ADVERTISEMENT

ಮಕ್ಕಳ ಸ್ವಾಗತಕ್ಕೆ ವರ್ಣಮಾಲೆ ತೋರಣ

ಗುಲಗಂಜಿಕೊಪ್ಪದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಮನೆ ಮಾಡಿದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 30 ಮೇ 2018, 8:56 IST
Last Updated 30 ಮೇ 2018, 8:56 IST
ಧಾರವಾಡದ ಗುಲಗಂಜಿಕೊಪ್ಪ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೇಜರ್‌ ಸಿದ್ದಲಿಂಗಯ್ಯ ಅಕ್ಷರ ಬಂಡಿ ನಡೆಸಿ ಮೆರವಣಿಗೆಗೆ ಚಾಲನೆ ನೀಡಿದರು.
ಧಾರವಾಡದ ಗುಲಗಂಜಿಕೊಪ್ಪ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೇಜರ್‌ ಸಿದ್ದಲಿಂಗಯ್ಯ ಅಕ್ಷರ ಬಂಡಿ ನಡೆಸಿ ಮೆರವಣಿಗೆಗೆ ಚಾಲನೆ ನೀಡಿದರು.   

ಧಾರವಾಡ: ಬೇಸಿಗೆ ರಜೆ ಮುಗಿದು ಮತ್ತೆ ಶಾಲೆಗಳು ಆರಂಭಗೊಂಡವು. ಆಟ ಪಾಠಗಳಲ್ಲಿ ಮುಳುಗೆದ್ದ ಮಕ್ಕಳು ಮತ್ತೆ ಹೊಸ ಬಟ್ಟೆ ತೊಟ್ಟು ಶಾಲೆಗಳತ್ತ ಮುಖ ಮಾಡುವ ಸಮಯವಿದು. ಅದೊಂದು ಸಂಭ್ರಮವಾಗಿ ಮಾರ್ಪಟ್ಟಿದ್ದು ಇಲ್ಲಿನ ಗುಲಗಂಜಿಕೊಪ್ಪದ ಸರ್ಕಾರಿ ಪ್ರೌಢಶಾಲೆ ಮತ್ತು ಉರ್ದು ಪ್ರಾಥಮಿಕ ಶಾಲೆಯಲ್ಲಿ.

ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು ವರ್ಣಮಾಲೆಗಳು, ಅಕ್ಷರದ ಕುಂಭಗಳು, ಅಕ್ಷರ ವೃಕ್ಷ, ಅಕ್ಷರದ ಕಿರೀಟಗಳು, ಅಂಕಿ–ಸಂಖ್ಯೆ, ಗಣಿತದ ಲೆಕ್ಕಗಳನ್ನು ಸಾರುವ ತೋರಣಗಳು, ಭಿತ್ತಿಚಿತ್ರಗಳು, ಹೂ ಕುಂಡಗಳಿಂದ ಶಾಲಾ ಆವರಣ ಶೃಂಗಾರಗೊಂಡಿತ್ತು. ಪ್ರಸಕ್ತ ಸಾಲಿನ ಹೊಸ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವಕ್ಕಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಮಂಗಳವಾರ ಈ ಸಿದ್ಧತೆ ಮಾಡಿತ್ತು. ಅಧಿಕಾರಿಗಳು, ವಿದ್ಯಾರ್ಥಿಗಳು, ಶಿಕ್ಷಕರು, ಈ ಸಂಭ್ರಮದಲ್ಲಿ ಮಂಗಳವಾರ ಪಾಲ್ಗೊಂಡು, ಹೊಸ ಕಲಿಕಾ ವರ್ಷವನ್ನು ಬರಮಾಡಿಕೊಂಡರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಚೈತ್ರಾ ಶಿರೂರ, ’ಶಿಕ್ಷಣವೆಂದರೆ ಕೇವಲ ಅಕ್ಷರ ಜ್ಞಾನವಲ್ಲ, ಪಠ್ಯದ ಓದು ಮಾತ್ರವಲ್ಲ, ಅದು ಮಕ್ಕಳ ಸರ್ವತೋಮುಖ ಬೆಳವಣಿಗೆಯ ಮಹತ್ವದ ಕಾಲಘಟ್ಟ. ಎಲ್ಲ ಧರ್ಮ, ಜಾತಿ, ಭಾವನೆಗಳನ್ನು ಮೀರಿ ನಾವೆಲ್ಲ ಭಾರತೀಯರು ಎಂಬ ಹಿರಿಮೆಯನ್ನು ಮಕ್ಕಳು ಬೆಳೆಸಿಕೊಳ್ಳುವ ವಾತಾವರಣ ಶಾಲೆಗಳಲ್ಲಿ ಸಿಗಬೇಕು. ಸರ್ವ ಜನಾಂಗದ ಶಾಂತಿಯ ತೋಟಗಳಾಗಿ ಶಾಲೆಗಳು ಅಭಿವೃದ್ಧಿ ಹೊಂದಿದರೆ ಉಜ್ವಲ ದೇಶ ನಿರ್ಮಾಣ ಮಾಡಲು ಸಾಧ್ಯ’ ಎಂದರು. 

ADVERTISEMENT

ಇಲಾಖೆಯ ಹೆಚ್ಚುವರಿ ಆಯುಕ್ತ ಸಿದ್ಧಲಿಂಗಯ್ಯ ಹಿರೇಮಠ ಮಾತನಾಡಿ, ’ಬೆಳಗಾವಿ ವಿಭಾಗದಲ್ಲಿ ಒಟ್ಟು 19 ಸಾವಿರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿವೆ. ಈಗಾಗಲೇ ಎಲ್ಲ ಶಾಲೆಗಳಿಗೂ ಅಗತ್ಯ ಪಠ್ಯಪುಸ್ತಕಗಳು ಪೂರೈಕೆಯಾಗಿವೆ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಪ್ರತಿಭಾವಂತ ಶಿಕ್ಷಕರಿದ್ದಾರೆ. ಪಠ್ಯೇತರ ಚಟುವಟಿಕೆಗಳಿಗೂ ಪ್ರೋತ್ಸಾಹವಿದೆ. ಮಕ್ಕಳಲ್ಲಿ ನೈತಿಕ ಶಿಕ್ಷಣ ಬೆಳೆಸಲು ವಿಶೇಷ ಒತ್ತು ನೀಡಲಾಗುತ್ತಿದೆ’ ಎಂದರು.

ಇಲಾಖೆ ಉಪನಿರ್ದೇಶಕ ಎನ್.ಎಚ್. ನಾಗೂರ ಮಾತನಾಡಿ, ’ಜಿಲ್ಲೆಯಲ್ಲಿ 763 ಸರ್ಕಾರಿ ಪ್ರಾಥಮಿಕ ಶಾಲೆಗಳು, ವಿವಿಧ ಇಲಾಖೆಗಳು, ಖಾಸಗಿ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳು ಸೇರಿ ಒಟ್ಟು 1251 ಪ್ರಾಥಮಿಕ ಶಾಲೆಗಳಿವೆ. 108 ಸರ್ಕಾರಿ ಪ್ರೌಢಶಾಲೆಗಳು ಸೇರಿ ಒಟ್ಟು 442 ಪ್ರೌಢಶಾಲೆಗಳಿವೆ ಎಲ್ಲ ತಾಲ್ಲೂಕುಗಳಲ್ಲಿ ಸಡಗರದಿಂದ ಶಾಲಾ ಪ್ರಾರಂಭೋತ್ಸವ ಆಚರಿಸಲಾಗಿದೆ’ ಎಂದರು.

ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡೊಳ್ಳಿನ, ಶಿಕ್ಷಣಾಧಿಕಾರಿಗಳಾದ ಎಸ್.ಎಂ.ಹುಡೇದಮನಿ, ಮಂಗಳಾ ಪಾಟೀಲ, ಎಂ.ಸಿ.ಮಹಾಲೆ, ಬಷೀರ್ ಅಲಿ, ಎಸ್.ಎಂ. ಶೇಖ್, ಎ.ಎ. ಖಾಜಿ, ವಿದ್ಯಾರ್ಥಿಗಳು, ಪಾಲಕರು ಇದ್ದರು.

ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಏರ್ಪಡಿಸಿದ್ದ ಮೆರವಣಿಗೆಯಲ್ಲಿ ಜಗ್ಗಲಿಗೆ, ಚಕ್ಕಡಿ, ಕುಂಭಮೇಳ ಗಮನ ಸೆಳೆಯಿತು. ಸಿದ್ದಲಿಂಗಯ್ಯ ಹಿರೇಮಠ ಚಕ್ಕಡಿ ಏರಿ ಅಕ್ಷರದ ಬಂಡಿ ಓಡಿಸಿದರು. ಭಾರತಮಾತೆ, ವೈದ್ಯ, ಪೊಲೀಸ್ ಅಧಿಕಾರಿ, ಶಿಕ್ಷಕಿ, ವಕೀಲರ ಪೋಷಾಕು ಧರಿಸಿದ್ದ ಮಕ್ಕಳು ಮೆರವಣಿಗೆಗೆ ಕಳೆ ತಂದರು. ಗುಲಗಂಜಿಕೊಪ್ಪ, ಕೊಪ್ಪದಕೇರಿ, ಮರಾಠ ಕಾಲೊನಿ, ಶಿವಾಜಿ ವೃತ್ತ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಪ್ರಭಾತಪೇರಿ ಸಂಚರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.