ADVERTISEMENT

`ಪುಟ್ಟರಾಜರಿಂದ ಅಂಧ ಕಲಾವಿದರಿಗೆ ಗೌರವ'

​ಪ್ರಜಾವಾಣಿ ವಾರ್ತೆ
Published 8 ಜೂನ್ 2013, 6:53 IST
Last Updated 8 ಜೂನ್ 2013, 6:53 IST

ಹುಬ್ಬಳ್ಳಿ: ಪುಟ್ಟರಾಜ ಗವಾಯಿಗಳು ಹುಟ್ಟದಿದ್ದರೆ ಅಂಧ ಕಲಾವಿದರಿಗೆ ಗೌರವದ ಬದುಕು ಸಿಗುತ್ತಿರಲಿಲ್ಲ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ರಘುವೀರಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.

ಇಲ್ಲಿನ ಡಾ.ಗುರುಪುಟ್ಟರಾಜ ಗವಾಯಿಗಳ ಸಂಗೀತ ವಿದ್ಯಾಲಯದ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಬೇಸಿಗೆ ಸಂಗೀತ ಶಿಬಿರದ ಸಮಾರೋಪ ಸಮಾರಂಭ ಹಾಗೂ ಸಂಗೀತ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಮಕ್ಕಳಿಗೆ ತಂದೆ-ತಾಯಿಗಳು ಪ್ರೋತ್ಸಾಹ ನೀಡಿ ಸಂಗೀತ ಕಲೆ ಉಳಿಸಿ ಬೆಳೆಸಬೇಕು ಎಂದು ಸಲಹೆ ನೀಡಿದರು.

ಅತಿಥಿಯಾಗಿದ್ದ ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಮಾತನಾಡಿ, ಭಾರತೀಯ ಸಂಗೀತ ಹಾಗೂ ಕಲೆಯಲ್ಲಿ ದೇಸಿ ಸಂಸ್ಕೃತಿ ಅಡಗಿದೆ. ಪಾಶ್ಚಿಮಾತ್ಯ ಸಂಗೀತ ಮತ್ತು ಸಂಸ್ಕೃತಿಗೆ ಮೊರೆ ಹೋಗುತ್ತಿರುವ ನಮ್ಮ ಮಕ್ಕಳಿಗೆ ದೇಸಿ ಸಂಸ್ಕೃತಿ ಬಗ್ಗೆ ತಿಳಿಸಿಕೊಡಲು ಹೆಚ್ಚಿನ ಒತ್ತು ನೀಡುವಂತೆ ತಿಳಿಸಿದರು.

ಪುಟ್ಟರಾಜ ಗವಾಯಿ ಅವರ ಪೂರ್ಣ ಬದುಕು-ಬರಹ ಹಾಗೂ ಜೀವನದ ಬಗ್ಗೆ ಅತಿಥಿಯಾಗಿದ್ದ ಪ್ರೊ.ಕೆ.ಎಸ್. ಕೌಜಲಗಿ ಮಾತನಾಡಿದರು.
ಸಂಗೀತ ವಿದ್ಯಾಲಯದ ಪ್ರಾಚಾರ್ಯ ಸಂಗಮೇಶ್ವರ ಸ್ವಾದಿಮಠ ಮಾತನಾಡಿ, ಪುಟ್ಟರಾಜ ಗುರುಗಳ ಮಾರ್ಗದರ್ಶನದಿಂದಾಗಿ ಸಂಗೀತ ಕ್ಷೇತ್ರದಲ್ಲಿ ಮುಂದುವರೆಯುತ್ತಿರುವೆ. ಸಂಗೀತ ಕಲಿಸುವವರು ಇಂದು ಬಹಳ ವಿರಳವಾಗಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಸಂಗೀತ ಕ್ಷೇತ್ರದತ್ತ ಒಲವು ತೋರಬೇಕು ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಂ.ಬಿ.ಗಂಗಲ್, ಬಸವರಾಜ ದೇಸಾಯಿ, ಶ್ರೀನಿವಾಸ ಶಾಸ್ತ್ರಿ ಮಾತನಾಡಿದರು. ನಿವೃತ್ತ ಕಮಾಂಡರ್ ಸಿ.ಎಸ್.ಹವಾಲ್ದಾರ್ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದ ನಂತರ ಶಿವಮೊಗ್ಗದ ವೇಣುಗೋಪಾಲ ಹಾಗೂ ಸಂಗಮೇಶ್ವರ ಸ್ವಾದಿಮಠ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಸಂಗೀತ ವಿದ್ಯಾಲಯದ ಮಕ್ಕಳ ಗಾಯನ ಕಾರ್ಯಕ್ರಮ ಮನಸೂರೆಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.