ಧಾರವಾಡ: `ಕರ್ನಾಟಕದಲ್ಲಿ ಇದ್ದಷ್ಟು ಜಾನಪದ ಸಂಪತ್ತು ಬೇರೆ ಯಾವ ರಾಜ್ಯದಲ್ಲಿಯೂ ಇಲ್ಲ~ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪಾಟೀಲ ಪುಟ್ಟಪ್ಪ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಜಾನಪದ ಮಂಟಪವು 57ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ ಡೊಳ್ಳಿನ ಹಾಡಿನ ಸ್ಪರ್ಧೆ ಹಾಗೂ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
`ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಹಾಗೂ ಕರಾವಳಿ ಪ್ರದೇಶದಲ್ಲಿರುವವರು ಅವರವರಿಗೆ ಪ್ರಿಯವಾದ ಕಲೆಗಳನ್ನು ಮೈಗೂಡಿಸಿಕೊಂಡಿದ್ದಾರೆ. ಆದರೆ ಅಧುನಿಕರಣದ ಹೊಡೆತಕ್ಕೆ ಜಾನಪದ ಪ್ರಕಾರದ ಒಂದೊಂದೇ ಕಲೆಗಳು ನಶಿಸಿ ಹೋಗುತ್ತಿವೆ. ಕಲೆಗಳು ನಶಿಸಬಾರದು ಎಂಬ ಉದ್ದೇಶದಿಂದ ಸರ್ಕಾರ ಕಲಾವಿದರಿಗೆ ಮಾಸಿಕ ವೇತನ ನೀಡುತ್ತಿದೆ. ಕಲಾವಿದರು ಬದುಕುಳಿದರೆ ಮಾತ್ರ ಜಾನಪದ ಸಾಹಿತ್ಯ ಬದುಕುಳಿಯಲು ಸಾಧ್ಯ. ಈ ಹಿನ್ನೆಲೆಯಲ್ಲಿ ಕಲೆಯನ್ನು ಪೋಷಿಸಲು ಎಲ್ಲರೂ ಶ್ರಮ ವಹಿಸಬೇಕು~ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಿರಿಯ ವ್ಯವಸ್ಥಾಪಕ ಎಸ್.ಐ.ಭಾವಿಕಟ್ಟಿ, `ಗ್ರಾಮೀಣ ಪ್ರದೇಶದ ಜನರ ಬೆವರಿನ ಸಂಸ್ಕೃತಿಯ ಮೂಲದಿಂದ ಹುಟ್ಟಿಕೊಂಡ ಜಾನಪದ ಸಾಹಿತ್ಯವು ಜನ ಸಾಮಾನ್ಯರಿಂದ ಮರೆಯಾಗುತ್ತಿದೆ~ ಎಂದು ವಿಷಾದಿಸಿದರು.
ಗದಗಿನ ಡಾ.ಎಸ್.ಎಫ್.ಜಕಬಾಳ, `ಡೊಳ್ಳಿನ ಹಾಡುಗಳ ವೈವಿಧ್ಯತೆ~, ಗೊಟಗೋಡಿ ಜಾನಪದ ವಿವಿಯ ಡಾ.ಚಂದಪ್ಪ, `ಡೊಳ್ಳಿನ ಹಾಡಿನ ಪ್ರಾಚೀನ ಪರಂಪರೆ~, ಹಾಗೂ ಡಾ.ಶ್ರೀಶೈಲ ಹುದ್ದಾರ, `ಸಮಕಾಲೀನ ಸಂದರ್ಭದಲ್ಲಿ ಡೊಳ್ಳಿನ ಹಾಡುಗಳು~ ಕುರಿತು ಮಾತನಾಡಿದರು.
ಶಂಕರ ಕುಂಬಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಕಾರ್ಯಾಧ್ಯಕ್ಷ ಪ್ರೊ.ಬಿ.ವಿ.ಗುಂಜೆಟ್ಟಿ ಹಾಗೂ ಶಿವಾನಂದ ಭಾವಿಕಟ್ಟಿ ಇದ್ದರು. ಡಾ.ರಾಮು ಮೂಲಗಿ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.