ADVERTISEMENT

ರಮ್ಜಾನ್ ಸಂಭ್ರಮಾಚರಣೆ ಇಂದು

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2012, 4:30 IST
Last Updated 20 ಆಗಸ್ಟ್ 2012, 4:30 IST
ರಮ್ಜಾನ್ ಸಂಭ್ರಮಾಚರಣೆ ಇಂದು
ರಮ್ಜಾನ್ ಸಂಭ್ರಮಾಚರಣೆ ಇಂದು   

ಹುಬ್ಬಳ್ಳಿ: ಅವಳಿನಗರದಲ್ಲಿ ರಮ್ಜಾನ್ ಹಬ್ಬವನ್ನು ಸೋಮವಾರ ಆಚರಿಸುವ ಹಿನ್ನೆಲೆಯಲ್ಲಿ ಪೊಲೀಸ್ ಭದ್ರತೆ ಬಿಗಿಗೊಳಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಡಾ.ಕೆ.ರಾಮಚಂದ್ರ ರಾವ್ ತಿಳಿಸಿದರು.

ಹಬ್ಬದ ಸಂಭ್ರಮಾಚರಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಪೆಟ್ರೋಲಿಂಗ್ ಬಿಗಿಗೊಳಿಸಲಾಗಿದೆ. ಆತಂಕ ಸೃಷ್ಟಿಸುವ ಗಾಳಿಸುದ್ದಿ, ಊಹಾಪೋಹಗಳಿಗೆ  ಜನರು ಮರುಳಾಗದಂತೆ ಸಲಹೆ ನೀಡಿರುವ ಅವರು, ಇಂತಹ ದುಷ್ಕೃತ್ಯಗಳಲ್ಲಿ ತೊಡಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮಾರ್ಗ ಬದಲಾವಣೆ: ಮುಸ್ಲಿಂ ಸಮುದಾಯದ ಜನರು ಸೋಮವಾರ ಬೆಳಿಗ್ಗೆ ಚೆನ್ನಮ್ಮ ವೃತ್ತದ ಬಳಿಯ ಈದ್ಗಾ ಮೈದಾನಕ್ಕೆ ಸಾಮೂಹಿಕ ನಮಾಜ್ ಸಲ್ಲಿಸಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಸಾಧ್ಯತೆನ ಇರುವ ಹಿನ್ನೆಲೆಯಲ್ಲಿ ನಗರದ ಕೆಲವು ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧಿಸಿ ಕಮಿಷನರ್ ಆದೇಶ ಹೊರಡಿಸಿದ್ದಾರೆ.

ಮೇದಾರ ಓಣಿಯಿಂದ ತುಳಜಾಭವಾನಿ ವೃತ್ತ, ಪೆಂಡಾರಗಲ್ಲಿಯಿಂದ ತುಳಜಾಭವಾನಿ ಗುಡಿ ಮೂಲಕ ದಾಜಿಬಾನಪೇಟೆ, ಕಾಳಮ್ಮನ ಅಗಸಿಯಿಂದ ಮಹಾವೀರಗಲ್ಲಿ ಮೂಲಕ ಮೂರುಸಾವಿರಮಠ- ಅಂಚಟಗೇರಿ ಓಣಿ, ಪದ್ಮಾ ಟಾಕೀಸ್ ರಸ್ತೆ, ಗೌಳಿ ಗಲ್ಲಿ, ಚೆನ್ನಪೇಟೆ ಮುಖ್ಯರಸ್ತೆಯಿಂದ ಚಾಟ್ನಿಮಠ ಕಡೆಗೆ, ಕಮರಿಪೇಟೆ ಜೈ ಭಾರತ್ ವೃತ್ತದ ಮಾರ್ಗದಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ.

ಚೆನ್ನಮ್ಮ ವೃತ್ತದಲ್ಲಿ ವಾಹನ ದಟ್ಟಣೆ ತಪ್ಪಿಸುವ ಹಿನ್ನೆಲೆಯಲ್ಲಿ ಗದಗ, ನವಲಗುಂದ ಮತ್ತು ಕಾರವಾರ ರಸ್ತೆಗಳ ಮೂಲಕ ಬರುವ ವಾಹನಗಳ ಮಾರ್ಗವನ್ನೂ ಬದಲಾಯಿಸಲಾಗಿದೆ. ಗದಗ ರಸ್ತೆಯಿಂದ ನಗರ ಪ್ರವೇಶಿಸುವ ವಾಹನಗಳನ್ನು ಪಿಂಟೋ ಪಾಯಿಂಟ್ ಬಳಿ ಮಾರ್ಗ ಬದಲಾಯಿಸಿ ದೇಸಾಯಿ ಅಡ್ಡರಸ್ತೆ ಮೂಲಕ ಕಾಟನ್ ಮಾರ್ಕೆಟ್ ಮೂಲಕ ತೆರಳಲು ಅನುವು ಮಾಡಿಕೊಡಲಾಗಿದೆ. ಸಾರಿಗೆ ಬಸ್‌ಗಳಿಗೆ ಗ್ಲಾಸ್ ಹೌಸ್ ಎದುರುಗಡೆ ನಿಲುಗಡೆಗೊಳಿಸಲು ಸೂಚಿಸಲಾಗಿದೆ.

ಬೆಂಗಳೂರು ರಸ್ತೆ ಮೂಲಕ ಧಾರವಾಡ ತೆರಳಲು ಬೈಪಾಸ್ ಮೂಲಕ ಅವಕಾಶ ಮಾಡಿಕೊಡಲಾಗಿದೆ. ನವಲಗುಂದ ಮತ್ತು ಗದಗ ಕಡೆಗೆ ತೆರಳುವ ವಾಹನಗಳಿಗೆ ಮಾತ್ರ ತೊರವಿಹಕ್ಕಲ, ಎಂ.ಟಿ. ಮಿಲ್, ವಾಣಿ ವಿಲಾಸ ಕ್ರಾಸ್ ಮೂಲಕ ಹೊಸೂರ ವೃತ್ತ, ಚೆನ್ನಮ್ಮ ವೃತ್ತ, ಅಲ್ಲಿಂದ ದೇಸಾಯಿ ವೃತ್ತ, ಕೇಶ್ವಾಪುರ, ಸರ್ವೋದಯ ವೃತ್ತದ ಮೂಲಕ ನವಲಗುಂದ ಮತ್ತು ಗದಗ ಕಡೆ ತೆರಳಲು ಅವಕಾಶ ಕಲ್ಪಿಸಲಾಗುವುದು ಎಂದು ಕಮಿಷನರ್ ತಿಳಿಸಿದ್ದಾರೆ.

ರಮ್ಜಾನ್ ಶುಭಾಶಯ
ರಮ್ಜಾನ್ ಹಬ್ಬ ಸರ್ವರಿಗೂ ಸುಖ-ಶಾಂತಿ, ಸಮೃದ್ಧಿ ತರಲಿ ಎಂದು ಹುಬ್ಬಳ್ಳಿಯ ಅಂಜುಮನ್-ಎ-ಇಸ್ಲಾಮ್ ಅಧ್ಯಕ್ಷ ಜಬ್ಬಾರ್‌ಖಾನ್ ಹೊನ್ನಳ್ಳಿ, ಮಾಜಿ ಶಾಸಕ ಎ.ಎಂ. ಹಿಂಡಸಗೇರಿ, ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ಹುಬ್ಬಳ್ಳಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಜಿ.ಆರ್.ಬೆಲ್ಲದ ಹಾಗೂ ಸಂಘದ ಪದಾಧಿಕಾರಿಗಳು,  ರಾಜ್ಯ ನದಾಫ/ಪಿಂಜಾರ ಸಂಘದ ಹುಬ್ಬಳ್ಳಿ ತಾಲ್ಲೂಕು ಘಟಕದ ಅಧ್ಯಕ್ಷ ಅಬ್ದುಲ್ ಮುನಾಫ ದೇವಗಿರಿ ಹಾಘೂ ಪದಾಧಿಕಾರಿಗಳು ಶುಭ ಹಾರೈಸಿದ್ದಾರೆ.

ಧಾರವಾಡ ವರದಿ
ಧಾರವಾಡ ಅಂಜುಮನ್-ಎ-ಇಸ್ಲಾಮ್ ಅಧ್ಯಕ್ಷ ಇಸ್ಮಾಯಿಲ್ ತಮಾಟಗಾರ, ಇಂಡಿಯನ್ ಯೂನಿಯನ್ ಆಫ್ ಮುಸ್ಲಿಮ್ ಲೀಗ್ ರಾಜ್ಯ ಘಟಕದ ಅಧ್ಯಕ್ಷ ಮೀರ್‌ಮೆಹಮೂದ್ ಇನಾಮದಾರ, ಜಿಲ್ಲಾ ಘಟಕದ ಅಧ್ಯಕ್ಷ ಅಸ್ಲಮ್ ತೇಗೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೌಲಾನಾ ಇಲಿಯಾಸ್ ಶಿರಹಟ್ಟಿ ಮುಂತಾದವರು ರಮ್ಜಾನ್ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.