ADVERTISEMENT

ಮೋದಿ ಮಾತಿಗೆ ಮನಸೋತರೇ ಜನ?

ಕಾಂಗ್ರೆಸ್‌ ಒಡುಕು, ಬಿಜೆಪಿಗೆ ಗೆಲುವು

​ಪ್ರಜಾವಾಣಿ ವಾರ್ತೆ
Published 16 ಮೇ 2018, 6:46 IST
Last Updated 16 ಮೇ 2018, 6:46 IST

ಹುಬ್ಬಳ್ಳಿ: ‘ಕೇಂದ್ರ, ರಾಜ್ಯ ಮತ್ತು ನಿಮ್ಮ ಕ್ಷೇತ್ರದಲ್ಲಿ ಬಿಜೆಪಿ ‌ಇದ್ದರೆ, ಮಹದಾಯಿ ನದಿ ನೀರು ತರುವುದು ಸುಲಭವಾಗುತ್ತದೆ’

ಚುನಾವಣೆಗೂ ಮೊದಲು ಗದುಗಿನಲ್ಲಿ ನಡೆದ ಬಿಜೆ‍ಪಿ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಮತದಾರರನ್ನು ಉದ್ದೇಶಿಸಿ ಹೇಳಿದ್ದ ಮೇಲಿನ ಮಾತು ನವಲಗುಂದ ಕ್ಷೇತ್ರದಲ್ಲಿ ಬಿಜೆಪಿಯ ಶಂಕರ ಪಾಟೀಲ ಮುನೇನಕೊಪ್ಪ ಅವರ ಗೆಲುವಿಗೆ ಕಾರಣವಾಯಿತೇ? ಹೀಗೊಂದು ಚರ್ಚೆ ಜೋರಾಗಿ ನಡೆಯುತ್ತಿದೆ.

ಏಕೆಂದರೆ, ಮಹದಾಯಿ ನದಿ ನೀರಿಗಾಗಿ ನವಲಗುಂದ ಕ್ಷೇತ್ರದ ಜನ ಹಗಲಿರಳೆನ್ನದೇ ಹೋರಾಟ ಮಾಡುತ್ತಿದ್ದಾರೆ. ಲಾಠಿ ಪೆಟ್ಟು ಕೂಡ ತಿಂದಿದ್ದಾರೆ. ಇದಕ್ಕಾಗಿ ಅನೇಕ ಕಷ್ಟಗಳನ್ನು ಸಹಿಸಿಕೊಂಡಿದ್ದಾರೆ. ಯಾರೇ ಅಧಿಕಾರಕ್ಕೆ ಬಂದರೂ ಒಟ್ಟಿನಲ್ಲಿ ಮಹದಾಯಿ ನದಿ ನೀರು ಹರಿಯಬೇಕು ಎಂಬುದು ಅವರ ದೊಡ್ಡ ಆಸೆ. ಮತದಾರರ ನಾಡಿಮಿಡಿತ ಅರಿತ ನರೇಂದ್ರ ಮೋದಿ ನೀಡಿದ ಈ ಹೇಳಿಕೆ ಮುನೇನಕೊಪ್ಪ ಅವರ ಗೆಲುವಿಗೆ ನೆರವಾಗಿದೆ ಎಂಬುದು ಕ್ಷೇತ್ರದ ಮತದಾರರ ಅನಿಸಿಕೆ.

ADVERTISEMENT

2008ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಮುನೇನಕೊಪ್ಪ 49,436 ಮತಗಳನ್ನು ಪಡೆದು ಮೊದಲ ಬಾರಿಗೆ ಶಾಸಕರಾಗಿದ್ದರು. 2013ರಲ್ಲಿ ಜೆಡಿಎಸ್‌ನ ಎನ್‌.ಎಚ್‌. ಕೋನರಡ್ಡಿ ಜಯ ಸಾಧಿಸಿದ್ದರು. ಈ ಬಾರಿ ಮುನೇನಕೊಪ್ಪ ರೈತ ಬಂಡಾಯದ ನಾಡಿನಲ್ಲಿ ಮತ್ತೆ ಕಮಲ ಅರಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿಯನ್ನು ಶತಾಯ, ಗತಾಯ ಗೆಲ್ಲಿಸಲೇಬೇಕೆಂದು ಖುದ್ದು ಕುಮಾರಸ್ವಾಮಿ ಅವರೇ ‘ವಿಕಾಸ ಪರ್ವ’ ಕಾರ್ಯಕ್ರಮ ನಡೆಸಿದ್ದರು. ಆಗ ಕೋನರಡ್ಡಿ ಸಾವಿರಾರು ಜನರನ್ನು ಸೇರಿಸಿ ಜನಶಕ್ತಿ ಪ್ರದರ್ಶಿಸಿದ್ದರು. ಕ್ಷೇತ್ರದಲ್ಲಿ ಕೋನರಡ್ಡಿ ಅವರಿಗೆ ಒಳ್ಳೆಯ ಹೆಸರು ಇದೆ. ಆದರೆ, ಕೋನರಡ್ಡಿ ಶಾಸಕರಾದ ಬಳಿಕ ರೈತರ ಬೇಡಿಕೆ ಮತ್ತು ಹೋರಾಟಗಳಿಗೆ ನಿರೀಕ್ಷಿತ ಮಟ್ಟದಲ್ಲಿ ಸ್ಪಂದಿಸಲಿಲ್ಲ ಎನ್ನುವುದು ಮುಳುವಾಯಿತು ಎನ್ನಲಾಗುತ್ತಿದೆ.

ಕಾಂಗ್ರೆಸ್‌ ಅಭ್ಯರ್ಥಿ ವಿನೋದ ಅಸೂಟಿ ಸೋಲಲು ಪಕ್ಷದಲ್ಲಿನ ಬಂಡಾಯ ಪ್ರಮುಖ ಕಾರಣ. ಅಣ್ಣಿಗೇರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದ ಪ್ರಕಾಶ್‌ ಅಂಗಡಿಗೆ ಟಿಕೆಟ್‌ ಕೈ ತಪ್ಪಿದ್ದು, ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಶಿವಾನಂದ ಕರಿಗಾರ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿ ಉಳಿದಿದ್ದರ ಜತೆಗೆ ಕಾಂಗ್ರೆಸ್‌ನಿಂದ ಟಿಕೆಟ್‌ನ ಪ್ರಬಲ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಕೆ.ಎನ್‌. ಗಡ್ಡಿ ಅವರು ತಟಸ್ಥರಾಗಿ ಉಳಿದದ್ದು ಬಿಜೆಪಿಗೆ ವರವಾಯಿತು ಎಂದು ವಿಶ್ಲೇಷಿಸಲಾಗುತ್ತಿದೆ.

ಎಂ. ಚಂದ್ರಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.