ADVERTISEMENT

ಪಾಲಿಕೊಪ್ಪ ಶಾಲೆ ಶಿಕ್ಷಕನ ವರ್ಗಾವಣೆ

ಪಾಲಿಕೊಪ್ಪ ಶಾಲೆ ಶಿಕ್ಷಕನ ವರ್ಗಾವಣೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2013, 8:16 IST
Last Updated 7 ಡಿಸೆಂಬರ್ 2013, 8:16 IST

ಹುಬ್ಬಳ್ಳಿ: ಶಿಕ್ಷಕರೊಬ್ಬರ ವರ್ಗಾವಣೆಗೆ ಸಂಬಂಧಿಸಿದಂತೆ ಶಾಸಕರು ಹಾಗೂ ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಆದೇಶ ಪಾಲನೆಯ ವಿಚಾರದಲ್ಲಿ ಹುಬ್ಬಳ್ಳಿ ಗ್ರಾಮೀಣ ವಿಭಾಗದ ಕ್ಷೇತ್ರ ಶಿಕ್ಷಣಾಧಿಕಾರಿಯ (ಬಿಇಒ) ಸ್ಥಿತಿ ‘ಅತ್ತ ದರಿ, ಇತ್ತ ಪುಲಿ’ ಎಂಬಂತಾಗಿದೆ.

‘ತಾಲ್ಲೂಕಿನ ಪಾಲಿಕೊಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿಜ್ಞಾನ ಶಿಕ್ಷಕ ಎಸ್.ಹಾವಗಿ ಅವರ ವರ್ತನೆ ಸರಿ ಇಲ್ಲವಾಗಿದ್ದು, ಕೂಡಲೇ ಅವರನ್ನು ಅಲ್ಲಿಂದ ವರ್ಗಾಯಿಸುವಂತೆ’ ಇತ್ತೀಚೆಗೆ ಧಾರವಾಡದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ಬಿ.ಕೆ.ಎ.ಸ್‌.ವರ್ಧನ ಅವರಿಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶಂಕರಪ್ಪ ಅಗಡಿ ಪತ್ರ ಬರೆದಿದ್ದಾರೆ.

ಜಿ.ಪಂ ಅಧ್ಯಕ್ಷರ ಪತ್ರದ ಹಿನ್ನೆಲೆಯಲ್ಲಿ ಶಿಕ್ಷಕನ ವರ್ಗಾವಣೆಗೆ ಕ್ರಮ ಕೈಗೊಳ್ಳಲು ಡಿಡಿಪಿಐ ಹುಬ್ಬಳ್ಳಿ ಗ್ರಾಮೀಣ ವಿಭಾಗದ ಬಿಇಒ ಅವರಿಗೆ ಸೂಚನೆ ನೀಡಿದ್ದಾರೆ. ಮೇಲಾಧಿಕಾರಿ ಸೂಚನೆಯಂತೆ ಬಿಇಒ ಕ್ರಮಕ್ಕೆ ಮುಂದಾಗಿದ್ದಾರೆ. ಇದೇ ಸಂದರ್ಭದಲ್ಲಿ ಹಾವಗಿ ಅವರನ್ನು ವರ್ಗಾಯಿಸದಂತೆ ಕುಂದಗೋಳ ಶಾಸಕ ಸಿ.ಎಸ್.ಶಿವಳ್ಳಿ ಅವರಿಂದ ಬಂದ ಪತ್ರ ಅಧಿಕಾರಿಯನ್ನು ಅಡಕತ್ತರಿಗೆ ಸಿಲುಕಿಸಿದೆ.
ಶಿಕ್ಷಕ ಹಾವಗಿ ಅವರ ವರ್ಗಾವಣೆ ತಡೆಯುವಂತೆ ಪಾಲಿಕೊಪ್ಪ ಶಾಲಾಭಿವೃದ್ಧಿ ಸಮಿತಿ (ಎಸ್ ಡಿಎಂಸಿ) ಶಾಸಕರಿಗೆ ಮನವಿ ಮಾಡಿದೆ. ಈ ಮನವಿ ಪರಿಗಣಿಸಿದ ಶಿವಳ್ಳಿ, ಬಿಇಒ ಅವರಿಗೆ ಪತ್ರ ಬರೆದಿದ್ದಾರೆ. ಇದರಿಂದ ವರ್ಗಾವಣೆ ಪ್ರಕ್ರಿಯೆ ಅಲ್ಲಿಗೆ ಸ್ಥಗಿತಗೊಂಡಿದೆ.
ಈ ಮಧ್ಯೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಿಂದ ಮತ್ತೊಮ್ಮೆ ಡಿಡಿಪಿಐ ಅವರಿಗೆ ಶಿಕ್ಷಕನನ್ನು ವರ್ಗಾಯಿಸುವಂತೆ ಸೂಚನೆ ಬಂದಿದೆ.  ‘ಶಾಲಾಭಿವೃದ್ಧಿ ಸಮಿತಿಯ ವಿರೋಧ ಹಾಗೂ ಶಾಸಕರ ನಿರ್ದೇಶನ ಇರುವುದರಿಂದ ವರ್ಗಾವಣೆ ಸಾಧ್ಯವಿಲ್ಲ’ ಎಂಬುದನ್ನು ಬಿಇಒ ಕಚೇರಿಯಿಂದಲೂ ಅಧ್ಯಕ್ಷರಿಗೆ ತಿಳಿಸಲಾಗಿದೆ.

ತಾ.ಪಂ. ಸಭೆಯಲ್ಲಿ ಪ್ರತಿಧ್ವನಿ: ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಪತ್ರ ಬರೆದರೂ ಶಿಕ್ಷಕನನ್ನು ವರ್ಗಾವಣೆ ಮಾಡಿಲ್ಲವೇಕೆ ಎಂದು ಪ್ರಶ್ನಿಸಿ ಶನಿವಾರ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಕೆಲವು ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸಿದರು.


‘ಜನಪ್ರತಿನಿಧಿಗಳ ಮಾತಿಗೆ ಮನ್ನಣೆ ನೀಡುತ್ತಿಲ್ಲ’ ಎಂದು ಇದೇ ಸಂದರ್ಭದಲ್ಲಿ ಗ್ರಾಮೀಣ ವಿಭಾಗದ ಬಿಇಒ ಎಂ.ಎಲ್.ಹಂಚಾಟಿ ಅವರನ್ನು ತರಾಟೆಗೆ ತೆಗೆದುಕೊಂಡರು. ಶಿಕ್ಷಕರನ್ನು ವರ್ಗಾವಣೆ ಮಾಡದಿದ್ದಲ್ಲಿ ಬೇರೆಡೆಗೆ ನಿಯೋಜನೆ ಮೇಲೆ ಕಳುಹಿಸುವಂತೆ ಒತ್ತಾಯಿಸಲಾಯಿತು.

ಕಾಂಗ್ರೆಸ್–ಬಿಜೆಪಿ ಜಗಳ: ‘ಶಿಕ್ಷಕ ಹಾವಗಿ ಅವರ ವರ್ಗಾವಣೆಗೆ ಗ್ರಾಮದ ಕೆಲವು ಬಿಜೆಪಿ ಬೆಂಬಲಿಗರು ಪಟ್ಟು ಹಿಡಿದಿದ್ದು, ಅವರನ್ನು ಅಲ್ಲಿಯೇ ಉಳಿಸಿಕೊಳ್ಳಲು ಕಾಂಗ್ರೆಸ್ ಕಾರ್ಯಕರ್ತರು ಪಣ ತೊಟ್ಟಿದ್ದಾರೆ. ಇದು ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಹಾಗೂ ಶಾಸಕರ ನಡುವೆ ಶೀತಲ ಸಮರಕ್ಕೆ ಕಾರಣವಾಗಿದೆ. ಈ ಪೈಪೋಟಿಯಲ್ಲಿ ಶಾಲೆಯ ಪರಿಸರ ನಲುಗುತ್ತಿದೆ’ ಎಂದು ಪಾಲಿಕೊಪ್ಪದ ಹಿರಿಯರೊಬ್ಬರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಮಕ್ಕಳನ್ನು ವಿಚಾರಿಸಿ ಕ್ರಮ ಕೈಗೊಳ್ಳಲಿ...
‘ವಸ್ತು ಸ್ಥಿತಿ ನನಗೆ ಗೊತ್ತಿಲ್ಲ. ಪಾಲಿಕೊಪ್ಪದ ಕೆಲವು ಪ್ರಮುಖರು ಬಂದು ಒತ್ತಾಯ ಮಾಡಿದ ಹಿನ್ನೆಲೆಯಲ್ಲಿ ಶಿಕ್ಷಕ­ನನ್ನು ವರ್ಗಾಯಿಸುವಂತೆ ಡಿಡಿಪಿಐಗೆ ಪತ್ರ ಬರೆದಿದ್ದೇನೆ. ನನಗೆ ತಿಳಿದಿರುವ ಮಾಹಿತಿ­ಯಂತೆ ಅವರ ವರ್ತನೆ ಸರಿ ಇಲ್ಲ. ಆ ಬಗ್ಗೆ ಶಾಲೆಯ ಮಕ್ಕಳನ್ನು ವಿಚಾರಿಸಿ ಅಧಿಕಾರಿ­ಗಳು ಸೂಕ್ತ ಕ್ರಮಕ್ಕೆ ಮುಂದಾಗಲಿ’.
-ಶಂಕರಪ್ಪ ಅಗಡಿ, ಜಿ.ಪಂ.ಅಧ್ಯಕ್ಷ

‘ನಿಯಮಾವಳಿಯಂತೆ ಕಾರ್ಯನಿರ್ವಹಿಸಲಿ’

ಶಾಲಾಭಿವೃದ್ಧಿ ಸಮಿತಿಯ ಒತ್ತಾಸೆಯಂತೆ ಶಿಕ್ಷಕನನ್ನು ಅಲ್ಲಿಯೇ ಉಳಿಸಿ ಎಂದು ನಾನು ಪತ್ರ ಬರೆದಿರುವೆ. ಯಾರೇ ಪತ್ರ ಬರೆದರೂ ಕೊನೆಗೆ ಶಾಲೆಯ ಆಡಳಿತ ಸಮಿತಿ ನಿರ್ಧಾರವೇ ಅಂತಿಮ. ಶಿಕ್ಷಕರು–ಅಧಿ­ಕಾರಿಗಳ ವಿಚಾರದಲ್ಲಿ ನನಗೆ ರಾಜ­ಕೀಯ ಮಾಡಲು ಇಷ್ಟವಿಲ್ಲ. ನಿಯಮಾ­ವಳಿಯಂತೆ ಕ್ರಮ ಕೈಗೊಳ್ಳಲು ಅಧಿಕಾರಿ­ಗಳಿಗೆ ಸೂಚನೆ ನೀಡಿದ್ದೇನೆ.
-ಸಿ.ಎಸ್. ಶಿವಳ್ಳಿ, ಕುಂದಗೋಳ ಶಾಸಕ

ತಪ್ಪು ಸಾಬೀತಾಗದೆ ಕ್ರಮ ಅಸಾಧ್ಯ

ಶಿಕ್ಷಕರ ವರ್ತನೆ ವಿಚಾರದಲ್ಲಿ ಶಾಲಾಭಿವೃದ್ಧಿ ಸಮಿತಿ ಮತ್ತು ಮಕ್ಕಳ ಅಭಿಪ್ರಾಯವೇ ಅಂತಿಮ. ನಿಯಮಾವಳಿಯಂತೆ ಶಿಕ್ಷಕರು ಮಾಡಿರುವ ತಪ್ಪು ಸಾಬೀತಾಗದೆ ಕ್ರಮ ಅಸಾಧ್ಯ.
-ಎಂ.ಎಲ್‌.ಹಂಚಾಟಿ, ಗ್ರಾಮೀಣ ವಿಭಾಗದ ಕ್ಷೇತ್ರ ಶಿಕ್ಷಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.