ADVERTISEMENT

ಮತದಾರರ ಪಟ್ಟಿ ಸೇರ್ಪಡೆಗೆ ಏ 7 ಕೊನೆಯ ದಿನ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2013, 6:04 IST
Last Updated 3 ಏಪ್ರಿಲ್ 2013, 6:04 IST

ಧಾರವಾಡ: `ಅರ್ಹ ಮತದಾರರ ಹೆಸರನ್ನು ಮತಪಟ್ಟಿಯಲ್ಲಿ ಸೇರಿಸಲು ಇದೇ 7 ಕೊನೆಯ ದಿನವಾಗಿದ್ದು, ತಾಲ್ಲೂಕು ಮಟ್ಟದ `ಸ್ವೀಪ್' ಸಮಿತಿ ಸದಸ್ಯರು ಆಂದೋಲನದ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸಬೇಕು' ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಪಿ.ಎ. ಮೇಘಣ್ಣವರ ಹೇಳಿದರು.

ಇಲ್ಲಿಯ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಸ್ವೀಪ್ ಸಮಿತಿ ಸದಸ್ಯರಿಗಾಗಿ ಮಂಗಳವಾರ ಆಯೋಜಿಸಿದ್ದ ಮತದಾನ ಕುರಿತು ಜಾಗೃತಿ ಮೂಡಿಸುವ ಕಾರ್ಯಾ ಗಾರದಲ್ಲಿ ಅವರು ಮಾತನಾಡಿದರು.

`18 ವರ್ಷ ಪೂರ್ಣಗೊಳಿಸಿದ ಯುವಕ ಹಾಗೂ ಯುವತಿಯರು ತಮ್ಮ ಮತಕ್ಷೇತ್ರದ ಮತದಾನ ಪಟ್ಟಿಯಲ್ಲಿ ಹೆಸರು ನೋಂದಾಯಿಸುವಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ನೋಡಿಕೊಳ್ಳಬೇಕು. ಇನ್ನೂ ಅನೇಕ ಅರ್ಹ ಮತದಾರರ ಹೆಸರುಗಳು ಮತಪಟ್ಟಿಯಿಂದ ಹೊರಗುಳಿದಿದ್ದು, ಉಳಿದ ಎಲ್ಲ ಅರ್ಹ ಮತದಾರರ ಹೆಸರನ್ನು ಮತಪಟ್ಟಿಗೆ ಸೇರಿಸುವುದು ಚುನಾವಣಾ ಆಯೋಗದ ಉದ್ದೇಶ ವಾಗಿದೆ.

ಈಗಾಗಲೇ ಬೂತ್ ಮಟ್ಟದಲ್ಲಿ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಅವರು ತಮ್ಮ ಮತಕ್ಷೇತ್ರಕ್ಕೆ ಒಳಪಡುವ ಮತದಾರರ ಹೆಸರನ್ನು ಮತಪಟ್ಟಿಗೆ ಸೇರಿಸುವ ಕೆಲಸ ಮಾಡಬೇಕು. ಗ್ರಾಮ ಮಟ್ಟದಲ್ಲಿ ಗ್ರಾಮ ಪಂಚಾಯಿತಿ ಪಿಡಿಓಗಳು ಮತದಾರರದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು' ಎಂದರು.

`ಪಿಡಿಓಗಳು ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರನ್ನು ಬಳಸಿ ಕೊಂಡು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ರೈತ ಸಂಪರ್ಕ ಕೇಂದ್ರದಲ್ಲಿ ಅನೇಕ ರೈತರು ಬರುತ್ತಾರೆ. ಅಲ್ಲಿನ ಅಧಿಕಾರಿಗಳು ರೈತರಿಗೆ ಕೇವಲ ಬೀಜ ಗೊಬ್ಬರವನ್ನು ಕೊಡುವುದರ ಜೊತೆಗೆ ಮತದಾನದ ಬಗ್ಗೆಯೂ ತಿಳಿವಳಿಕೆ ನೀಡಬೇಕು' ಎಂದು ಅಧಿಕಾರಿಗಳಿಗೆ ಸೂಚಿಸಿದರು.

`ನಮೂನೆ 6ರ ಅರ್ಜಿಯನ್ನು ಬೂತ್ ಮಟ್ಟದ ಅಧಿಕಾರಿಗಳು ಭರ್ತಿ ಮಾಡಿಸಿಕೊಂಡು ಅದಕ್ಕೆ ತಕ್ಕ ದಾಖಲಾತಿಗಳನ್ನೂ ಪಡೆದು ಕೊಳ್ಳಬೇಕು.ಮತದಾನದ ಜಾಗೃತಿ ಮೂಡಿಸುವ ಸಂದರ್ಭದಲ್ಲಿ ನಿಯೋಜಿತ ಅಧಿಕಾರಿಗಳಿಗೆ, ಇದೇ ಪಕ್ಷಕ್ಕೆ ಮತ ಹಾಕಬೇಕು ಎಂದು ಹೇಳುವ ಅಧಿಕಾರವಿಲ್ಲ. ಕೇವಲ ಮತದಾನದ ಬಗ್ಗೆಯಷ್ಟೇ ಜಾಗೃತಿ ಮೂಡಿಸಬೇಕು' ಎಂದರು.

ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಪ್ರಭಾಕರ ಬಂಡಿ, `ಪಶು ಸಂಗೋಪನಾ ಇಲಾಖೆ, ಬಿಸಿಎಂ ಇಲಾಖೆ, ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಹಾಗೂ ಮೀನುಗಾರಿಕೆ ಇಲಾಖೆ ಸೇರಿದಂತೆ ಇನ್ನೂ ಕೆಲವೊಂದಿಷ್ಟು ಇಲಾಖೆ ಅಧಿಕಾರಿಗಳಿಗೆ ಮತದಾನದ ಕುರಿತು ಜಾಗೃತಿ ಮೂಡಿಸಲು ವಾಹನಗಳ ವ್ಯವಸ್ಥೆ ಇಲ್ಲ.

ಅವುಗಳನ್ನು ಕೂಡಲೇ ವ್ಯವಸ್ಥೆ ಮಾಡಿ ಕೊಡಲಾಗುವುದು. ಅಗತ್ಯವಿದ್ದರೆ ಖಾಸಗಿ ವಾಹನಗಳನ್ನು ಬಾಡಿಗೆಗೆ ತೆಗೆದುಕೊಳ್ಳಬಹುದು' ಎಂದರು.ತಾಲ್ಲೂಕು ಮಟ್ಟದ ಒಟ್ಟು 24 ಇಲಾಖೆಯ ಸ್ವೀಪ್ ಸಮಿತಿ ಸದಸ್ಯರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.