ADVERTISEMENT

ರಮ್ಜಾನ್ ಬಜಾರ್‌ನಲ್ಲಿ ಖರೀದಿ ಭರಾಟೆ

ತರಹೇವಾರಿ ಟೋಪಿ, ಕುರ್ತಾ, ಸುಗಂಧ ದ್ರವ್ಯ ಮಾರಾಟ ಜೋರು

ಇ.ಎಸ್.ಸುಧೀಂದ್ರ ಪ್ರಸಾದ್
Published 15 ಜೂನ್ 2018, 12:01 IST
Last Updated 15 ಜೂನ್ 2018, 12:01 IST
ಧಾರವಾಡದ ಸುಭಾಸ ರಸ್ತೆಯಲ್ಲಿನ ರಮ್ಜಾನ್ ಮಾರುಕಟ್ಟೆಯಲ್ಲಿ ಗುರುವಾರ ಕಂಡುಬಂದ ಜನಜಂಗುಳಿ
ಧಾರವಾಡದ ಸುಭಾಸ ರಸ್ತೆಯಲ್ಲಿನ ರಮ್ಜಾನ್ ಮಾರುಕಟ್ಟೆಯಲ್ಲಿ ಗುರುವಾರ ಕಂಡುಬಂದ ಜನಜಂಗುಳಿ   

ಧಾರವಾಡ: ಪವಿತ್ರ ರಮ್ಜಾನ್‌ ಹಬ್ಬದ ಮಾರುಕಟ್ಟೆ ರಂಗೇರಿದ್ದು, ಮುಸ್ಲಿಮರು ಸೇರಿದಂತೆ ಸರ್ವ ಧರ್ಮೀಯರು ಖರೀದಿ ಭರಾಟೆಯಲ್ಲಿ ತಲ್ಲೀನರಾಗಿದ್ದಾರೆ.

ಗಣೇಶ ಚತುರ್ಥಿ, ದೀಪಾವಳಿ ಸೇರಿದಂತೆ ವಿವಿಧ ಹಬ್ಬಗಳ ಸಂದರ್ಭದಲ್ಲೂ ಸದಾ ಗಿಜಿಗಿಡುವ ಸುಭಾಸ ರಸ್ತೆ ಈಗ ರಮ್ಜಾನ್ ಹಬ್ಬದ ಸಂದರ್ಭದಲ್ಲೂ ಅದೇ ಕಳೆಯನ್ನು ಮತ್ತೆ ಮೈದುಂಬಿಕೊಂಡಿದೆ. ರಸ್ತೆಯ ಇಕ್ಕೆಲಗಳಲ್ಲೂ ತಾತ್ಕಾಲಿಕ ಮಳಿಗೆಗಳಲ್ಲಿ ಮಾರಾಟಕ್ಕಿಟ್ಟಿರುವ ಬಟ್ಟೆ, ಚಪ್ಪಲಿ, ಸುಗಂಧ ದ್ರವ್ಯಗಳಿಗೆ ಗ್ರಾಹಕರು ಮುಗಿಬಿದ್ದಿದ್ದಾರೆ.

‘ರಾತ್ರಿಯಾದಂತೆ ಮಾರುಕಟ್ಟೆ ರಂಗೇರುತ್ತದೆ. ಸುಗಂಧ ದ್ರವ್ಯ, ಖರ್ಜೂರ ಸೇರಿದಂತೆ ವಿವಿಧ ಬಗೆಯ ಹಣ್ಣುಗಳು ಮಾರಾಟ ಜೋರಾಗಿದೆ. ದುಬೈ, ಮುಂಬೈ, ಸೂರತ್‌, ಅಸ್ಸಾಂನಿಂದ ಬಟ್ಟೆಗಳನ್ನು ತರಿಸಲಾಗಿದೆ’ ಎಂದು ವ್ಯಾಪಾರಿ ಮುಜಮಿಲ್‌ ಪಠಾಣ ತಿಳಿಸಿದರು.

ADVERTISEMENT

ಪ್ರಾರ್ಥನೆಗೆ ಧರಿಸುವ ತರಹೇವಾರಿ ಟೋಪಿಗಳಿವೆ. ಟರ್ಕಿ, ಆಫ್ಘಾನಿಸ್ತಾನ್ ಸೇರಿದಂತೆ ಇತರ ದೇಶಗಳಲ್ಲಿ ಪ್ರಚಲಿತದಲ್ಲಿರುವ ಟೋಪಿ ಹಾಗೂ ಕುರ್ತಾಗಳು ಆಲ್ಕೋಹಾಲ್ ಬಳಸದ ಸುಗಂಧ ದ್ರವ್ಯಕ್ಕೆ ಹೆಚ್ಚು ಬೇಡಿಕೆ ಇದೆ. ಬಟ್ಟೆ, ತಿನಿಸು ಮಾತ್ರವಲ್ಲದೆ ಗೃಹೋ
ಪಯೋಗಿ ವಸ್ತು, ಆಲಂಕಾರಿಕ ಸಾಮಗ್ರಿಗಳೂ ಮಾರಾಟಕ್ಕಿವೆ.

‘ವಸ್ತುಗಳು ಅಗ್ಗದ ಬೆಲೆಗೆ ಸಿಗುವುದರಿಂದ ಪ್ರತಿಯೊಬ್ಬರೂ ಖರೀದಿಸಲು ಇಷ್ಟ ಪಡುತ್ತಾರೆ. ಕೊನೆಯ ದಿನದ ಮಾರಾಟ ಭರಾಟೆ ಜೋರಾಗಿರುತ್ತದೆ. ವ್ಯಾಪಾರಸ್ಥರಿಗೆ ಒಳ್ಳೆಯ ವ್ಯಾಪಾರವಾಗುತ್ತದೆ’ ಎನ್ನುವುದು ಮುಜಮಿಲ್ ಅವರ ಅನಿಸಿಕೆ.

ಸಂಜೆ ಇಫ್ತಾರ್ ನಂತರ ಉಪವಾಸ ಅಂತ್ಯಗೊಳಿಸಿ ಮುಸ್ಲಿಂ ಮಹಿಳೆಯರು ಹಾಗೂ ಪುರುಷರು ಮಾರುಕಟ್ಟೆಗೆ ಬರುತ್ತಾರೆ. ಅಷ್ಟರೊಳಗೆ ಇತರ ಧರ್ಮೀಯರು ಬಂದು ವಸ್ತುಗಳಖರೀದಿಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಸುಭಾಸ ರಸ್ತೆಗೆ ವಾಹನ ಪ್ರವೇಶ ನಿರ್ಬಂಧಿಸಿರುವುದರಿಂದ ಮಾರುಕಟ್ಟೆಯಲ್ಲಿ ತಿರುಗಾಡಲು ಅನುಕೂಲವಾಗಿದೆ.

ತಡರಾತ್ರಿ ಝಗಮಗ ಬೆಳಕಿನಿಂದ ಕಂಗೊಳಿಸುವ ಮಾರುಕಟ್ಟೆಯಲ್ಲಿ ಬೆಳಗಿನ ಜಾವದ ವರೆಗೂ ವಹಿವಾಟು ನಡೆಯುತ್ತಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.