ADVERTISEMENT

ಬಜೆಟ್: ಅಭಿವೃದ್ಧಿಗೆ ಒತ್ತು

ಮಾಜಿ ಸಿಎಂ ತವರು ಜಿಲ್ಲೆಗೆ ಸಿದ್ದರಾಮಯ್ಯ ಕೃಪೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2013, 10:53 IST
Last Updated 13 ಜುಲೈ 2013, 10:53 IST

ಹುಬ್ಬಳ್ಳಿ: ಅವಳಿನಗರದ ಸಮಗ್ರ ಅಭಿವೃದ್ಧಿ ಒಳಗೊಂಡಂತೆ ಧಾರವಾಡ ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಹತ್ವದ ಕೊಡುಗೆಗಳನ್ನು ಬಜೆಟ್‌ನಲ್ಲಿ ಪ್ರಕಟಿಸಿದ್ದಾರೆ.

ಸ್ಥಳೀಯರೇ ಆದ ಜಗದೀಶ ಶೆಟ್ಟರ್ ಐದು ತಿಂಗಳ ಹಿಂದೆ ಮಂಡಿಸಿದ ಬಜೆಟ್‌ನಲ್ಲಿ ಜಿಲ್ಲೆಗೆ ಘೋಷಿಸಿದ ಕೊಡುಗೆಗಳ ಜೊತೆಗೆ ಇನ್ನಷ್ಟು ಉದಾರತೆ ಮೆರೆದಿರುವುದು ಜನಸಾಮಾನ್ಯರಲ್ಲಿ ಸಂಭ್ರಮ ಮೂಡಿಸಿದೆ.

ಧಾರವಾಡ ಸಮೀಪದ ಗುಂಗರಗಟ್ಟಿಯಲ್ಲಿ ವಲಯ ಅರಣ್ಯಾಧಿಕಾರಿಗಳ ತರಬೇತಿ ಸಂಸ್ಥೆ, ಧಾರವಾಡದಲ್ಲಿ ಉನ್ನತ ಶಿಕ್ಷಣ ಅಕಾಡೆಮಿ ಸಂಸ್ಥೆ, ಅಬ್ದುಲ್ ನಜೀರ್ ಸಾಬ್ ಗ್ರಾಮಿಣ ಅಭಿವೃದ್ಧಿ ಸಂಸ್ಥೆಯ ಪ್ರಾದೇಶಿಕ ತರಬೇತಿ ಕೇಂದ್ರ ಸ್ಥಾಪಿಸುವ ಕುರಿತು ಬಜೆಟ್‌ನಲ್ಲಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ರೂ 1,760 ಕೋಟಿ ವೆಚ್ಚದಲ್ಲಿ ಗುಲ್ಬರ್ಗ, ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ನಗರದಲ್ಲಿ ದಿನ 24 ಗಂಟೆ ನೀರು ಸರಬರಾಜು ಯೋಜನೆಯ ಉನ್ನತೀಕರಣಕ್ಕೆ ಮುಖ್ಯಮಂತ್ರಿ ಅಸ್ತು ಎಂದಿದ್ದಾರೆ. ಹೀಗಾಗಿ ಕುಡಿಯುವ ನೀರು ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವ ಸಾಧ್ಯತೆ ಇದೆ.

ಹುಬ್ಬಳ್ಳಿ ವಿಮಾನ ನಿಲ್ದಾಣ ವಿಸ್ತರಣೆಗೆ ಸಹಕಾರ ನೀಡುವ ಕುರಿತು ಬಜೆಟ್‌ನಲ್ಲಿ ಪ್ರಸ್ತಾವ ಇದೆ. ಧಾರವಾಡದಲ್ಲಿ ರೂ 128 ಕೋಟಿ ಬಂಡವಾಳದಲ್ಲಿ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ) ಸ್ಥಾಪನೆಗೆ ಸರ್ಕಾರ 45 ಕೋಟಿ ವಂತಿಕೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಪ್ರಕಟಿಸಿದ್ದಾರೆ.

ಧಾರವಾಡ ವಿಜ್ಞಾನ ಕೆಂದ್ರದಲ್ಲಿ ರೂ 1 ಕೋಟಿ ವೆಚ್ಚದಲ್ಲಿ 3ಡಿ ಪ್ರೊಜೆಕ್ಷನ್ ವ್ಯವಸ್ಥೆ ಹೊಂದಿದ ತಾರಾಲಯ ಆರಂಭ, ಹೆದ್ದಾರಿ ಗಸ್ತು ವಾಹನಗಳ ಖರೀದಿಗೆ ಹಣ, ಬೆಂಗಳೂರು, ಮೈಸೂರು, ಮಂಗಳೂರು ಬೆಳಗಾವಿ ನಗರಗಳ ಜೊತೆಗೆ ಹುಬ್ಬಳ್ಳಿ- ಧಾರವಾಡ ನಗರವನ್ನೂ ಸುರಕ್ಷಿತ ನಗರವನ್ನಾಗಿ ಮಾಡುವ ನಿಟ್ಟಿನಲ್ಲಿ ಒಟ್ಟು ರೂ 150 ಕೋಟಿ ವೆಚ್ಚ ಮಾಡುವ ಪ್ರಸ್ತಾವವನ್ನು ಬಜೆಟ್‌ನಲ್ಲಿ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ.

ಧಾರವಾಡದ ಮುತ್ತಣ್ಣ ಸ್ಮಾರಕ ಪೊಲೀಸ್ ಶಾಲೆ ನಿರ್ಮಾಣಕ್ಕೆ ನೆರವು, ಹುಬ್ಬಳ್ಳಿಯಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿ ಸ್ಥಾಪನೆ ಉತ್ತಮ ನಡೆ ಎನ್ನುವುದು ವಾಹನ ಪ್ರಿಯರ ಅಭಿಮತ. ಅದೇ ರೀತಿ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಹುಬ್ಬಳ್ಳಿ ತಾಲ್ಲೂಕಿನ ಅಂಚಟಗೇರಿಯಲ್ಲಿ 56.13 ಎಕರೆ ಪ್ರದೇಶದಲ್ಲಿ ಟ್ರಕ್ ಟರ್ಮಿನಲ್ ಹಾಗೂ ಲಾಜಿಕ್ ಪಾರ್ಕ್ ಸ್ಥಾಪನೆ, ಹುಬ್ಬಳ್ಳಿ- ಅಂಕೋಲ ರೈಲು ಮಾರ್ಗ ನಿರ್ಮಾಣ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಸಹಕಾರ, 2013-14ನೇ ಸಾಲಿನಲ್ಲಿ ವಿಶ್ವ ಬ್ಯಾಂಕ್ ನೆರವಿನಿಂದ ಧಾರವಾಡ -ಸವದತ್ತಿ ಮಧ್ಯೆ ಮತ್ತು ಸಾರ್ವಜನಿಕ- ಖಾಸಗಿ ಸಹಭಾಗಿತ್ವದಲ್ಲಿ ಧಾರವಾಡ - ಅಳ್ನಾವರ ಮಧ್ಯ 60 ಕಿ.ಮೀ ರಾಜ್ಯ ಹೆದ್ದಾರಿ ಅಭಿವೃದ್ಧಿಗೊಳಿಸಲಾಗುವುದು ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ.

ಗ್ರಾಮೀಣ ಬಿಪಿಒ ವಲಯಗಳ ಸಾಧ್ಯತೆಗಳ ಪುನರ್ ಪ್ರಾಯೋಜಿಸುವ ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ಐಸಿಟಿ)ಕ್ಕೆ ಬಂಡವಾಳ ಹೂಡಿಕೆ ಪ್ರೋತ್ಸಾಹಿಸಲು ಮತ್ತು ಬೆಂಗಳೂರಿನ ಎಂ.ಜಿ. ರಸ್ತೆ ಮತ್ತು ಬ್ರಿಗೇಡ್ ರಸ್ತೆಯಲ್ಲಿ ಪ್ರಾಯೋಗಿಕವಾಗಿ ಆರಂಭಿಸಿರುವ ಸಾರ್ವಜನಿಕ ವೈ-ಫೈ ಪೈಲಟ್ ಕೇಂದ್ರಗಳನ್ನು ಮಂಗಳೂರು, ಮೈಸೂರು ಜೊತೆಗೆ ಹುಬ್ಬಳ್ಳಿ-ಧಾರವಾಡ ನಗರದಲ್ಲೂ ಆರಂಭಿಸಲು ಉದ್ದೇಶಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.