ADVERTISEMENT

ಬೃಹತ್ ಯೋಜನೆಗೆ ಬಜೆಟ್ ಪುರಸ್ಕಾರ; ಮಹಾನಗರ ಪಾಲಿಕೆಯಲ್ಲಿ ಹರ್ಷೋದ್ಗಾರ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2012, 6:00 IST
Last Updated 22 ಮಾರ್ಚ್ 2012, 6:00 IST

ಹುಬ್ಬಳ್ಳಿ: ಅವಳಿನಗರದ ಎಲ್ಲ ಪ್ರದೇಶಗಳಲ್ಲಿ ನಿರಂತರ ನೀರು ಪೂರೈಕೆ ಮಾಡುವಂತಹ ಮಹತ್ವಾಕಾಂಕ್ಷಿ ಯೋಜನೆಗೆ ರಾಜ್ಯ ಬಜೆಟ್‌ನಲ್ಲಿ ಅನುದಾನ ಒದಗಿಸಿರುವುದರಿಂದ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ವಲಯದಲ್ಲಿ ಸಂಭ್ರಮ ವ್ಯಕ್ತವಾಗಿದೆ.

ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಬುಧವಾರ ಮಂಡಿಸಿದ ಬಜೆಟ್‌ನಲ್ಲಿ ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮತ್ತು ಗುಲ್ಬರ್ಗಾ ನಗರಗಳಲ್ಲಿ ನಿರಂತರ ನೀರು ಪೂರೈಕೆ ಯೋಜನೆಗಾಗಿ ಹಣವನ್ನು ಮೀಸಲಿ ಟ್ಟಿದ್ದಾರೆ. ಯಾವ ನಗರಕ್ಕೆ ಎಷ್ಟು ಮೊತ್ತ ಸಿಗುತ್ತದೆ ಎಂಬುದು ಇನ್ನೂ ಖಚಿತವಾಗಿಲ್ಲ ವಾದರೂ ಹುಬ್ಬಳ್ಳಿ-ಧಾರವಾಡಕ್ಕೆ ಸಿಂಹಪಾಲು ಸಿಗಲಿದೆ ಎಂದು ಅಂದಾಜಿಸಲಾಗಿದೆ.

`ಮೂರೂ ನಗರಗಳಲ್ಲಿ ನಿರಂತರ ನೀರು ಪೂರೈಕೆಗೆ ಬಜೆಟ್‌ನಲ್ಲಿ ಹಣ ನಿಗದಿಪಡಿಸಿರು ವುದನ್ನು ನಾನೂ ಗಮನಿಸಿದ್ದೇನೆ. ನಮ್ಮ ಪಾಲಿಕೆಗೆ ಇದರಲ್ಲಿ ಎಷ್ಟು ಮೊತ್ತ ಸಿಗುವುದೋ ಗೊತ್ತಿಲ್ಲ. ಬೇಡಿಕೆಗೆ ರಾಜ್ಯ ಸರ್ಕಾರ ಸ್ಪಂದಿಸಿದ್ದರಿಂದ ಖುಷಿಯಾಗಿದೆ. ಸರ್ಕಾರದಿಂದ ಅಧಿಕೃತ ಆದೇಶ ಕೈಸೇರಿದ ತಕ್ಷಣ ಯೋಜನೆ ಅನುಷ್ಠಾನ ಪ್ರಕ್ರಿಯೆಯನ್ನು ಆರಂಭಿಸಲಾಗುತ್ತದೆ~ ಎಂದು ಪಾಲಿಕೆ ಆಯುಕ್ತ ಡಾ. ಕೆ.ವಿ.ತ್ರಿಲೋಕಚಂದ್ರ ಪ್ರತಿಕ್ರಿಯಿಸಿದರು.

`ರಾಜ್ಯ ಸರ್ಕಾರ ಅವಳಿನಗರದ ನಿರಂತರ ನೀರು ಪೂರೈಕೆ ಯೋಜನೆಗೆ ಆದ್ಯತೆ ನೀಡಿರುವುದಕ್ಕೆ ತುಂಬಾ ಹರ್ಷವಾಗಿದೆ. ಮುಖ್ಯಮಂತ್ರಿಗಳಿಗೆ ಪಾಲಿಕೆ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ನಮ್ಮ ಎರಡೂ ನಗರಗಳು ನೀರಿನ ಸಮಸ್ಯೆಯಿಂದ ಶಾಶ್ವತವಾಗಿ ಮುಕ್ತವಾಗುವ ದಿನಗಳು ದೂರವಿಲ್ಲ~ ಎಂದು ಮೇಯರ್ ಪೂರ್ಣಾ ಪಾಟೀಲ ಸಂತಸ ವ್ಯಕ್ತಪಡಿಸಿದರು.

ಹುಬ್ಬಳ್ಳಿ-ಧಾರವಾಡ ಒಟ್ಟಾರೆ 202 ಚದರ ಕಿ.ಮೀ. ವಿಸ್ತೀರ್ಣ ಹೊಂದಿದ್ದು, ಈ ಪೈಕಿ ಸದ್ಯ ಶೇ 10ರಷ್ಟು ಭಾಗ -ಅಂದರೆ ಎಂಟು ವಾರ್ಡ್‌ಗಳು ಮಾತ್ರ- ದಿನದ 24 ಗಂಟೆ ಅವಧಿಯೂ ನೀರು ಪಡೆಯುತ್ತಿದೆ. ಈ ಸೌಲಭ್ಯವನ್ನು ಶೇ ನೂರರಷ್ಟು ಪ್ರದೇಶಕ್ಕೆ ವಿಸ್ತರಿಸುವ ಯೋಜನೆ ಸಿದ್ಧಪಡಿಸಿದ್ದ ಪಾಲಿಕೆ, ಈ ಸಂಬಂಧ ಅಧ್ಯಯನ ನಡೆಸಿ ವರದಿ ನೀಡುವಂತೆ ಟಾಟಾ ಕನ್ಸಲ್ಟೆನ್ಸಿ ಸಂಸ್ಥೆಗೆ ಕೇಳಿಕೊಂಡಿತ್ತು. ಆ ಸಂಸ್ಥೆಯ ಅಧಿಕಾರಿಗಳು ವಿವರವಾದ ವರದಿಯನ್ನೂ ಪಾಲಿಕೆಗೆ ಸಲ್ಲಿಸಿದ್ದರು.

`ಅವಳಿನಗರದಲ್ಲಿ ಶೇ 94ರಷ್ಟು ನೀರು ಪೂರೈಕೆ ಜಾಲ ಪೂರ್ಣ ಹಾಳಾಗಿದ್ದು, ಮಾರ್ಗ ಬದಲಾವಣೆ ಅಗತ್ಯವಾಗಿದೆ. ನಂತರವಷ್ಟೇ ನಿರಂತರ ನೀರು ಪೂರೈಕೆ ವಿಷಯವಾಗಿ ಯೋಚಿಸಬಹುದು~ ಎಂದು ವರದಿಯಲ್ಲಿ ಹೇಳಲಾಗಿತ್ತು.

ಪೂರೈಕೆ ಜಾಲವನ್ನು ಪೂರ್ಣ ಬದಲಾಯಿಸಿ, ದಿನದ 24 ಗಂಟೆಗಳ ಕಾಲ ಎಲ್ಲ ವಾರ್ಡ್‌ಗಳಿಗೆ ನೀರಿನ ವ್ಯವಸ್ಥೆ ಮಾಡಲು ರೂ 800 ಕೋಟಿಗಳ ದೊಡ್ಡ ಮೊತ್ತದ ಅಗತ್ಯವಿದೆ. ಅಷ್ಟೊಂದು ಹಣವನ್ನು ಹೇಗೆ ಹೊಂದಿಸುವುದು ಎಂಬುದು ತೋಚದೆ ಆಯುಕ್ತರು, ಅನುದಾನ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು.

ಅವಳಿನಗರದಲ್ಲಿ 1912ರಲ್ಲಿ ಜನಸಂಖ್ಯೆ ಕೆಲವೇ ಸಾವಿರ ಇತ್ತು. 4.5 ಎಂಎಲ್‌ಡಿ ನೀರನ್ನು ಉಣಕಲ್ ಕೆರೆಯಿಂದ ಪಡೆದು ಪೂರೈಕೆ ಮಾಡಲಾ ಗುತ್ತಿತ್ತು. 1955ರಲ್ಲಿ 2.17 ಲಕ್ಷಕ್ಕೆ ಜನಸಂಖ್ಯೆ ತಲುಪಿದ್ದರಿಂದ ಕಲಘಟಗಿ ತಾಲ್ಲೂಕಿನ ನೀರಸಾಗರ ಕೆರೆ ನೀರನ್ನೂ ಬಳಸಲು ಆರಂಭಿಸಲಾಗಿತ್ತು. 1983ರಲ್ಲಿ ಮಲಪ್ರಭಾ ಮೊದಲ ಹಂತದ ಯೋಜನೆ ಅನುಷ್ಠಾನಕ್ಕೆ ತಂದು ನೀರು ಪಡೆಯಲಾಯಿತು. ಹೀಗಿದ್ದೂ ಅವಳಿನಗರಕ್ಕೆ ನಿತ್ಯ ನೀರು ಪೂರೈಕೆ ದಶಕಗಳಿಂದ ಗಗನ ಕುಸುಮ ವಾಗಿದೆ.

ಉಣಕಲ್ ಕೆರೆ ನೀರನ್ನು 1996ರಿಂದ ಕುಡಿಯಲು ಬಳಕೆ ಮಾಡುತ್ತಿಲ್ಲ. ಇದನ್ನು ಹೊರತುಪಡಿಸಿಯೂ 20 ಕಿ.ಮೀ. ದೂರದ  ನೀರಸಾಗರ ಕೆರೆಯಿಂದ ಎರಡು ಹಂತ ಹಾಗೂ 55 ಕಿ.ಮೀ. ದೂರದ ಮಲಪ್ರಭಾ ನದಿಯಿಂದ ಮೂರು ಹಂತದ ಯೋಜನೆಗಳ ಮೂಲಕ ಪ್ರತಿನಿತ್ಯ 163 ಎಂಎಲ್‌ಡಿ ನೀರನ್ನು ಪಡೆಯಲಾಗುತ್ತಿದೆ.
 
ಅವಳಿನಗರದ ದಾಹವನ್ನು ತಣಿಸುವಷ್ಟು ನೀರಿನ ಸಂಗ್ರಹವಿದ್ದರೂ ಅಸಮರ್ಪಕ ಪೂರೈಕೆ ವ್ಯವಸ್ಥೆ ಯಿಂದಾಗಿ ನಿತ್ಯ ನೀರು ಪೂರೈಕೆ ಮಾಡುವುದು ಆಗುತ್ತಿಲ್ಲ ಎಂಬುದು ಅಧಿಕಾರಿಗಳ ಅಳಲಾಗಿತ್ತು. ಸರ್ಕಾರ ಈಗ ಅದಕ್ಕೆ ಪರಿಹಾರ ನೀಡುವ ಇರಾದೆ ವ್ಯಕ್ತಪಡಿಸಿದೆ.ಅನುದಾನ ಸಿಕ್ಕ ಬಳಿಕ ಯೋಜನೆ ಅನುಷ್ಠಾನಕ್ಕೆ ಕನಿಷ್ಠ ಎರಡು ವರ್ಷಗಳ ಕಾಲಾವಕಾಶ ಬೇಕಾಗುತ್ತದೆ ಎಂದು ಆಯುಕ್ತರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.