ADVERTISEMENT

ಮಾರುಕಟ್ಟೆಗೆ ಬಾರದ ಫಸಲು: ವರಮಾನ ಕುಸಿತ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2011, 4:25 IST
Last Updated 15 ಸೆಪ್ಟೆಂಬರ್ 2011, 4:25 IST
ಮಾರುಕಟ್ಟೆಗೆ ಬಾರದ ಫಸಲು: ವರಮಾನ ಕುಸಿತ
ಮಾರುಕಟ್ಟೆಗೆ ಬಾರದ ಫಸಲು: ವರಮಾನ ಕುಸಿತ   

ಹುಬ್ಬಳ್ಳಿ: ಜಿಲ್ಲೆಯಾದ್ಯಂತ ಈ ಬಾರಿಯ ಮುಂಗಾರು ಹಂಗಾಮಿನ ಮಳೆಯ ಏರಿಳಿತ ಹೆಸರು ಬೆಳೆ ಇಳುವರಿಯ ಭಾರಿ ಕುಸಿತಕ್ಕೆ ಕಾರಣವಾಗಿದ್ದು, ಮಾರಾಟಕ್ಕೆ ಫಸಲು ಬಾರದೆ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಯ ವರಮಾನಕ್ಕೆ ಪೆಟ್ಟು ಬಿದ್ದಿದೆ.

ಕಳೆದ ಏಪ್ರಿಲ್‌ನಿಂದ ಸೆಪ್ಟೆಂಬರ್ ಎರಡನೇ ವಾರದ ವೇಳೆಗೆ ಅಮರಗೋಳದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಕೇವಲ 2.749 ಕ್ವಿಂಟಲ್ ಹೆಸರು ಮಾತ್ರ ಆವಕವಾಗಿದೆ. ಕಳೆದ ವರ್ಷ ಇದೇ ಅವಧಿಗೆ 12,155 ಕ್ವಿಂಟಲ್ ಹೆಸರು ಮಾರಾಟವಾಗಿತ್ತು. ಮಾರುಕಟ್ಟೆಗೆ ಬರುವ ಉತ್ಪನ್ನದ ಪ್ರಮಾಣ ಕಡಿಮೆಯಾಗಿದ್ದರಿಂದ ಅಮರಗೋಳದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸಂಗ್ರಹವಾದ ಶುಲ್ಕದಲ್ಲಿ 8 ಲಕ್ಷ ರೂಪಾಯಿಯಷ್ಟು ಕಡಿಮೆಯಾಗಿದೆ.

ಮಳೆಯ ಕಣ್ಣಾಮುಚ್ಚಾಲೆ: ರಾಜ್ಯದಲ್ಲಿ ಹೆಸರು ಬೆಳೆಯುವ ಪ್ರಮುಖ ಪ್ರದೇಶಗಳಲ್ಲಿ ಒಂದಾದ ಧಾರವಾಡ ಜಿಲ್ಲೆಯಲ್ಲಿ ಈ ಬಾರಿ ಮಳೆ ಕಣ್ಣಾಮುಚ್ಚಾಲೆ ನಡೆಸಿದೆ. ಮುಂಗಾರಿನಲ್ಲಿ ನವಲಗುಂದ, ಹುಬ್ಬಳ್ಳಿ ಹಾಗೂ ಕುಂದಗೋಳ ತಾಲ್ಲೂಕಿನಲ್ಲಿ ಮಳೆ ಕಡಿಮೆಯಾಗಿ ಬರದ ಛಾಯೆ ಆವರಿಸಿದ್ದರೆ, ಕಲಘಟಗಿ ಹಾಗೂ ಧಾರವಾಡ ತಾಲ್ಲೂಕುಗಳಲ್ಲಿ ಮಳೆ ಧಾರಕಾರವಾಗಿ ಸುರಿದಿದೆ. ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದಾಗಿ ಇಳುವರಿ ಕುಂಠಿತಗೊಂಡು ರೈತರು ನಷ್ಟ ಅನುಭವಿಸಿದ್ದಾರೆ.

ಜಿಲ್ಲೆಯಲ್ಲಿ ಹೆಸರು ವಹಿವಾಟಿಗೆ ಹುಬ್ಬಳ್ಳಿ ಪ್ರಮುಖ ಮಾರುಕಟ್ಟೆಯಾಗಿದ್ದು, ರಾಜ್ಯದಲ್ಲಿ ಗದಗ ನಂತರ ಹೆಸರು ಬೆಳೆಯ ದೊಡ್ಡ ಮಾರುಕಟ್ಟೆ ಎಂಬ ಹೆಗ್ಗಳಿಕೆ ಇಲ್ಲಿಯದು. ಇಲ್ಲಿ ಮಾರಾಟವಾಗುವ ಹೆಸರು ಕಾಳು ಸ್ಥಳೀಯವಾಗಿ ಬಳಕೆಯಾಗುತ್ತದ ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ಗುಜರಾತ್ ಸೇರಿದಂತೆ ಉತ್ತರ ಭಾರತದ ಕೆಲವು ರಾಜ್ಯಗಳಿಗೆ ರಫ್ತಾಗುತ್ತದೆ.

ಈ ಬಾರಿ ಹೆಸರು ಬೆಳೆಗೆ ಕ್ವಿಂಟಲ್‌ಗೆ ರೂ.3500ರಿಂದ 4750 ಬೆಲೆ ಇದ್ದರೂ ಮಾರುಕಟ್ಟೆಗೆ ಕಾಳು ಬಂದಿಲ್ಲ. ಇದರಿಂದ ಮಾರುಕಟ್ಟೆ ಆವರಣ ಬಿಕೋ ಎನ್ನುತ್ತಿದ್ದು, ವರ್ತಕರು ರೈತರ ಹಾದಿ ಕಾಯುವಂತಾಗಿದೆ.

ಮನೆ ಬಳಕೆಗೆ ಕಾಳು: `ನೋಡ್ರಿ ಸರಾ, ಈ ಸಾರೆ ಮಾಲು ಇಲ್ಲಾ, ವರ್ತಕರು ಬೆಲೆ ಹೆಚ್ಚು ಮಾಡ್ಯಾರೆ. ಮಾಲು ಹೆಚ್ಚು ಬಂದಿದ್ರೆ ಬೆಲೆ ಇಳಿಸೋರು. ಬಂಪರ್ ಬೆಲಿ ಐತಿ ಮಾರೋಣು ಅಂದ್ರೆ ಕಾಳು ಇಲ್ಲ. ಮಳಿ ಕಡಿಮೆಯಾಗಿ ನಾವು ಮನೆ ಪೂರ‌್ತಕ್ಕೆ ಇಟ್ಟುಕೊಳ್ಳೊವಷ್ಟ ಮಾತ್ರ ಕಾಳು ಬಂದಿದೆ ಎಂದು ಕುಟುಂಬದ ಸದಸ್ಯರೊಂದಿಗೆ ಸೇರಿ ಮಾರುಕಟ್ಟೆ ಪ್ರಾಂಗಣದಲ್ಲಿಯೇ ಹೆಸರು ಒಕ್ಕಲು ಮಾಡುತ್ತಿದ್ದ ಅಮರಗೋಳದ ಗಿರೆಪ್ಪಗೌಡ `ಪ್ರಜಾವಾಣಿ~ಗೆ ತಿಳಿಸಿದರು.

ಹೆಸರು ಬೆಳೆಯ ಇಳುವರಿ ಕುಸಿತದಿಂದ ಕಳೆದ ಎರಡು ವರ್ಷಗಳಿಂದಲೂ ಇಲ್ಲಿನ ಮಾರುಕಟ್ಟೆಯಲ್ಲಿ ಬೆಳೆಯ ಆವಕ ಕಡಿಮೆಯಾಗಿದೆ ಎನ್ನುವ ಹುಬ್ಬಳ್ಳಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಪಾತಲಿಂಗಪ್ಪ, ಇದಕ್ಕೆ ಪೂರಕವಾಗಿ 2009ರಲ್ಲಿ ಏಪ್ರಿಲ್‌ನಿಂದ ಸೆಪ್ಟೆಂಬರ್ ಅಂತ್ಯದ ವೇಳೆಗೆ ದಾಖಲೆಯ ಪ್ರಮಾಣದ 26,850 ಕ್ವಿಂಟಲ್ ಹೆಸರು ಮಾರಾಟವಾಗಿದ್ದ ಅಂಕಿ-ಆಂಶ ನೀಡುತ್ತಾರೆ.

ಈ ಹಂಗಾಮಿನಲ್ಲಿ 1.95 ಕೋಟಿ ಶುಲ್ಕ ಸಂಗ್ರಹಿಸುವ ಗುರಿ ಹೊಂದಲಾಗಿತ್ತು.1.77 ಕೋಟಿ ಮಾತ್ರ ಸಂಗ್ರಹವಾಗಿದೆ ಎಂದು ಹೇಳುತ್ತಾರೆ.ಜಿಲ್ಲೆಯಲ್ಲಿ ಹೆಸರು ಹೆಚ್ಚಾಗಿ ಬೆಳೆಯುವ ನವಲಗುಂದ ಕೃಷಿ ಕ್ಷೇತ್ರದ ಬ್ಯಾಹಟ್ಟಿ, ಹೆಬಸೂರು, ಕುಸಗೂರು ಭಾಗದಲ್ಲಿ ಮಳೆ ಇಲ್ಲದೆ ಬೆಳೆ ಒಣಗಿದೆ ಎನ್ನುವ ಎಪಿಎಂಸಿ ಅಧ್ಯಕ್ಷ ಶಂಕರಗೌಡ ನೇಮನಗೌಡ ಪಾಟೀಲ, ಅಗಡಿ, ಹಳ್ಳೀಕಟ್ಟೆ,ತಡಸ, ಕಲಘಟಗಿ ಭಾಗದಲ್ಲಿ ಮಳೆ ಹೆಚ್ಚಾಗಿ ಬೆಳೆ ನಾಶವಾಗಿದೆ. ನೂಲ್ವಿ, ಶೆರೆವಾಡ ಭಾಗದಲ್ಲಿ ಮಾತ್ರ ಒಂದಷ್ಟು ಬೆಳೆ ಉತ್ತಮವಾಗಿ ಬಂದಿದೆ. ಅಲ್ಲಿಯ ಮಾಲು ಮಾತ್ರ ಮಾರುಕಟ್ಟೆಗೆ ಬರುತ್ತಿದೆ ಎನ್ನುತ್ತಾರೆ. 

ಹೆಸರು ಕಾಳು ಖರೀದಿಗೆ ಹುಬ್ಬಳ್ಳಿ ಮಾರುಕಟ್ಟೆಗೆ ಬರುತ್ತಿದ್ದ ಹೊರರಾಜ್ಯದ ವ್ಯಾಪಾರಸ್ಥರು ಇಲ್ಲಿಯ ಸ್ಥಿತಿ ಕಂಡು ಗದಗ ಮಾರುಕಟ್ಟೆಯತ್ತ ಮುಖ ಮಾಡುತ್ತಿದ್ದಾರೆ. ಅಲ್ಲಿಯೂ ಇದೇ ಶೋಚನೀಯ ಪರಿಸ್ಥಿತಿ ಎಂದು ಮಧ್ಯವರ್ತಿ ಶರಣಪ್ಪ ದಾನವ್ವರ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.