ADVERTISEMENT

ಮುಂಗಾರಿನ ಸವಾಲಿಗೆ ಸಜ್ಜಾಗದ ಪಾಲಿಕೆ

ರಸ್ತೆ ಮೇಲೆ ಹರಿಯುತ್ತಿರುವ ಚರಂಡಿ ನೀರು, ಸಾಂಕ್ರಾಮಿಕ ರೋಗ ಹರಡುವ ಭೀತಿ

ಪ್ರಮೋದ ಜಿ.ಕೆ
Published 21 ಮೇ 2018, 6:21 IST
Last Updated 21 ಮೇ 2018, 6:21 IST
ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಉಣಕಲ್‌ನ ಪ್ರೆಸಿಡೆಂಟ್‌ ಹೋಟೆಲ್‌ ಮುಂದೆ ನೀರು ನಿಂತ ಕಾರಣ ವಾಹನ ಸವಾರರು ಪರದಾಡಿದರು
ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಉಣಕಲ್‌ನ ಪ್ರೆಸಿಡೆಂಟ್‌ ಹೋಟೆಲ್‌ ಮುಂದೆ ನೀರು ನಿಂತ ಕಾರಣ ವಾಹನ ಸವಾರರು ಪರದಾಡಿದರು   

ಹುಬ್ಬಳ್ಳಿ: ಅವಳಿ ನಗರದಲ್ಲಿ ಈ ತಿಂಗಳ ಆರಂಭದಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ರಸ್ತೆಗಳು ಮಳೆನೀರಿನಲ್ಲಿ ಕೊಚ್ಚಿಹೋಗಿ ಗುಂಡಿ ಬೀಳುತ್ತಿವೆ. ಚರಂಡಿಗಳಲ್ಲಿನ ತ್ಯಾಜ್ಯ, ಮಳೆ ನೀರಿನೊಂದಿಗೆ ಸೇರಿ ರಸ್ತೆ ಮೇಲೆ ಹರಿದು ಜನ, ವಾಹನ ಸವಾರರು ಪರದಾಡುತ್ತಿದ್ದಾರೆ. ಆದರೂ, ಮಹಾನಗರ ಪಾಲಿಕೆ ಮಳೆ ತಂದೊಡ್ಡುವ ಸವಾಲು ಎದುರಿಸಲು ಇನ್ನೂ ಸಜ್ಜಾಗಿಲ್ಲ!

ಉಣಕಲ್‌ ಹತ್ತಿರದ ಪ್ರೆಸಿಡೆಂಟ್‌ ಹೋಟೆಲ್‌ ಎದುರು, ಗೋಕುಲ ರಸ್ತೆ, ಲೋಕಪ್ಪನ ಹಕ್ಕಲ, ಶಿರೂರು ಪಾರ್ಕ್‌, ವಿದ್ಯಾನಗರ, ವೀರಾಪುರ ಓಣಿ, ಗಣೇಶ ನಗರ, ರೆಹಮತ್‌ ನಗರ ಹೀಗೆ ಹಲವು ಪ್ರದೇಶಗಳಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದೆ. ಉಣಕಲ್‌ ಕ್ರಾಸ್‌ನಿಂದ ಬೈರಿದೇವರಕೊಪ್ಪದ ಬಿಆರ್‌ಟಿಎಸ್‌ ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿಯೂ ನೀರು ನಿಲ್ಲುತ್ತಿದೆ. ಪ್ರೆಸಿಡೆಂಟ್‌ ಹೋಟೆಲ್‌ ಮುಂಭಾಗದ ರಸ್ತೆಯಲ್ಲಿ ಸಾಕಷ್ಟು ನೀರು ಸಂಗ್ರಹವಾಗುತ್ತಿದೆ. ಇದರಿಂದ ಪ್ರಯಾಣಿಕರು ಮಳೆ ಬಂದಾಗಲೊಮ್ಮೆ ಸಂಕಷ್ಟ ಎದುರಿಸುವಂತಾಗಿದೆ.

ಪೇಪರ್‌, ಪ್ಲಾಸ್ಟಿಕ್‌ ಸೇರಿದಂತೆ ಇನ್ನಿತರ ತ್ಯಾಜ್ಯ ವಸ್ತುಗಳು ಬಿದ್ದಿರುವುದರಿಂದ ಬಹುತೇಕ ಕಡೆ ಚರಂಡಿ ಕಟ್ಟಿಕೊಂಡಿವೆ. ಇದರಿಂದ ಮಳೆಯ ನೀರು ಚರಂಡಿಯೊಳಗೆ ಸರಾಗವಾಗಿ ಹೋಗಲು ಸಾಧ್ಯವಾಗದೇ ರಸ್ತೆ ಮೇಲೆ ಹರಿಯುತ್ತಿದೆ. ಭಾನುವಾರ ಕೂಡ ಪಿ.ಬಿ. ರಸ್ತೆಯಲ್ಲಿರುವ ನೂರಾನಿ ಮಾರ್ಕೆಟ್‌ ಬಳಿ ಇದೇ ದೃಶ್ಯ ಕಂಡು ಬಂತು. ತ್ಯಾಜ್ಯ ತುಂಬಿಕೊಂಡಿದ್ದರಿಂದ ಚರಂಡಿಯಲ್ಲಿನ ನೀರು ರಸ್ತೆ ಮೇಲೆ ಹರಿಯಿತು. ಸಾರ್ವಜನಿಕರು ಮೂಗು ಮುಚ್ಚಿಕೊಂಡೇ ಓಡಾಡಿದರು.

ADVERTISEMENT

ಇತ್ತೀಚಿಗೆ ಸುರಿದ ಮಳೆಯಿಂದ ಧಾರವಾಡದ ಉಳವಿ ಚನ್ನ ಬಸವೇಶ್ವರ ನಗರ, ಹುಬ್ಬಳ್ಳಿಯ ಲಕ್ಷ್ಮೀಪುರ, ಬ್ಯಾಂಕರ್ಸ್‌ ಕಾಲೊನಿ, ಗೋಕುಲ ರಸ್ತೆ, ಸಪ್ತಾಪುರ, ಮಾಧವ ನಗರ ಮತ್ತು ಚಂದ್ರನಾಥ ನಗರದಲ್ಲಿರುವ ರಾಘವೇಂದ್ರ ಸ್ವಾಮಿ ದೇವಸ್ಥಾನದ ಸುತ್ತಮುತ್ತಲಿನ ಮನೆಗಳಿಗೆ ನೀರು ನುಗ್ಗಿತ್ತು. ಅನೇಕ ಮರಗಳು ಕೂಡ ಧರೆಗುರುಳಿವೆ. ಹಿಂದಿನ 20 ದಿನಗಳಲ್ಲಿ ಮಹಾನಗರ ಪಾಲಿಕೆಯ ನಿಯಂತ್ರಣ ಕೊಠಡಿಯಲ್ಲಿ ಮಳೆಯಿಂದ ಆದ ಸಮಸ್ಯೆಗಳ ಬಗ್ಗೆಯೇ 89 ದೂರುಗಳು ದಾಖಲಾಗಿವೆ.

‘ಚರಂಡಿಯಲ್ಲಿ ತ್ಯಾಜ್ಯ ತುಂಬಿಕೊಂಡಿದ್ದರಿಂದ ಮಳೆ ಬಂದರೆ ಚರಂಡಿ ನೀರು ರಸ್ತೆ ಮೇಲೆ ಹರಿದಾಡುತ್ತಿದೆ. ಆದ್ದರಿಂದ ನಿಯಮಿತವಾಗಿ ಚರಂಡಿ ಸ್ವಚ್ಛಗೊಳಿಸುತ್ತಿರಬೇಕು. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ನಿತ್ಯ ದೂರು ಬರುತ್ತಿವೆ’ ಎಂದು ನಿಯಂತ್ರಣ ಕೊಠಡಿಯ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ನಗರದಲ್ಲಿ ಮೊದಲೇ ರಸ್ತೆಗಳು ಸರಿಯಾಗಿಲ್ಲ. ಚರಂಡಿ ನೀರು ರಸ್ತೆಯ ಮೇಲೆ ಹರಿದರೆ ರಸ್ತೆ ಹಾಳಾಗುತ್ತದೆ. ಮನೆಯ ಮುಂದೆ ಚರಂಡಿ ನೀರಿನಿಂದ ಸೊಳ್ಳೆಗಳು ಹೆಚ್ಚಾಗಿ ರೋಗಗಳಿಗೆ ದಾರಿ ಮಾಡಿಕೊಟ್ಟಂತಾಗುತ್ತದೆ. ಆದ್ದರಿಂದ ಅಪೂರ್ಣಗೊಂಡಿರುವ ಕಾಮಗಾರಿಗಳನ್ನು ಮೊದಲು ಮುಗಿಸಬೇಕು’ ಎಂದು ಶೆಟ್ಟರ್‌ ಕಾಲೊನಿಯ ನಿವಾಸಿ, ಆಟೊ ಚಾಲಕ ಶಂಕರ ಗಾಯಕ್ವಾಡ್‌ ಹೇಳಿದರು.

ಸಿಬ್ಬಂದಿ ಕೊರತೆ ಕಾರಣ: ‘ಅವಳಿ ನಗರದಲ್ಲಿ ನಿಯಮಿತವಾಗಿ ಒಳಚರಂಡಿ ಸ್ವಚ್ಛಗೊಳಿಸಲು ಪಾಲಿಕೆಯಲ್ಲಿರುವ ಪೌರ ಕಾರ್ಮಿಕರ ಕೊರತೆಯೂ ಕಾರಣ’ ಎಂದು ಮೇಯರ್ ಸುಧೀರ ಸರಾಫ್‌ ಅಸಹಾಯಕತೆ ವ್ಯಕ್ತಪಡಿಸಿದರು. ‘ಸ್ವಚ್ಛತೆ ಕಾಪಾಡಲು ಅಗತ್ಯವಿರುವಷ್ಟು ಒಟ್ಟು ಸಿಬ್ಬಂದಿಯಲ್ಲಿ ನಮ್ಮಲ್ಲಿ ಅರ್ಧದಷ್ಟು ಸಿಬ್ಬಂದಿ ಮಾತ್ರ ಇದ್ದಾರೆ’ ಎಂದರು.

‘ಕಾಯಂ ಪರಿಹಾರಕ್ಕೆ ಒತ್ತು ಕೊಡಲಿ’

ಮಳೆಗಾಲ ಬಂದಾಗ ಮಾತ್ರ ಚರಂಡಿಗಳನ್ನು ಸ್ವಚ್ಛ ಮಾಡಬೇಕು, ರಸ್ತೆ ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು ಎನ್ನುವುದು ಸರಿಯಲ್ಲ. ಒಂದು ನಗರಕ್ಕೆ ಎಷ್ಟು ಮೂಲ ಸೌಕರ್ಯ ಕಲ್ಪಿಸಿದ್ದಾರೆ ಎನ್ನುವುದರ ಮೇಲೆ ಆ ನಗರದ ಅಭಿವೃದ್ಧಿ ನಿರ್ಧಾರವಾಗುತ್ತದೆ. ಆದರೆ, ವಾಣಿಜ್ಯ ನಗರಿ ಎಂದು ಹೆಸರು ಮಾಡಿರುವ ಹುಬ್ಬಳ್ಳಿಯಲ್ಲಿ ಉತ್ತಮ ರಸ್ತೆಗಳಿಲ್ಲ. ಸ್ವಲ್ಪ ಮಳೆ ಬಂದರೂ ಚರಂಡಿ ನೀರು ರಸ್ತೆ ಮೇಲೆ ಹರಿದು, ರಸ್ತೆಯೇ ಚರಂಡಿಯಾಗುತ್ತದೆ. ಪ್ರತಿ ಮಳೆಗಾಲ ಬಂದಾಗಲೂ ಇದೇ ರೀತಿಯ ಸಮಸ್ಯೆ ಎದುರಾಗುತ್ತದೆ. ಆದ್ದರಿಂದ, ಚರಂಡಿ ಸ್ವಚ್ಛಗೊಳಿಸಲು, ರಸ್ತೆ ಸರಿಯಾಗಿರುವಂತೆ ನೋಡಿಕೊಳ್ಳಲು ಆದ್ಯತೆ ಕೊಡಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಕಾಯಂ ಪರಿಹಾರ ಕಲ್ಪಿಸುವತ್ತ ಮಹಾನಗರ ಪಾಲಿಕೆ ಗಮನ ಹರಿಸಬೇಕು
– ಬಲವಂತರಾವ್ ಕುಲಕರ್ಣಿ, ಲೋಕಪ್ಪನ ಹಕ್ಕಲ ನಿವಾಸಿ

‘ಕರೆದರೂ ಸಭೆಗೆ ಬಾರದ ಆಯುಕ್ತರು’

‘ಮಳೆಗಾಲದಲ್ಲಿ ಎದುರಾಗಬಹುದಾದ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲು ಹಣಕಾಸಿನ ನೆರವು ಅಗತ್ಯವಿದೆ. ಆದ್ದರಿಂದ ಸಭೆಗೆ ಬರುವಂತೆ ಕರೆದರೂ ಆಯುಕ್ತರು ಬರುತ್ತಿಲ್ಲ. ಆದ್ದರಿಂದ ವಲಯ ಮಟ್ಟದ ಅಧಿಕಾರಿಗಳನ್ನು ಕರೆದು ಮಳೆಯಿಂದ ತೊಂದರೆಯಾಗದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದೇನೆ’ ಎಂದು ಮೇಯರ್‌ ಸುಧೀರ ಸರಾಫ್‌ ಹೇಳಿದರು.

‘ನಾನು ಚುನಾವಣೆ ಕೆಲಸದ ನಿಮಿತ್ತ ಮಾತ್ರ ಪಾಲಿಕೆ ಆಯುಕ್ತನಾಗಿ ಬಂದಿದ್ದೇನೆ. ಹೊಸದಾಗಿ ಬರುವ ಆಯುಕ್ತರೇ ಇನ್ನು ಮುಂದಿನ ಕೆಲಸಗಳಿಗೆ ಬರುತ್ತಾರೆ ಎಂದು ಈಗಿನ ಆಯುಕ್ತರು ಹೇಳುತ್ತಿದ್ದಾರೆ. ಆದ್ದರಿಂದ ಏನೂ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಸೋಮವಾರ ಕಚೇರಿಗೆ ಬರುವಂತೆ ಮನವಿ ಮಾಡಿಕೊಂಡಿದ್ದೇನೆ. ಇಲ್ಲವಾದರೆ ಬುಧವಾರ ಪೌರ ಕಾರ್ಮಿಕರು, ಅಧಿಕಾರಿಗಳು ಮತ್ತು ಸಿಬ್ಬಂದಿ ಜೊತೆ ಸಭೆ ನಡೆಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುತ್ತೇನೆ’ ಎಂದು ಅವರು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.