ADVERTISEMENT

ಪ್ರಾಣಿ ಬಲಿ ತಡೆಗೆ ದಯಾನಂದ ಶ್ರೀ ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2011, 5:30 IST
Last Updated 11 ಅಕ್ಟೋಬರ್ 2011, 5:30 IST

ಹುಬ್ಬಳ್ಳಿ: `ಪ್ರಾಣಿ ಬಲಿ ತಡೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು~ ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ ದಯಾನಂದ ಸ್ವಾಮೀಜಿ ಆಗ್ರಹಿಸಿದರು.

ಬೆಳಗಾವಿ ಜಿಲ್ಲೆಯ ಕಕ್ಕೇರಿಯಲ್ಲಿ ವಿಜಯದಶಮಿ ದಿನ ನಡೆದ ಸಾವಿರಾರು ಪ್ರಾಣಿಗಳ ಸಾಮೂಹಿಕ ಬಲಿಯನ್ನು ಖಂಡಿಸಿ ಸೋಮವಾರ ನಗರದ ಓಲೆಮಠದಲ್ಲಿ ಏರ್ಪಡಿಸಿದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

`ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕಕ್ಕೇರಿ ಗ್ರಾಮದಲ್ಲಿ ವಿಜಯದಶಮಿ ದಿನ ನಸುಕಿನಲ್ಲಿ ಭಿಷ್ಠಾದೇವಿ ಜಾತ್ರೆಯಲ್ಲಿ ಪೊಲೀಸರ ಎದುರೇ ಸಾವಿರಾರು ಪ್ರಾಣಿಗಳ ಸಾಮೂಹಿಕ ಬಲಿ ನಡೆಯಿತು. ಇದಕ್ಕೆ ಸಂಬಂಧಿಸಿದವರನ್ನು ಕೂಡಲೇ ಬಂಧಿಸಬೇಕು~ ಎಂದು ಅವರು ಒತ್ತಾಯಿಸಿದರು.

ಅಖಿಲ ಕರ್ನಾಟಕ ಪ್ರಾಣಿ ದಯಾ ಸಂಘದ ರಾಜ್ಯ ಮಹಿಳಾ ಸಂಚಾಲಕಿ ಸುನಂದಾ ದೇವಿ, ಹುಬ್ಬಳ್ಳಿಯ ಚಂದ್ರಶೇಖರ ತಡಸದ, ಜೈನ ಗುರುಗಳಾದ ನರೇಶ ಮುನೀಜಿ, ಸಾಧ್ವಿ ದರ್ಶನ ಪ್ರಭಾಜಿ, ಹುಬ್ಬಳ್ಳಿ ಪಿಂಜರಾ ಪೋಳ ಸಂಸ್ಥೆಯ ಮಹಾಪೋಷಕ ಮೇಘರಾಜ ಕವಾಡ, ಜೈನ ಸ್ಥಾನಕವಾಸಿ ಶ್ರಾವಕ ಸಂಘದ ಅಧ್ಯಕ್ಷ ಜವೇರಿಲಾಲ್ ಬಾಫಣಾ, ಮೈಸೂರು ಪಿಂಜರಾ ಪೋಳ ಸಂಸ್ಥೆಯ ಗೌತಮ್ ಸಾಲೇಚ, ಗೋಶಾಲಾ ಮಹಾ ಸಂಘದ ಎಸ್.ಕೆ. ಮಿತ್ತಲ್, ಚಿತ್ರದುರ್ಗ ಗೋಶಾಲೆ ಅಧ್ಯಕ್ಷ ಕೇಶವಚಂದ್ ಬಾಫಣಾ, ಸುರೇಶಚಂದ್ ಬಾಫಣಾ, ಹಿಮಾಚಲ ಪ್ರದೇಶದ ನಾಲ್ಗಡ ಗೋಶಾಲೆಯ ಅಭಿನಂದನ ಜೈನ್ ಮೊದಲಾದವರು ಮಾತನಾಡಿದರು.

ಹುಬ್ಬಳ್ಳಿ ಪಿಂಜರಾ ಪೋಳ ಸಂಸ್ಥೆ ಹಾಗೂ ವರ್ಧಮಾನ ಜೈನ್ ಸ್ಥಾನಕವಾಸಿ ಶ್ರಾವಕ ಸಂಘಗಳ ಆಶ್ರಯದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಪ್ರತಿಭಟನೆ: ಪ್ರಾಣಿ ಬಲಿಯನ್ನು ಸಂಪೂರ್ಣವಾಗಿ ತಡೆಗಟ್ಟಬೇಕೆಂದು ಆಗ್ರಹಿಸಿ ನಗರದ ಕಿತ್ತೂರು ಚೆನ್ನಮ್ಮ ಸರ್ಕಲ್‌ನಲ್ಲಿ ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ವತಿಯಿಂದ ಸೋಮವಾರ ಪ್ರತಿಭಟನೆ ನಡೆಯಿತು.

ನಂತರ ಮಾತನಾಡಿದ ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ ದಯಾನಂದ ಸ್ವಾಮೀಜಿ `ದೇವರು ಹಾಗೂ ಧರ್ಮದ ಹೆಸರಿನಲ್ಲಿ ಪ್ರಾಣಿ ಬಲಿ ನಡೆಯುತ್ತಿದೆ. ಇದನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು~ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.