ADVERTISEMENT

ಬಣವೆಗೆ ಬೆಂಕಿ: ಲಕ್ಷಾಂತರ ಮೌಲ್ಯದ ಮೇವು ಹಾನಿ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2012, 7:30 IST
Last Updated 6 ಆಗಸ್ಟ್ 2012, 7:30 IST

ಧಾರವಾಡ: ಬಣವೆಗೆ ಬೆಂಕಿ ತಗುಲಿ ಸುಮಾರು ರೂ 1. 30 ಲಕ್ಷ ಮೌಲ್ಯದ  ಮೇವು ಬೆಂಕಿಗೆ ಆಹುತಿಯಾದ ಘಟನೆ ತಾಲ್ಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ಶನಿವಾರ ರಾತ್ರಿ ಸಂಭವಿಸಿದೆ.

 ಗಂಗಪ್ಪ ಮಡಿವಾಳರ ಎಂಬುವವರಿಗೆ ಸೇರಿದ ಬಣವೆಗಳೇ ಬೆಂಕಿಗೆ ಆಹುತಿ ಯಾಗಿವೆ. ಹಾರೋಬೆಳವಡಿ ರಸ್ತೆಗೆ ಹೊಂದಿಕೊಂಡಿರುವ ಅವರ ಹೊಲದಲ್ಲಿ ಸುಮಾರು ಐದು ಬಣವೆಗಳನ್ನು ಅವರು ಒಟ್ಟಿದ್ದರು. ಶನಿವಾರ ರಾತ್ರಿ ಯಾರೋ ಕಿಡಗೇಡಿಗಳು  ಬಣವೆಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಎರಡು ಕಣಕಿ ಬಣವೆ ಸೇರಿದಂತೆ ಒಂದು ಹೊಟ್ಟಿನ ಬಣವೆ ಬೆಂಕಿಗಾಹುತಿಯಾಗಿ ರಾತ್ರಿ ಪೂರ್ತಿ ದಗದಗ ಉರಿದು ಹೋಗಿವೆ.

 ರಾತ್ರಿ ಸಮಯದಲ್ಲಿ ಯಾರೂ ಅಲ್ಲಿ ಇಲ್ಲವಾದ್ದರಿಂದ ಬೆಂಕಿ ತಗುಲಿದ ವಿಷಯ ಅವರ ಮನೆಯವರಿಗಾಗಲಿ ಹಾಗೂ ಗ್ರಾಮಸ್ಥರಿಗಾಗಲಿ ತಿಳಿದು ಬಂದಿಲ್ಲ. ಬೆಳಗಿನ ಜಾವ ಬೆಂಕಿ ಉರಿಯುತ್ತಿ ರುವುದನ್ನು ಗಮನಿಸಿದವರು ತಕ್ಷಣ ಅವರ ಮನೆಯವರಿಗೆ ತಿಳಿಸಿದ್ದಾರೆ. ಮನೆಯವರು ಹಾಗೂ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ, ಅಗ್ನಿಶಾಮಕ ದಳದವರಿಗೆ ತಿಳಿಸಿದ್ದಾರೆ. ಅಷ್ಟೊತ್ತಿಗಾಗಲೇ ಬಣವೆಗಳು ಉರಿದು ಭಸ್ಮವಾಗಿದ್ದವು. ಆದರೆ ಅದರ ಹತ್ತಿರದಲ್ಲೇ ಇದ್ದ ಎರಡು ಬಣವೆಗಳಿಗೆ ಬೆಂಕಿ ತಗುಲಿರಲಿಲ್ಲ.

ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ತಕ್ಷಣ ನಂದಿಸಿದ್ದರಿಂದ ಉಳಿದ ಎರಡು ಬಣವೆಗಳು ಬೆಂಕಿಯಾಹುತಿಯಿಂದ ಪಾರಾಗಿವೆ. ಮಳೆ ಇಲ್ಲ ಬೆಳೆ ಇಲ್ಲ. ಕಾಳು ಕಡಿಯಂತೂ ಮೊದಲೇ ಇಲ್ಲ. ಮುನು ಷ್ಯರು ಹೇಗಾದರೂ ಬದುಕ ಬಹುದು ಆದರೆ ಮೂಖ ಪ್ರಾಣಿಗಳ ಹೊಟ್ಟೆಗೆ ಏನು ಮಾಡೋದು.

ಇದ್ದ ಹೊಟ್ಟಿನ ಬಣವೆ ಗಳಿಗೆ ಕಿಡಗೇಡಿಗಳು ಬೆಂಕಿ ಹಚ್ಚಿ ಹೋಗಿದ್ದಾರೆ. ಇದು ಉದ್ದೇಶ ಪೂರ್ವಕ ವಾಗಿಯೇ ಮಾಡಿದ ಕೃತ್ಯವಾಗಿದೆ ಎಂದು ಗಂಗಪ್ಪ ಮಡಿವಾಳರ ಅವರ ಮಗ ಶಂಕರ ಮಡಿವಾಳರ `ಪ್ರಜಾವಾಣಿಗೆ~ ತಿಳಿಸಿದರು.

ಗ್ರಾಮಕ ಲೆಕ್ಕಿಗ ಹಾಗೂ ಕುಮಾರ ಪಡೆಪ್ನವರ, ಎಪಿಎಂಸಿ ಸದಸ್ಯ ಚನ್ನಬಸಪ್ಪ ಮಸೂತಿ ಹಾಗೂ ಗ್ರಾ.ಪಂ.ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.