ADVERTISEMENT

ಮತದಾರರ ಮನಗೆಲ್ಲಲು ಡಂಬಳ ಪ್ರಮಾಣ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2013, 9:05 IST
Last Updated 23 ಏಪ್ರಿಲ್ 2013, 9:05 IST

ಧಾರವಾಡ: `ಸಾರ್ವಜನಿಕ ಕೆಲಸಕ್ಕಾಗಿ ಸಲ್ಲಬೇಕಾದ ಹಣವನ್ನು ನನ್ನ ಸ್ವಂತ ಅಥವಾ ಕುಟುಂಬದ ಸಲುವಾಗಿ ಬಳಸುವುದಿಲ್ಲ. ಅಧಿಕಾರ ಉಪಯೋಗಿಸಿ ಸ್ವಂತಕ್ಕಾಗಿ ಯಾವುದೇ ತರಹದ ಆಸ್ತಿ, ಅಂತಸ್ತುಗಳನ್ನು ಹೊಂದುವುದಿಲ್ಲ. ನನಗೆ ಕೊಟ್ಟ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವುದಿಲ್ಲ...'

ಹೀಗೆಂದು ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದಲ್ಲಿ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿರುವ ಮಾಜಿ ಮೇಯರ್ ಹನುಮಂತ ಡಂಬಳ ಮತದಾರರಿಗೆ ಪ್ರಮಾಣ ಮಾಡಿದ್ದಾರೆ. ನೋಟರಿಯವರ ಎದುರಿನಲ್ಲಿ ಮಾಡಿದ ಪ್ರಮಾಣದ ಪ್ರತಿಯನ್ನು ಪ್ರಚಾರದ ಸಂದರ್ಭದಲ್ಲಿ ಮತದಾರರಿಗೆ ಹಂಚಲಿದ್ದಾರೆ.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಡಂಬಳ, `ಸದ್ಯ ಚುನಾವಣೆಗೆ ಸ್ಪರ್ಧಿಸಿರುವ ಹಲವಾರು ಜನರು ಭಾರಿ ಭರವಸೆಗಳನ್ನು ನೀಡುತ್ತಿದ್ದಾರೆ. ಆದರೆ ಆಯ್ಕೆಯಾದ ಮೇಲೆ ತಮ್ಮ ಆಸ್ತಿಯನ್ನು ಹೆಚ್ಚಿಸಿಕೊಳ್ಳುತ್ತಾರೆ. ಈ ಸಂಪ್ರದಾಯವನ್ನು ಮುರಿಯುವ ಉದ್ದೇಶದಿಂದ ಪ್ರಮಾಣಪತ್ರ ಮಾಡಿಸಿದ್ದೇನೆ. ಕರಪತ್ರದೊಂದಿಗೆ ಇವುಗಳನ್ನೂ ಹಂಚಿಕೆ ಮಾಡಲಿದ್ದೇನೆ. ಮತದಾರರು ಆಯ್ಕೆ ಮಾಡಿ ಕಳಿಸಿದ ಬಳಿಕ ನನ್ನ ಕೆಲಸ ತೃಪ್ತಿಕರ ಎನಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ' ಎಂದರು.

ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳನ್ನು ಟೀಕಿಸಿದ ಅವರು, `ಚಂದ್ರಕಾಂತ ಬೆಲ್ಲದ ರಾಜಕೀಯ ನಿವೃತ್ತಿ ಪಡೆದಿದ್ದೇನೆ ಎಂದು ಹೇಳುತ್ತಲೇ ತಮ್ಮ ಪುತ್ರನನ್ನು ಕಣಕ್ಕಿಳಿಸಿದ್ದಾರೆ. ಅರವಿಂದ ಬೆಲ್ಲದ ಆಯ್ಕೆಯಾದರೆ ಊರಿನ ಅಭಿವೃದ್ಧಿಯ ಬದಲು ಅವರ ಕಾರು ಶೋರೂಂಗಳ ಸಂಖ್ಯೆ ಹೆಚ್ಚಲಿದೆ ಅಷ್ಟೇ. ಕಾಂಗ್ರೆಸ್‌ನ ಎಸ್.ಆರ್.ಮೋರೆ ಅವರಿಗೆ ವಯಸ್ಸಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಆಯ್ಕೆಯಾದರೂ ಬೆಂಗಳೂರಿನ ಶಾಸಕರಾಗಿ ಉಳಿಯುತ್ತಾರೆ' ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.