ADVERTISEMENT

ಮಹದಾಯಿ: ದೆಹಲಿಗೆ ಹೋರಾಟಗಾರರು

​ಪ್ರಜಾವಾಣಿ ವಾರ್ತೆ
Published 13 ಜೂನ್ 2018, 9:35 IST
Last Updated 13 ಜೂನ್ 2018, 9:35 IST
ಮಹದಾಯಿ ಸಮಸ್ಯೆ ಇತ್ಯರ್ಥಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವ ಸಲುವಾಗಿ ‘ಮಹದಾಯಿಗಾಗಿ ಮಹಾವೇದಿಕೆ’ ಸದಸ್ಯರು ಮಂಗಳವಾರ ಹುಬ್ಬಳ್ಳಿಯಿಂದ ದೆಹಲಿಗೆ ಪ್ರಯಾಣ ಬೆಳೆಸಿದರು
ಮಹದಾಯಿ ಸಮಸ್ಯೆ ಇತ್ಯರ್ಥಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವ ಸಲುವಾಗಿ ‘ಮಹದಾಯಿಗಾಗಿ ಮಹಾವೇದಿಕೆ’ ಸದಸ್ಯರು ಮಂಗಳವಾರ ಹುಬ್ಬಳ್ಳಿಯಿಂದ ದೆಹಲಿಗೆ ಪ್ರಯಾಣ ಬೆಳೆಸಿದರು   

ಹುಬ್ಬಳ್ಳಿ: ಮಹದಾಯಿ ನದಿ ನೀರಿನ ವಿವಾದ ಬಗೆಹರಿಸಬೇಕು ಎಂದು ಕೋರಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು  ಮಹದಾಯಿಗಾಗಿ ಮಹಾವೇದಿಕೆ ಮತ್ತು ಕಳಸಾ–ಬಂಡೂರಿ ಹೋರಾಟ ವೇದಿಕೆ ಸದಸ್ಯರು ಮಂಗಳವಾರ ಹುಬ್ಬಳ್ಳಿಯಿಂದ ದೆಹಲಿಗೆ ಪ್ರಯಾಣ ಬೆಳೆಸಿದರು.

ಈ ವೇಳೆ ಮಾತನಾಡಿದ ವೇದಿಕೆಯ ಸಂಚಾಲಕ ಶಂಕ್ರಪ್ಪ ಅಂಬಲಿ, ‘ಮಹದಾಯಿ ಸಮಸ್ಯೆ ಕುರಿತು ಮನವರಿಕೆ ಮಾಡಿಕೊಡಲು ಪ್ರಧಾನಿ ಭೇಟಿಗೆ ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಬೆಂಗಳೂರು ಮೂಲದ ‘ಸಹ್ಯಾದ್ರಿ ಜಲ– ಜನ ಸೊಸೈಟಿ’ ನಮ್ಮೊಂದಿಗೆ ಕೈ ಜೋಡಿಸಿದ್ದು, ಜೂನ್ 14 ಅಥವಾ 15ರಂದು ಪ್ರಧಾನಿ ಭೇಟಿ ಮಾಡಲಾಗುವುದು’ ಎಂದರು.

‘ಮಹದಾಯಿ ನ್ಯಾಯ ಮಂಡಳಿ ಸಮಸ್ಯೆಗೆ ಸಂಬಂಧಿಸಿದಂತೆ ಕರ್ನಾಟಕ ಮತ್ತು ಗೋವಾ ರಾಜ್ಯಗಳ ವಾದವನ್ನು ಆಲಿಸಿದರೂ, ಅಂತಿಮ ಆದೇಶ ನೀಡಿಲ್ಲ. ವಿಧಾನಸಭೆ ಚುನಾವಣೆ ಪ್ರಚಾರ ಸಂದರ್ಭದಲ್ಲಿ ನೀಡಿದ ಭರವಸೆಯಂತೆ, ಕರ್ನಾಟಕಕ್ಕೆ ಅನ್ಯಾಯವಾಗದಂತೆ ವಿವಾದ ಬಗೆಹರಿಸಬೇಕು ಎಂದು ಅವರನ್ನು ಕೋರಲಾಗುವುದು’ ಎಂದು ತಿಳಿಸಿದರು.

ADVERTISEMENT

ಪ್ರಾತಿನಿಧಿಕ ವೇದಿಕೆ: ‘ಮಹದಾಯಿಗಾಗಿ ಮಹಾವೇದಿಕೆಯು ಈಗಾಗಲೇ ನೀರಿನ ಸಮಸ್ಯೆ ವಿರುದ್ಧ ಹೋರಾಟದಲ್ಲಿ ತೊಡಗಿಸಿಕೊಂಡಿರುವ ರೈತ, ದಲಿತ ಹಾಗೂ ಕನ್ನಡಪರ ಸಂಘಟನೆಗಳ ಪ್ರತಿನಿಧಿಗಳನ್ನೊಳಗೊಂಡ ಪ್ರಾತಿನಿಧಿಕ ವೇದಿಕೆಯಾಗಿದೆ’ ಎಂದು ಸ್ಪಷ್ಟಪಡಿಸಿದರು.

ಬಸವರಾಜ ಸಾಬಳೆ, ವಿಠ್ಠಲ ಜಾಧವ, ಶ್ರೀಶೈಲ ಮೇಟಿ, ವಿರೂಪಾಕ್ಷಪ್ಪ ಸೊಪ್ಪಿನ, ಬಾಳಪ್ಪ ಚುಂಚನೂರ, ಶಂಕರಗೌಡ
ಪಾಟೀಲ, ಹನಮಂತಗೌಡ್ರ  ಪಾಟೀಲ, ವೆಂಕಟೇಶ ಹಿರೇರೆಡ್ಡಿ, ಬಾಳಪ್ಪ ರಡರಟ್ಟಿ, ಮಧುಸೂದನ ತಿವಾರಿ, ಶೇಖರಪ್ಪ ಪಡಿಯಪ್ಪನವರ, ಶಂಕರಪ್ಪ ನೀರಾವರಿ, ಬಾಲಚಂದ್ರ ಸುರಪುರ, ವಿಠ್ಠಲ ಕಮ್ಮಾರ, ಲಕ್ಷ್ಮಣಬಕಾಯಿ, ಎಸ್‌.ಜಿ. ಪಾಟೀಲ, ವೆಂಕನಗೌಡ ಪಾಟೀಲ, ಜಯಶಂಕರ ವಣ್ಣೂರ, ಗುರನಗೌಡ ರಾಯನಗೌಡ್ರ, ಚನ್ನಬಸಪ್ಪ ನಂದಿ, ಸಂಗಮೇಶ ಚಿಕ್ಕನರಗುಂದ ಹಾಗೂ ಚಂದ್ರಶೇಖರಗೌಡ ಸಿ. ಪಾಟೀಲ ದೆಹಲಿಗೆ ಹೊರಟ ನಿಯೋಗದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.