ADVERTISEMENT

ಮಹದಾಯಿ; ಸುಪ್ರೀಂ ಮೆಟ್ಟಿಲೇರಲು ನಿರ್ಧಾರ

ಹೋರಾಟಗಾರರ ಮೇಲಿನ ಪ್ರಕರಣ ಕೈಬಿಡಲು ಮನವಿ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2018, 11:00 IST
Last Updated 26 ಸೆಪ್ಟೆಂಬರ್ 2018, 11:00 IST
ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸಚಿವ ಡಿ.ಕೆ. ಶಿವಕುಮಾರ್‌ ಬಂದಾಗ ಕಾಂಗ್ರೆಸ್‌ ಪ್ರಮುಖರು ಸ್ವಾಗತಿಸಿದರು
ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸಚಿವ ಡಿ.ಕೆ. ಶಿವಕುಮಾರ್‌ ಬಂದಾಗ ಕಾಂಗ್ರೆಸ್‌ ಪ್ರಮುಖರು ಸ್ವಾಗತಿಸಿದರು   

ಹುಬ್ಬಳ್ಳಿ: ಮಹದಾಯಿ ವಿಷಯದಲ್ಲಿ ರಾಜ್ಯಕ್ಕೆ ನ್ಯಾಯ ಸಿಕ್ಕಿಲ್ಲ. ಅದ್ದರಿಂದ ಸುಪ್ರೀಂ ಕೋರ್ಟ್ ಮೊರೆ ಹೋಗಲು ನಿರ್ಧರಿಸಲಾಗಿದೆ‌ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು.

ಬುಧವಾರ ಕಣಕುಂಬಿಗೆ ತೆರಳುವ ಮುನ್ನ ಇಲ್ಲಿನ‌ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು ‘ತೀರ್ಪು ಬಂದ ದಿನದಿಂದಲೇ ನಾವು ಯೋಜನೆಗಳನ್ನು ರೂಪಿಸುತ್ತಿದ್ದೇವೆ. ಇದಕ್ಕಾಗಿ ಕಾನೂನು ಮತ್ತು ತಾಂತ್ರಿಕ‌ ತಜ್ಞರ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ. ಕೆಲ‌ ದಿನಗಳಲ್ಲಿ ಸರ್ವ‌ಪಕ್ಷಗಳ‌ ಸಭೆ ಕರೆಯಲಾಗುವುದು.’ ಎಂದರು.

‘ರಾಜ್ಯದ ಪಾಲಿಗೆ ಈಗ ಸಿಕ್ಕಿರುವ ನೀರಿನಿಂದ ಆಗುವ ಅನುಕೂಲಗಳ ಬಗ್ಗೆಯೂ ಮಾಹಿತಿ ಪಡೆದುಕೊಂಡಿದ್ದೇನೆ. ನಮ್ಮ ನಿರೀಕ್ಷೆಗೆ ತಕ್ಕಷ್ಟು ನೀರು ಸಿಕ್ಕಿಲ್ಲ. ಮೇಲ್ಮನವಿ ಸಲ್ಲಿಸಲು ಮೂರು ತಿಂಗಳು ಕಾಲವಕಾಶ ಇದೆ’ ಎಂದರು.

ADVERTISEMENT

‘ಕಾವೇರಿ ಬಗ್ಗೆ ಇರುವ ಕಾಳಜಿ ಮಹಾದಾಯಿ ಕುರಿತು ಇಲ್ಲ ಎನ್ನುವ ಆರೋಪ ಸತ್ಯಕ್ಕೆ ದೂರವಾದ‌ ಮಾತು.‌ ರಾಜ್ಯದ ಪಾಲಿನ ಒಂದೇ ಒಂದು ಹನಿ ನೀರು ಸಮುದ್ರ ಸೇರಲು ಬಿಡುವುದಿಲ್ಲ’ ಎಂದರು.

ಶಾಸಕಿ ಲಕ್ಷ್ಮಿ ಹೆಬ್ಬಾಳಕರ, ಹುಬ್ಬಳ್ಳಿ ಧಾರವಾಡ ಮಹಾನಗರ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಅಲ್ತಾಫ್ ಹಳ್ಳೂರು, ಕಾಂಗ್ರೆಸ್‌ ಮುಖಂಡರಾದ ಸದಾನಂದ ಡಂಗನವರ, ದೇವಕಿ ಯೋಗಾನಂದ ಇದ್ದರು.

ಮಲಪ್ರಭೆಗೆ ನೀರು ಹರಿಸಲು ಒತ್ತಾಯ:

ನ್ಯಾಯಾಧೀಕರಣ ತೀರ್ಪಿನಂತೆ ನಮಗೆ ನಾಲ್ಕು ಟಿ.ಎಂ.ಸಿ. ಅಡಿ ನೀರು ಬಳಸಿಕೊಳ್ಳಲು ಅವಕಾಶವಿದೆ. ಈ ವಿಷಯದಲ್ಲಿ ರಾಜ್ಯ ಸರ್ಕಾರ ಕೂಡಲೇ ಕಾರ್ಯ ಪ್ರವೃತ್ತವಾಗಬೇಕು ಎಂದು ಮಹದಾಯಿ ಕಳಸಾ ಬಂಡೂರಿ ಹೋರಾಟ ಸಮನ್ವಯ ಸಮಿತಿ ಪದಾಧಿಕಾರಿಗಳು ಸಚಿವರನ್ನು ಆಗ್ರಹಿಸಿದರು.

ಮಲ‍ಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರ ಮೇಲೆ ಇರುವ ಒಟ್ಟು ಆರು ಪ್ರಕರಣಗಳನ್ನು ಸರ್ಕಾರ ವಾಪಸ್ ಪಡೆಯಬೇಕು ಎಂದು ಹೋರಾಟಗಾರರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್‌ ‘ವಿವರವಾದ ಮಾಹಿತಿ ತೆಗೆದುಕೊಂಡು ಬೆಂಗಳೂರಿಗೆ ಬನ್ನಿ. ಪ್ರಕರಣ ವಾಪಸ್‌ ಪಡೆಯಲು ಕ್ರಮ ಕೈಗೊಳ್ಳುತ್ತೇನೆ’ ಎಂದು ಭರವಸೆ ನೀಡಿದರು.

ಸಮಿತಿ ಪ್ರಮುಖರಾದ ಅಮೃತ ಇಜಾರಿ, ಶಿವಣ್ಣ ಹುಬ್ಬಳ್ಳಿ, ಮಹೇಶ ಪತ್ತಾರ, ಸುರೇಶಗೌಡ ಪಾಟೀಲ, ಸಚಿನ ಗಾಣಿಗೇರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.