ADVERTISEMENT

ಬಾಲ್ಯವಿವಾಹಕ್ಕೆ ಕಡಿವಾಣ ಅವಶ್ಯ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2011, 6:30 IST
Last Updated 17 ಮಾರ್ಚ್ 2011, 6:30 IST
ಬಾಲ್ಯವಿವಾಹಕ್ಕೆ ಕಡಿವಾಣ ಅವಶ್ಯ
ಬಾಲ್ಯವಿವಾಹಕ್ಕೆ ಕಡಿವಾಣ ಅವಶ್ಯ   

ಧಾರವಾಡ: “ಬಡತನ, ಅಜ್ಞಾನ ಹಾಗೂ ಜವಾಬ್ದಾರಿ ಕಳೆದುಕೊಳ್ಳುವ ಸಂಪ್ರದಾಯಗಳಿಂದಾಗಿ ಬಾಲ್ಯವಿವಾಹ ನಡೆಯುತ್ತಿದ್ದು, ಇದನ್ನು ತಡೆಗಟ್ಟಲು ಪ್ರತಿಯೊಬ್ಬರಲ್ಲಿಯೂ ಅರಿವು ಮೂಡಿಸುವುದು ಅವಶ್ಯವಾಗಿದೆ” ಎಂದು ರಾಜ್ಯಮಟ್ಟದ ಬಾಲ್ಯವಿವಾಹ ತಡೆ ಕೋರ್ ಕಮೀಟಿ ಅಧ್ಯಕ್ಷ ನ್ಯಾಯಮೂರ್ತಿ ಡಾ. ಶಿವಾರಜ ಪಾಟೀಲ ಹೇಳಿದರು.

ಇಲ್ಲಿನ ಆಲೂರು ವೆಂಕಟರಾವ್ ಸಭಾಭವನದಲ್ಲಿ ನಡೆದ ಬಾಲ್ಯವಿವಾಹ ತಡೆಗಟ್ಟುವ ಜಿಲ್ಲಾ ಮಟ್ಟದ ಸಮಾಲೋಚನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹೈಕೋರ್ಟ ನಿರ್ದೇಶನದಂತೆ ಸರ್ಕಾರ ಆಂತರಿಕ ಸಮಿತಿ ರಚಿಸಿದ್ದು, ಈ ಸಮಿತಿ ಮುಂದಿನ ಆರು ತಿಂಗಳಲ್ಲಿ ಬಾಲ್ಯವಿವಾಹ ತಡೆಗಟ್ಟಲು ಸಮಾಲೋಚನೆ ಸಭೆಗಳನ್ನು ನಡೆಸಿ ಕ್ರಿಯಾಯೋಜನೆಯನ್ನು ಸಿದ್ಧಪಡಿಸಲಿದೆ ಎಂದರು.

ಮಹಿಳಾ ಮತ್ತು ಕಲ್ಯಾಣ ಇಲಾಖೆಯ ವರದಿಯನ್ನು ಗಮನಿಸಿದರೆ, ಇತ್ತೀಚೆಗೆ ಬಾಲ್ಯವಿವಾಹ ಸಂಖ್ಯೆ ಕಡಿಮೆ ಆಗಿದೆ. ಈ ಪದ್ಧತಿಯಿಂದ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದ್ದು, ಇದು ಸಮಾಜಕ್ಕೂ ಕೂಡ ಅಪಮಾನವಾದಂತೆ. ಇದನ್ನು ತಡೆಯುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.ಜಿಲ್ಲಾಧಿಕಾರಿ ದರ್ಪಣ ಜೈನ್ ಮಾತನಾಡಿ, ಬಾಲ್ಯವಿವಾಹ ಪದ್ಧತಿಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಗ್ರಾಮಾಂತರ ಪ್ರದೇಶಗಳಲ್ಲಿ ಜಾನಪದ ಕಲಾತಂಡಗಳ ಮೂಲಕ ಅರಿವು ಮೂಡಿಸುವ ಕೆಲಸ ನಡೆಯಬೇಕು. ಗ್ರಾಮಸಭೆ, ಜಾಗೃತಿ ಸಮಿತಿಗಳು, ಶಾಲಾ- ಕಾಲೇಜುಗಳಲ್ಲಿ ಉಪನ್ಯಾಸ ಹಾಗೂ ಧಾರ್ಮಿಕ ಮುಖಂಡರ ಮೂಲಕ ತಿಳಿವಳಿಕೆ ಕಾರ್ಯಕ್ರಮ ನಡೆಸಿದರೆ ಪರಿಣಾಮಕಾರಿ ಆಗುತ್ತದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ದಿಲೀಪ, ತಮ್ಮ ಇಲಾಖೆಯಿಂದ ಎಲ್ಲ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಕಿಡ್ಸ್ ಸಂಸ್ಥೆಯ ಅಶೋಕ ಯರಗಟ್ಟಿ, ಕಾನೂನು ಕಾಲೇಜಿನ ಪ್ರಾಚಾರ್ಯ ಡಾ. ಸಿ.ಎಸ್.ಪಾಟೀಲ ಸಲಹೆಗಳನ್ನು ನೀಡಿದರು. ಜಿಲ್ಲಾ ನ್ಯಾಯಾಧೀಶ ಕೆ.ನಟರಾಜನ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಫಾತಿಮಾ ವೇದಿಕೆಯಲ್ಲಿದ್ದರು.

ಇಲಾಖೆಯ ಕಾರ್ಯದರ್ಶಿ ಸೀತಾರಾಮ್ ಸ್ವಾಗತಿಸಿದರು. ಸರೋಜಾ ಕಡೇಮನಿ ವಂದಿಸಿದರು. ಧಾರವಾಡ ಜಿಲ್ಲೆಯ ನಂತರ, ಗದಗ ಜಿಲ್ಲೆಯ ಸಮಾಲೋಚನೆ ಸಭೆ ನಡೆಯಿತು. 17 ರಂದು ಬೆಳಗಾವಿ ಜಿಲ್ಲೆಯ ಸಮಾಲೋಚನೆ ಸಭೆ ನಡೆಯಲಿದ್ದು, ಮಧ್ಯಾಹ್ನ 2.15ಕ್ಕೆ ಸಾರ್ವಜನಿಕರೊಂದಿಗೆ ಸಂವಾದ ನಡೆಯುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.