ADVERTISEMENT

ಬಡಮಕ್ಕಳಿಗಾಗಿ ಉಚಿತ ಶಿಬಿರ

ಗಣೇಶ ಅಮಿನಗಡ
Published 21 ಏಪ್ರಿಲ್ 2013, 8:22 IST
Last Updated 21 ಏಪ್ರಿಲ್ 2013, 8:22 IST

ಬೇಸಿಗೆ ಶಿಬಿರಗಳು ಅವಳಿನಗರದಲ್ಲಿ ಅನೇಕ ಕಡೆ ನಡೆಯುತ್ತವೆ. ಶುಲ್ಕಸಹಿತ ಶಿಬಿರ ನಡೆಸುವುದು ಸಾಮಾನ್ಯ. ಆದರೆ ಉಚಿತವಾಗಿ ಶಿಬಿರ ನಡೆಸುವುದು ಅಪರೂಪ. ನಗರದ ಬೆಂಗೇರಿಯ ರೋಟರಿ ಕನ್ನಡ ಹಾಗೂ ಇಂಗ್ಲಿಷ್ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಯ ಮೂರನೆಯ ಮಹಡಿಯಲ್ಲಿ ನಡೆಯುತ್ತಿರುವ ಶಿಬಿರದಲ್ಲಿ ಗೋಪನಕೊಪ್ಪ, ಬೆಂಗೇರಿ, ವೆಂಕಟೇಶ ಕಾಲೊನಿ, ಒಡ್ಡರ ಓಣಿ, ಕೇಶ್ವಾಪುರ ಮೊದಲಾದ ಪ್ರದೇಶಗಳ ಬಡ ಹಾಗೂ ಕೊಳೆಗೇರಿಯ 87 ಮಕ್ಕಳು ಪಾಲ್ಗೊಂಡಿದ್ದಾರೆ.

15 ದಿನಗಳ ಈ ಶಿಬಿರದ ನಿರ್ದೇಶಕಿ ರಂಗಕರ್ಮಿ ವೀಣಾ ಅಠವಲೆ (ಮೋಡಕ). ನಿತ್ಯ ಬೆಳಿಗ್ಗೆ ಯೋಗ, ಧ್ಯಾನ ಮಾಡಿಸುತ್ತಾರೆ. ನಂತರ ಪೇಪರ್ ಕಟ್ಟಿಂಗ್, ರದ್ದಿ ಹಾಳೆಯಿಂದ ಪೆನ್‌ಸ್ಟ್ಯಾಂಡ್, ಟ್ರೇ, ಮುಖವಾಡ ಮಾಡುವುದನ್ನು ಕಲಿಸುತ್ತಾರೆ. ಶಿಕ್ಷಕಿ ಮಹಾಲಕ್ಷ್ಮಿ ಜೋಶಿ ಸಂಗೀತ ಕಲಿಸಿದ್ದಾರೆ. ಸುನಿಧಿ ನೃತ್ಯ ಕಲಿಸಿದ್ದಾರೆ. ಇದನ್ನು ಸುನಿಧಿ ಸೌರಭ ಸಂಸ್ಥೆಯಡಿ ಆಯೋಜಿಸಲಾಗಿದೆ. `ಬಡಮಕ್ಕಳಿಗೂ ಉತ್ತಮ ಸಂಸ್ಕಾರ ನೀಡುವುದು ನಮ್ಮ ಸಂಸ್ಥೆಯ ಉದ್ದೇಶವಾಗಿತ್ತು. ಅದು ಈಡೇರಿದೆ' ಎನ್ನುವ ವೀಣಾ ಅವರೊಂದಿಗೆ ಸೌರಭ, ಸುನಿಧಿ, ಶುಭಾಂಗಿ ಸಹಕರಿಸುತ್ತಿದ್ದಾರೆ.

ನಿತ್ಯ ಸಂಪನ್ಮೂಲ ವ್ಯಕ್ತಿಗಳು ಶಿಬಿರದ ಮಕ್ಕಳಿಗೆ ಉಪನ್ಯಾಸ ನೀಡಿದ್ದಾರೆ. ಈಗಾಗಲೇ ಗದಗಿನಿಂದ ಬಂದು ದಲಭಂಜನ ಕೋಲಾಟ ಕಲಿಸಿದ್ದಾರೆ. ಮಕ್ಕಳ ಸಾಹಿತಿ ನಿಂಗಣ್ಣ ಕುಂಟಿ ಸಂವಾದ ನೀಡಿದ್ದಾರೆ. ರೋಣದಿಂದ ಬಂದಿದ್ದ ಎಚ್.ಕೆ. ಕಾಳಿ ಪೇಪರ್ ಕಟ್ಟಿಂಗ್ ಕುರಿತು ಮಾಹಿತಿ ನೀಡಿದ್ದಾರೆ. ಶಶಿಧರ ನರೇಂದ್ರ ಆಕಾಶವಾಣಿಯನ್ನು ಪರಿಚಯಿಸಿದ್ದಾರೆ. ಧಾರವಾಡ ರಂಗಾಯಣದ ನಿರ್ದೇಶಕ ಸುಭಾಷ ನರೇಂದ್ರ ರಂಗಭೂಮಿ ಕುರಿತು ಉಪನ್ಯಾಸ ನೀಡಿದ್ದಾರೆ.

ಇದರೊಂದಿಗೆ ಮಹೇಂದ್ರಭಾಯಿ ಠಕ್ಕರ್ ಅವರ ಎಲ್‌ವಿಟಿ ಬಿಸ್ಕೆಟ್ ಕಾರ್ಖಾನೆ, ಕೆಎಂಎಫ್ ನಂದಿನಿ ಹಾಗೂ ಅಗಸ್ತ್ಯ ಫೌಂಡೇಶನ್ ಭೇಟಿ ನೀಡುವ ಪ್ರವಾಸದ ಪಟ್ಟಿಯೂ ಇದೆ. ಈಗಾಗಲೇ ಕೋಲಾಟ, ಪ್ರಹಸನ, ಸಮೂಹ ಗೀತೆ, ಜಾನಪದ ಗೀತೆ ಕಲಿತಿರುವ ಮಕ್ಕಳಿಗೆ ಶಿಬಿರದ ಕೊನೆಯ ದಿನವಾದ ಇದೇ 26ರಂದು ವಿವಿಧ ಸ್ಪರ್ಧೆಗಳನ್ನೂ ಏರ್ಪಡಿಸಲಾಗಿದೆ. ನಂತರ ಬಹುಮಾನಗಳನ್ನು ವಿತರಿಸಲಾಗುತ್ತದೆ. `ಶಿಬಿರದಲ್ಲಿ ಪಾಲ್ಗೊಂಡ ಎಲ್ಲ ಮಕ್ಕಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಗುತ್ತದೆ. ರೋಟರಿ ಶಾಲೆಯ ಕಾರ್ಯದರ್ಶಿ, ಪ್ರಾಚಾರ್ಯರಾದ ಬಿಸೆಲ್ ಡಿಸೋಜಾ ಶಿಬಿರಕ್ಕಾಗಿ ಜಾಗವನ್ನು ನೀಡಿದ್ದಾರೆ. ಸಂಘ-ಸಂಸ್ಥೆ, ಸರ್ಕಾರದ ಪ್ರಾಯೋಜಕತ್ವ ಪಡೆದಿಲ್ಲ. ಸುನಿಧಿ ಸೌರಭ ಸಂಸ್ಥೆ ಅಧ್ಯಕ್ಷ ಸುಭಾಷ ನರೇಂದ್ರ ಆರ್ಥಿಕವಾಗಿ ನೆರವಾಗಿದ್ದಾರೆ' ಎಂದು ವೀಣಾ ಅಠವಲೆ ವಿವರಿಸಿದರು.

`ಬಡಮಕ್ಕಳೂ ಸ್ಪರ್ಧಾತ್ಮಕ ಜಗತ್ತಿಗೆ ಮುನ್ನುಗ್ಗಲಿ ಎನ್ನುವ ಉದ್ದೇಶದಿಂದ ಈ ಶಿಬಿರ ಹಮ್ಮಿಕೊಂಡಿದ್ದೇವೆ. ಇದು ನಾಲ್ಕನೆಯ ವರ್ಷದ ಶಿಬಿರ. ಮಧ್ಯಾಹ್ನದ ಬಿಸಿಯೂಟವನ್ನು ಇಸ್ಕಾನ್ ಪ್ರಾಯೋಜಿಸಿದೆ. ಇದಕ್ಕೆ ಬಿಇಒ ಹಂಚಾಟೆ ನೆರವಾಗಿದ್ದಾರೆ. ವೀಣಾ ಅಠವಲೆ ತಮ್ಮ ಪಗಾರದ ದುಡ್ಡಲ್ಲಿ ಮಕ್ಕಳಿಗೆ ಬೇಕಾದ ಸಾಮಗ್ರಿ ಒದಗಿಸಿದ್ದಾರೆ' ಎನ್ನುತ್ತಾರೆ ಸುಭಾಷ ನರೇಂದ್ರ. 

`ಬೇಸಿಗೆಯ ರಜೆಯಲ್ಲಿ ಬಿಸಿಲಲ್ಲಿ ತಿರುಗಾಡಿಕೊಂಡಿದ್ದೆ. ಆದರೆ ಈ ಶಿಬಿರದಿಂದ ಬಹಳ ಪ್ರಯೋಜನವಾಗಿದೆ' ಎನ್ನುತ್ತಾನೆ 9ನೇ ತರಗತಿ ವಿದ್ಯಾರ್ಥಿ ಪ್ರಮೋದ ರೋಣದ. ರೇಖಾ ಹಂಚಿನವರ, ವೈಷ್ಣವಿ ಬಂಡಿ ಮೊದಲಾದ ವಿದ್ಯಾರ್ಥಿಗಳು ಈ ಬೇಸಿಗೆಯನ್ನು ಸಾರ್ಥಕವಾಗಿ ಕಳೆದ ಖುಷಿಯಲಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.