ADVERTISEMENT

ಬಿಜೆಪಿಯಿಂದ ಮುಸ್ಲಿಂ ಸಮುದಾಯಕ್ಕೆ ದ್ರೋಹ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2012, 5:30 IST
Last Updated 20 ಫೆಬ್ರುವರಿ 2012, 5:30 IST

ಹುಬ್ಬಳ್ಳಿ: `ಕಳೆದ ಬಜೆಟ್‌ನಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಿಟ್ಟಿದ್ದ ಹಣವನ್ನು ಖರ್ಚು ಮಾಡದಿರುವ ಮೂಲಕ ಬಿಜೆಪಿ ಸರ್ಕಾರವು ಮುಸ್ಲಿಮರಿಗೆ ದ್ರೋಹ ಬಗೆದಿದೆ~ ಎಂದು ಜೆಡಿಎಸ್ ರಾಜ್ಯ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.

ಜೆಡಿಎಸ್ ಅಲ್ಪಸಂಖ್ಯಾತರ ಘಟಕವು ನಗರದಲ್ಲಿ ಏರ್ಪಡಿಸಿದ್ದ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, `ಸರ್ಕಾರವು ಮೆಟ್ರಿಕ್‌ಪೂರ್ವ ತರಗತಿಗಳಲ್ಲಿ ಓದುತ್ತಿರುವ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆಂದು 38 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿತ್ತು. ಫೆಬ್ರುವರಿ 15ರವರೆಗಿನ ದಾಖಲೆಗಳನ್ನು ತರಿಸಿದಾಗ, ಕೇವಲ 3.48 ಕೋಟಿ ಮಾತ್ರ ಬಿಡುಗಡೆ ಮಾಡಿದ್ದು ಗೊತ್ತಾಗಿದೆ. ಅಲ್ಲದೇ ಅಲ್ಪಸಂಖ್ಯಾತರ ಮಕ್ಕಳಿಗೆಂದು 12 ಕೋಟಿಯನ್ನು ಪ್ರತ್ಯೇಕವಾಗಿ ತೆಗೆದಿರಿಸಿತ್ತು. ಅದರಲ್ಲೂ ಕೇವಲ ರೂ 1.20 ಕೋಟಿ ಬಿಡುಗಡೆ ಮಾಡಿದೆ. ಇದು ಬಿಜೆಪಿಯು ಮುಸ್ಲಿಮರ ಬಗ್ಗೆ ಹೊಂದಿರುವ ಧೋರಣೆಯನ್ನು ತೋರಿಸುತ್ತದೆ~ ಎಂದು ಹೇಳಿದರು.

`ನಾನು ಮುಖ್ಯಮಂತ್ರಿ ಆಗಿದ್ದಾಗ ಹಜ್ ಭವನ ನಿರ್ಮಾಣಕ್ಕೆಂದು 5.5 ಎಕರೆ ಜಾಗವನ್ನು ಯಲಹಂಕದಲ್ಲಿ ತೆಗೆದಿರಿಸಿದ್ದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಅದನ್ನು ವಾಪಸ್ ಪಡೆದು ವಕ್ಫ್ ಬೋರ್ಡ್‌ನ ಜಾಗದಲ್ಲೇ ಭವನ ನಿರ್ಮಾಣ ಮಾಡುತ್ತಿದೆ. ಅದರ ಮಾಲೀಕತ್ವವನ್ನು ವಕ್ಫ್ ಬೋರ್ಡ್‌ಗೆ ಹಸ್ತಾಂತರಿಸುವ ಬದಲು ಅಲ್ಪಸಂಖ್ಯಾತರ ಆಯೋಗದ ಅಧೀನಕ್ಕೆ ಒಳಡಿಸುತ್ತಿದೆ~ ಎಂದು ಟೀಕಿಸಿದರು.

`ಕಾಂಗ್ರೆಸ್ ಸರ್ಕಾರವೂ ಇಲ್ಲಿಯವರೆಗೆ ಮುಸ್ಲಿಮರನ್ನು ಬರೀ ವೋಟ್ ಬ್ಯಾಂಕನ್ನಾಗಿ ದುರ್ಬಳಕೆ ಮಾಡಿಕೊಂಡಿದೆ. ಅಲ್ಪಸಂಖ್ಯಾತರ ವಿರೋಧಿಯಾದ ಯಾವುದೇ ಕ್ರಮವನ್ನು ಜೆಡಿಎಸ್ ಮೊದಲಿನಿಂದಲೂ ಖಂಡಿಸುತ್ತಾ ಬಂದಿದೆ. ಆದರೆ ಕಾಂಗ್ರೆಸ್ ಬಾಯಿಮುಚ್ಚಿಕೊಂಡು ತೆಪ್ಪಗೆ ಕುಳಿತಿದೆ~ ಎಂದು ಹರಿಹಾಯ್ದರು.

`ಇಲ್ಲಿಯವರೆಗೆ ಕಾಂಗ್ರೆಸ್‌ಗೆ ಅವಕಾಶ ಕೊಟ್ಟಿದ್ದೀರಿ. ಇದೀಗ ನಮಗೂ ಐದು ವರ್ಷ ಅಧಿಕಾರ ಕೊಟ್ಟು ನೋಡಿ. ನೀವು ಸಹಕಾರ ನೀಡಿದರೆ ಜೆಡಿಎಸ್‌ಗೆ 130 ಸೀಟು ಕಷ್ಟವೇನಲ್ಲ. ಅಷ್ಟು ಸೀಟು ಬರದಿದ್ದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ~ ಎಂದು ಹೇಳಿದರು.

ಜೆಡಿಎಸ್ ಮಹಾಪ್ರಧಾನ ಕಾರ್ಯದರ್ಶಿ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, `ಆರ್‌ಎಸ್‌ಎಸ್‌ನ ಕೈವಾಡದಿಂದಾಗಿ ಇತ್ತೀಚೆಗೆ ಸಿಂದಗಿಯಲ್ಲಿ ಧ್ವಜ ಹಾರಿಸುವ ಪ್ರಕರಣ ನಡೆದಿದ್ದು, ಅದನ್ನು ಜೆಡಿಎಸ್ ಮಾತ್ರ ಖಂಡಿಸಿದೆ. ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಅಲ್ಪಸಂಖ್ಯಾತರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಶೇ 4ರಷ್ಟು ಮೀಸಲಾತಿ ಕಲ್ಪಿಸುವ ಮೂಲಕ ಸಹಾಯ ಮಾಡಿದರು~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.