ಧಾರವಾಡ: ಜಿಲ್ಲೆಯಾದ್ಯಂತೆ ಬಹುತೇಕ ಕಡೆದ ಉತ್ತಮ ಮಳೆಯಾಗುತ್ತಿದೆ. ಬೇಸಿಗೆಯಲ್ಲಿದ್ದ ಕುಡಿಯುವ ನೀರಿನ ಬವಣೆ ಈಗ ತೀರಿದ್ದರೂ ಹುಬ್ಬಳ್ಳಿ ತಾಲ್ಲೂಕಿನ ಹೆಬಸೂರು ಗ್ರಾಮದಲ್ಲಿ ಇಂದಿಗೂ ಕುಡಿಯುವ ನೀರಿಗಾಗಿ ಸಾಲುಗಟ್ಟಿದ ಕೊಡಗಳು ಕಾಣಸಿಗುತ್ತವೆ.
ಇಡೀ ಊರಿಗೆ ಜೀವಹನಿ ಉಣಿಸುವ ಹೆಬಸೂರು ಕೆರೆಯಲ್ಲಿ ನೀರಿದ್ದರೂ ಅದನ್ನು ಬಳಸದಂತಾ ಸ್ಥಿತಿ ಇಲ್ಲಿನ ಜನರದ್ದು. ಕಾರಣ, ನಾಲ್ಕು ತಿಂಗಳ ಹಿಂದೆ ಕೆರೆಗೆ ಸಿಂಪಡಿಸಿದ ರಾಸಾಯನಿಕದಿಂದಾಗಿ ಕೆರೆಯಲ್ಲಿದ್ದ ಜಲಚರಗಳು ಸತ್ತು ಹೋಗಿವೆ. ಈ ನೀರನ್ನು ಬಳಸಲು ಗ್ರಾಮಸ್ಥರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ನಿತ್ಯವೂ ಇಲ್ಲಿಗೆ ಟ್ಯಾಂಕರ್‌ನಲ್ಲೇ ನೀರು ಸರಬರಾಜಾಗುತ್ತಿದೆ. ಹೀಗಾಗಿ ಎರಡು ದಿನಗಳಿಗೊಮ್ಮೆ ಸರತಿಸಾಲಿನಲ್ಲಿ ಕೊಡಗಳನ್ನಿಟ್ಟು ಕಾಯುವುದು ಇಲ್ಲಿನ ಜನರಿಗೆ ಅನಿವಾರ್ಯವಾಗಿದೆ ಎಂದು ಇಲ್ಲಿನ ಜನರು ತಮ್ಮ ಅಸಹಾಯಕ ಸ್ಥಿತಿಯನ್ನು ಹೇಳಿಕೊಂಡರು.
ಈ ಕುರಿತು ಮಾತನಾಡಿದ ಗ್ರಾಮದ ರತ್ನವ್ವಾ ಶುಂಠಿ, ‘ಕೆರೆ ನೀರನ್ನು ನಾವು ಬಳಸುತ್ತಿದ್ದೆವು. ಒಂದು ಬಾರಿ ಕೆರೆ ತುಂಬಿದರೆ ಎರಡು ವರ್ಷಗಳಿಗೆ ನಮಗೆ ಸಾಕಾಗುತ್ತಿತ್ತು. ಆದರೆ ಪಂಚಾಯ್ತಿಯವರು ಕೆರೆ ಶುಚಿಗೊಳಿಸುವ ಸಲುವಾಗಿ ತಪ್ಪಾಗಿ ಯಾವುದೇ ಪುಡಿ ಹಾಕಿದ್ದರಿಂದ ಕೆರೆಯಲ್ಲಿದ್ದ ಮೀನು, ಹಾವು, ಕಪ್ಪೆಗಳು ಸತ್ತವು. ಅಲ್ಲಿಂದ ಅಲ್ಲಿನ ನೀರು ಕುಡಿಯಲು ನಮಗೆ ಹಿಂಜರಿಕೆ ಉಂಟಾಗಿದೆ. ಈ ನೀರನ್ನು ಶುದ್ಧೀಕರಿಸಲು ₹ 1 ಲಕ್ಷ ಬೇಕು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಹೀಗಾಗಿ ಅದು ಸಾಧ್ಯವಾಗದ ಕಾರಣ ಟ್ಯಾಂಕರ್ ನೀರನ್ನೇ ಅವಲಂಭಿಸಬೇಕಾಗಿದೆ’ ಎಂದು ತಮ್ಮ ಅಳಲು ತೋಡಿಕೊಂಡರು.
ಗ್ರಾಮದ ಶಂಭಯ್ಯ ಹಿರೇಮಠ ಮಾತನಾಡಿ, ‘ಎರಡು ದಿನಗಳಿಗೊಮ್ಮೆ ಒಂದೊಂದು ಓಣಿಗೆ ಟ್ಯಾಂಕರ್ ಮೂಲಕ ನೀರು ನೀಡಲಾಗುತ್ತಿದೆ. ನೀರಿಗಾಗಿ ಕಾಯುವುದೇ ಒಂದು ದಿನದ ಕೆಲಸವಾಗಿದೆ. ಟ್ಯಾಂಕರ್ ಬಂದಾಗ ಕೆಲವರಿಗೆ ನೀರು ಸಿಗುತ್ತದೆ, ಇನ್ನೂ ಕೆಲವರಿಗೆ ಸಿಗುವುದಿಲ್ಲ. ಆಗ ನಿರಾಸೆ ಕಟ್ಟಿಟ್ಟ ಬುತ್ತಿ. ನೀರಿಗಾಗಿಯೇ ಇಲ್ಲಿ ನಿತ್ಯ ಜಗಳಗಳು ನಡೆಯುತ್ತಿವೆ. ಕೂಡಲೇ ಇದನ್ನು ಬಗೆಹರಿಸಿದರೆ ಉತ್ತಮ’ ಎಂದು ಮನವಿ ಮಾಡಿಕೊಂಡರು.
‘ಒಂದು ಓಣಿಯಲ್ಲಿರುವ ಐವತ್ತು ಮನೆಗೆ ಎರಡು ಟ್ಯಾಂಕರ್ ನೀರು ನೀಡಲಾಗುತ್ತದೆ. ಇದಕ್ಕಾಗಿ ಇನ್ನೂರಕ್ಕೂ ಹೆಚ್ಚು ಕೊಡಗಳನ್ನು ತಂದು ಇಟ್ಟಿದ್ದಾರೆ. ಇದು ಕಳೆದ ನಾಲ್ಕು ತಿಂಗಳಿನಿಂದ ಈ ಗ್ರಾಮದಲ್ಲಿ ಕಂಡುಬರುವ ದಿನನಿತ್ಯದ ದೃಶ್ಯ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.