ADVERTISEMENT

ಮಾನವೀಯ ಮೌಲ್ಯ ಅಳವಡಿಸಿಕೊಳ್ಳಲು ಸಲಹೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2012, 5:00 IST
Last Updated 1 ಅಕ್ಟೋಬರ್ 2012, 5:00 IST

ಉಪ್ಪಿನ ಬೆಟಗೇರಿ: `ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ರ‌್ಯಾಂಕ್ ಪಡೆದು ಯಾವ ರೀತಿ ಉತ್ತಮ ಹಂತಕ್ಕೆ ಬೆಳೆಯುತ್ತಾರೋ ಅದೇ ರೀತಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಬೆಳೆಯುವುದು ಅಷ್ಟೇ ಅವಶ್ಯವಾಗಿದೆ~ ಎಂದು ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

ಗ್ರಾಮದ ಎಸ್‌ಜಿವಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ಪಾಯಪ್ಪ ಅಷ್ಟಗಿ ಅವರ 11ನೇ ಪುಣ್ಯತಿಥಿ ಅಂಗವಾಗಿ ಉತ್ತಮ ಶಿಕ್ಷಕರಿಗೆ ಸನ್ಮಾನ ಸಮಾರಂಭ ಹಾಗೂ 2011-12ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗಾಗಿ ಶನಿವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಮಾರಂಭ ಉದ್ಘಾಟಿಸಿದ ಸಂಸದ ಪ್ರಹ್ಲಾದ ಜೋಶಿ, `ದುಡ್ಡು ಇದ್ದಾಗ ದಾನ ಮಾಡುವುದು ಮಹತ್ವದ ಮಾತಲ್ಲ. ತನ್ನ ಹತ್ತಿರ ಇ್ಲ್ಲಲದಾಗಲೂ ಇದ್ದಷ್ಟನ್ನು ಮಾತ್ರ ಇತರರಿಗೆ ನೀಡುವುದು ಮಹತ್ವದ್ದು. ಅಂಥ ಕೆಲಸವನ್ನು ಪಾಯಪ್ಪ ಅವರು ತಮ್ಮ ಜೀವಿತಾವಧಿಯಲ್ಲಿ ಮಾಡಿದ್ದಾರೆ. ಇಂದು ದಾನ ಮಾಡಿದರೆ ಅದರ ಹಿಂದೆ ಯಾವುದೋ ಲೆಕ್ಕಾಚಾರ ಇದೆ ಎಂದೇ ಅರ್ಥ. ಆದರೆ ಯಾವುದೇ ಫಲಾಪೇಕ್ಷೆ ಇಲ್ಲದೇ ಪಾಯಪ್ಪ ಅವರು ತಮ್ಮ ಹತ್ತಿರ ಇದ್ದದ್ದನ್ನು ದಾನ ಮಾಡಿದರು. ಅದೇ ಮಾರ್ಗದಲ್ಲಿ ಹೋಗುತ್ತಿರುವ ಅವರ ಮಕ್ಕಳ ಕಾರ್ಯ ಶ್ಲಾಘನೀಯ~ ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ಬಿ.ಕೆ.ಎಸ್.ವರ್ಧನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾದೇವಪ್ಪ ಅಷ್ಟಗಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕ ಎ.ಬಿ.ದೇಸಾಯಿ ಅಧ್ಯಕ್ಷತೆ ವಹಿಸಿದ್ದರು.

ಶಾಸಕಿ ಸೀಮಾ ಮಸೂತಿ, ಮಾಜಿ ಶಾಸಕ ವಿನಯ ಕುಲಕರ್ಣಿ, ಅಂಜುಮನ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ, ಪಾಲಿಕೆ ಮಾಜಿ ವಿರೋಧ ಪಕ್ಷದ ನಾಯಕ ದೀಪಕ ಚಿಂಚೋರೆ, ಜಿ.ಪಂ.ಸದಸ್ಯೆ ಕಸ್ತೂರಿ ಅಷ್ಟಗಿ, ಗ್ರಾ.ಪಂ.ಅಧ್ಯಕ್ಷ ಕಮಾಲಸಾಬ್ ಶೇತಸನದಿ, ತಾ.ಪಂ.ಸದಸ್ಯ ಬಾಬಾ ಮೊಯುದ್ದೀನ್ ಚೌಧರಿ ಹಾಜರಿದ್ದರು. ಜಿ.ಪಂ. ಮಾಜಿ ಸದಸ್ಯ ತವನಪ್ಪ ಅಷ್ಟಗಿ ಸ್ವಾಗತಿಸಿದರು. ಕಸಾಪ ತಾಲ್ಲೂಕು ಅಧ್ಯಕ್ಷ ಗುರು ತಿಗಡಿ ನಿರೂಪಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.