ADVERTISEMENT

ಬಿಜೆಪಿಯಿಂದ ವಂಚನೆ: ಆರೋಪ

​ಪ್ರಜಾವಾಣಿ ವಾರ್ತೆ
Published 17 ಜೂನ್ 2011, 9:50 IST
Last Updated 17 ಜೂನ್ 2011, 9:50 IST

ಅಣ್ಣಿಗೇರಿ: ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರ ರಾಜ್ಯದ ಅಭಿವೃದ್ಧಿಗಾಗಿ ನೀಡಿದ ಅಪಾರ ಅನುದಾನವನ್ನು ಬಿಜೆಪಿ ತನ್ನದೇ ಸಾಧನೆ ಎಂಬಂತೆ ಬಿಂಬಿಸುತ್ತಿದೆ. ಯಾರದೋ ರೊಕ್ಕ, ಯಲ್ಲಮ್ಮನ ಜಾತ್ರೆ ಎನ್ನುವಂತೆ ಜನರ ಹಣವನ್ನು ಬಿಜೆಪಿಯವರು ಬಳಕೆ ಮಾಡುತ್ತಿದ್ದಾರೆ ಎಂದು ಧಾರವಾಡ ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಸಿ.ಎಸ್.ಶಿವಳ್ಳಿ ಹೇಳಿದರು.

108 ಆರೋಗ್ಯ ಕವಚ ವಾಹನದ ಯೋಜನೆ ಕೇಂದ್ರ ಸರ್ಕಾರದ್ದಾದರೂ ವಾಹನದ ಮೇಲೆ ಪ್ರಧಾನ ಮಂತ್ರಿಯ ಭಾವಚಿತ್ರ ಹಾಕಿಲ್ಲ ಎಂದು ಅವರು ದೂರಿದರು.  

ಸಮೀಪದ ಕೊಂಡಿಕೊಪ್ಪ ಗ್ರಾಮದಲ್ಲಿ ಕಾಂಗ್ರೆಸ್ ನಡಿಗೆ ಜನರ ಬಳಿಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಶದ ಬಹುದೊಡ್ಡ ನೀರಾವರಿ ಯೋಜನೆಗಳನ್ನು ಹಾಗೂ ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿಗೆ ತಂದದ್ದು ಕಾಂಗ್ರೆಸ್ ಸರ್ಕಾರ.

ರಾಜ್ಯದ ಬಿಜೆಪಿ ಸರ್ಕಾರ ಅಗ್ಗದ ಯೋಜನೆಗಳ ಮೂಲಕ ಜನರಿಗೆ ವಂಚನೆ  ಮಾಡುತ್ತಿದೆ. ರೈತರನ್ನು ಭಿಕ್ಷುಕರಂತೆ ಕಾಣುತ್ತಿದೆ. ಬಿಜೆಪಿ ಸರ್ಕಾರವನ್ನು ಕಿತ್ತೊಗೆಯುವವರೆಗೆ ಕಾಂಗ್ರೆಸ್ ವಿರಮಿಸುವುದಿಲ್ಲ ಎಂದು ಶಿವಳ್ಳಿ ಅಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸಚಿವ ಕೆ.ಎನ್.ಗಡ್ಡಿ, ಮುಖಂಡರಾದ ಎಚ್.ವಿ. ಮಾಡಳ್ಳಿ, ಡಾ. ಎ.ಎಂ. ಕುಲಕರ್ಣಿ, ವಿಜಯ ಕುಲಕರ್ಣಿ, ಆರ್.ಎಚ್.ಕೋನರಡ್ಡಿ, ವಿ.ಡಿ.ಅಂದಾನಿಗೌಡರ ಮೊದಲಾದವರು ಈ ಸಂದರ್ಭದಲ್ಲಿ ಮಾತನಾಡಿದರು.

ರಜನಿಕಾಂತ ಭರಮಗೌಡರ ಸ್ವಾಗತಿಸಿದರು. ಲಕ್ಷ್ಮಣ ಮುದುಕನಾಯ್ಕರ ಕಾರ್ಯಕ್ರಮ ನಿರೂಪಿಸಿದರು. ಮಂಜುನಾಥ ಅಕ್ಕಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.