ಹುಬ್ಬಳ್ಳಿ: `ಐದು ತಿಂಗಳ ಹಿಂದೆ ಹದಿನೇಳರ ಹರೆಯದ ತನ್ನ ಮಗಳು ಸುಶ್ಮಿತಾ ಅಪಹರಣ ಆಗಿದ್ದು, ಆರೋಪಿ ಕುರಿತು ಪೊಲೀಸರಿಗೆ ಸ್ಪಷ್ಟ ಮಾಹಿತಿ ಇದ್ದರೂ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ~ ಎಂದು ಆರೋಪಿಸಿ ಪೊಲೀಸ್ ಕಮಿಷನರ್‌ಗೆ ಬೆಂಡಿಗೇರಿ ನಿವಾಸಿ ಫ್ರಾನ್ಸಿಸ್ ಪಾಪಣ್ಣಾ ಚಿತ್ರದುರ್ಗ ಎಂಬವರು ದೂರು ನೀಡಿದ್ದಾರೆ.
`ನನ್ನ ಮಗಳನ್ನು ಸತೀಶ ಗುರಪ್ಪ ಚಲವಾದಿ ಎಂಬಾತ ಅಪಹರಿಸಿದ್ದಾನೆ. ನನಗೆ ಈ ಕುಟುಂಬದಿಂದ ಜೀವ ಭಯವಿದೆ. ಎಸಿಪಿ ಮತ್ತು ಕೇಶ್ವಾಪುರ ಠಾಣೆಯ ಪಿಎಸ್‌ಐ ಈತನ ಬೆನ್ನಿಗೆ ನಿಂತಿದ್ದಾರೆ~ ಎಂದು ದೂರಿನಲ್ಲಿ ತಿಳಿಸಿದ್ದಾರೆ.
`ಎರಡು ದಿನಗಳ ಒಳಗಾಗಿ ಮಗಳನ್ನು ಹುಡುಕಿ ಸತೀಶನನ್ನು ಬಂಧಿಸದಿದ್ದರೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮನೆ ಎದುರು ಉಪವಾಸ ಸತ್ಯಾಗ್ರಹ ಹಾಗೂ ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ~ ಎಂದಿದ್ದಾರೆ.
ಈ ಕುರಿತು `ಪ್ರಜಾವಾಣಿ~ ಜೊತೆ ಮಾತನಾಡಿದ ಕೇಶ್ವಾಪುರ ಠಾಣೆ ಪಿಎಸ್‌ಐ ಪ್ರಭುಗೌಡ ಪಾಟೀಲ, `ಸುಶ್ಮಿತಾ ಅಪಹರಣ ಪ್ರಕರಣ ಠಾಣೆಯಲ್ಲಿ ದಾಖಲಾಗಿದ್ದು, ಸತೀಶ ಆಕೆಯನ್ನು ಅಪಹರಿಸಿದ ಬಗ್ಗೆಯೂ ಮಾಹಿತಿ ಸಿಕ್ಕಿದೆ. ಆತ ಎಲ್ಲಿದ್ದಾನೆ ಎಂಬ ಬಗ್ಗೆ ಇನ್ನೂ ಗೊತ್ತಾಗಿಲ್ಲ. ಪತ್ತೆಕಾರ್ಯ ಮುಂದುವರಿದಿದೆ. ಸುಶ್ಮಿತಾಳಿಗೆ ಇನ್ನೂ ಮದುವೆ ವಯಸ್ಸು ಆಗಿಲ್ಲ. ಆತನ ಜೊತೆ ಆಕೆಯೂ ಪತ್ತೆಯಾದರೆ ಇಬ್ಬರನ್ನೂ ಕೋರ್ಟ್‌ನಲ್ಲಿ ಹಾಜರುಪಡಿಸಲಾಗುವುದು~ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.