ADVERTISEMENT

ಬಹುರೂಪಿ ಉತ್ಸವ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2011, 9:05 IST
Last Updated 8 ಏಪ್ರಿಲ್ 2011, 9:05 IST
ಬಹುರೂಪಿ ಉತ್ಸವ
ಬಹುರೂಪಿ ಉತ್ಸವ   

ಧಾರವಾಡ: ಟಿವಿ ಮತ್ತು ಸಿನೆಮಾ ಅಬ್ಬರದ ನಡುವೆ ರಂಗಭೂಮಿ ಚಟುವಟಿಕೆಗಳು ಕಡಿಮೆಯಾಗುತ್ತಿವೆ ಎಂದು ಅನಿಸಿದರೂ ಸಹ ಅವು ಕೊಡುವಂಥ ಅನುಭವ ವಿಶಿಷ್ಟವಾದುದು. ನಾಟಕಗಳು ರಂಜನೆ ಮತ್ತು ತಿಳಿವಳಿಕೆ ಜೊತೆ ಕೇಳುವ, ನೋಡುವ, ಪ್ರಜ್ಞೆಯನ್ನು ಜಾಗೃತಗೊಳಿಸುತ್ತಿವೆ ಎಂದು ಬೇಂದ್ರೆ ಟ್ರಸ್ಟ್ ಅಧ್ಯಕ್ಷ ಡಾ. ಶ್ಯಾಮಸುಂದರ ಬಿದರಕುಂದಿ ಹೇಳಿದರು.

ಇಲ್ಲಿನ ಪಂಡಿತ ಬಸವರಾಜ ರಾಜಗುರು ಬಯಲು ರಂಗಮಂದಿರದಲ್ಲಿ ರಂಗಾಯಣ ಆಯೋಜಿಸಿರುವ ಬಹುರೂಪಿ ನಾಟಕೋತ್ಸವವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು, ನಾಲ್ಕು ದಿನಗಳ ಕಾಲ ನಡೆಯುವ ಈ ನಾಟಕೋತ್ಸವದಲ್ಲಿ ವಿಭಿನ್ನ ದೇಶ, ಭಾಷೆ, ವಿಶಿಷ್ಟ ಪ್ರಕಾರಗಳ ನಾಟಕಗಳು ಕನ್ನಡಕ್ಕೆ ಅನುವಾದಗೊಂಡು ಇಲ್ಲಿನ ಪ್ರೇಕ್ಷಕರಿಗೆ ಹೊಸ ಅನುಭವ ನೀಡುತ್ತವೆ ಎಂದರು.

ಶಾಸಕ ಚಂದ್ರಕಾಂತ ಬೆಲ್ಲದ, ಧಾರವಾಡ ಸಾಂಸ್ಕೃತಿಕ ನಗರಿ ಎಂದು ಖ್ಯಾತಿಯಾಗಿದ್ದು, ಹೊಸ ಹೊಸ ಪ್ರಯೋಗಗಳ ತವರೂರು. ಎಲ್ಲ ಕ್ಷೇತ್ರಗಳಲ್ಲೂ ಪ್ರತಿಭಾವಂತ ಕಲಾವಿದರಿದ್ದಾರೆ. ರಂಗಭೂಮಿಗೆ ಸಾಂಸ್ಕೃತಿಕ ಚಟುವಟಿಕೆಗೆ ಪೂರಕವಾದಂಥ ವಾತಾವರಣ ಈ ನಗರದಲ್ಲಿದೆ. ಈ ನಿಟ್ಟಿನಲ್ಲಿ ಈಗ ನಡೆಯುತ್ತಿರುವ ನಾಟಕೋತ್ಸವ ಸಹ ಒಂದು ಹೊಸ ರೀತಿಯ ಪ್ರಯೋಗ ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ರಂಗಾಯಣದ ನಿರ್ದೇಶಕ ಲಿಂಗದೇವರು ಹಳೇಮನಿ, ಧಾರವಾಡ ರಂಗಾಯಣ ಮೈಸೂರಿನ ನೆರಳಿನಲ್ಲಿ ಕೆಲಸ ಮಾಡುವಂತಾಗಬಾರದು. ಅದು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಬೇಕು ಎನ್ನುವ ಅಪೇಕ್ಷೆ, ಒತ್ತಾಸೆ ನಮ್ಮೆಲ್ಲರದ್ದೂ ಹೌದು. ಈ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ಶೀಘ್ರದಲ್ಲಿಯೇ 15 ಜನ ಕಲಾವಿದರನ್ನು ಆಯ್ಕೆ ಮಾಡಿ ಪೂರ್ಣ ಪ್ರಮಾಣದ ರೆಪರ್ಟರಿ ಆರಂಭಿಸಲಾಗುವುದು. ಮುಂದಿನ ವರ್ಷದಿಂದ ಧಾರವಾಡದಲ್ಲಿ ಬಹುರೂಪಿ ಬದಲಾಗಿ ಮೈಸೂರಿನಲ್ಲಿ ನಡೆಯುವ ಹಾಗೇ ಐದು ದಿನಗಳ ಕಾಲ ನಾಟಕೋತ್ಸವ ನಡೆಸಲುದ್ದೇಶಿಸಿದ್ದು, ಅದಕ್ಕೆ ‘ಗ್ರೀಷ್ಮ ರಂಗೋತ್ಸವ’ ಎಂದು ಹೆಸರಿಡಲಾಗುವುದು. ಈ ಭಾಗದ ಮೇಧಾವಿ ನಾಟಕಕಾರ ಜಯತೀರ್ಥ ಜೋಶಿ ನೆನಪಿನೊಳಗೆ ಈ ನಾಟಕೋತ್ಸವ ಆರಂಭಿಸಲಾಗುವುದು ಎಂದು ಹೇಳಿದರು.

ಇಷ್ಟೆಲ್ಲ ಕಾರ್ಯಕ್ರಮಗಳು ಸುಗಮವಾಗಿ ನಡೆಯಲು ಇಲ್ಲಿ ಸುಸಜ್ಜಿತ ರಂಗಮಂದಿರದ ಅವಶ್ಯಕತೆ ಇದೆ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು. ಪಾಲಿಕೆಯಿಂದ ಬಹು ವರ್ಷದವರೆಗೆ ಬಯಲು ರಂಗಮಂದಿರವನ್ನು ರಂಗಾಯಣಕ್ಕೆ ಲೀಸ್ ಆಧಾರದ ಮೇಲೆ ನೀಡುವ ವ್ಯವಸ್ಥೆ ಮಾಡಬೇಕು ಎಂದರು. ಶ್ರೀವಲ್ಲಿ ಲೋಕೇಶ ಪ್ರಾರ್ಥನಾ ಗೀತೆ ಹಾಡಿದರು. ರಂಗಾಯಣ ಮುಖ್ಯಸ್ಥ ಸಂತೋಷಕುಮಾರ ಕುಸನೂರ ಸ್ವಾಗತಿಸಿದರು.  ರವಿ ಕುಲಕರ್ಣಿ ನಿರೂಪಿಸಿ, ವಂದಿಸಿದರು. ನಂತರ ವಿಶ್ವೇಶ್ವರಿ ಹಿರೇಮಠ ನಿರ್ದೇಶನದಲ್ಲಿ ‘ನಂದ ಭೂಪತಿ’ ನಾಟಕ ಪ್ರದರ್ಶನಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.