತ್ತು. ಈಗ ಎರಡು ತಿಂಗಳು ಮುಂಚಿತವಾಗಿಯೇ ಸುರಿದಿದೆ. ಆದರೂ, ನಾಲಾಗಳ ಹೂಳೆತ್ತಲು ಅಗತ್ಯಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಮಹಾನಗರ ಪಾಲಿಕೆ ಕಾರ್ಯನಿರ್ವಾಹಕ ಎಂಜಿನಿಯರ್‌ (ಉತ್ತರ) ಮಹೇಶಗೌಡ ತಿಳಿಸಿದರು.

‘ನಗರದಲ್ಲಿನ ನಾಲಾಗಳನ್ನು ಸ್ವಚ್ಛಗೊಳಿಸಲು ಕಾರ್ಯಾದೇಶ ನೀಡಲಾಗಿದೆ. ₹97 ಲಕ್ಷ ವೆಚ್ಚದಲ್ಲಿ ಉಣಕಲ್‌ನಿಂದ ಹಳೇ ಹುಬ್ಬಳ್ಳಿಯವರೆಗಿನ ದೊಡ್ಡ ನಾಲಾವನ್ನು ಸ್ವಚ್ಛಗೊಳಿಸಲಾಗುವುದು ’ ಎಂದು ಅವರು ಹೇಳಿದರು.

‘ಚರಂಡಿಗಳನ್ನು ಆಗಿಂದಾಗ್ಗೆ ಸ್ವಚ್ಛಗೊಳಿಸಲಾಗುತ್ತಿದೆ. ನೀರು ನಿಲ್ಲುವ ಆನಂದ ನಗರ, ಅರವಿಂದ ನಗರದಲ್ಲಿ ಸ್ವಚ್ಛಗೊಳಿಸಲಾಗಿದ್ದು, ಅಗತ್ಯ ಇರುವಲ್ಲಿ ಹೂಳು ತೆಗೆಯಲಾಗುವುದು’ ಎಂದು ಮಹೇಶಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.