ADVERTISEMENT

ರಾಜ್ಯ ಸರ್ಕಾರದಿಂದ ನೀತಿ ಸಂಹಿತೆ ಉಲ್ಲಂಘನೆ: ಆರೋಪ

‘ಅನಿಲ ಭಾಗ್ಯ’ ಯೋಜನೆಯಡಿ ಸ್ಟೌ ವಿತರಣೆಗೆ ಸಿದ್ಧತೆ: ಜಗದೀಶ ಶೆಟ್ಟರ್‌

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2018, 9:04 IST
Last Updated 31 ಮಾರ್ಚ್ 2018, 9:04 IST

ಹುಬ್ಬಳ್ಳಿ: ‘ಅನಿಲ ಭಾಗ್ಯ’ ಯೋಜನೆಯಡಿ ಜನರಿಗೆ ಉಚಿತ ಸ್ಟೌ ವಿತರಣೆ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರದಿಂದ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾಗಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಆರೋಪಿಸಿದರು.‘ಈ ಯೋಜನೆಯಡಿ ವಿತರಿಸಲು ಒಂದು ಲಕ್ಷ ಸ್ಟೌಗಳನ್ನು ಗೋದಾಮಿನಲ್ಲಿ ಇಡಲಾಗಿದೆ. ಕಾಂಗ್ರೆಸ್‌ಗೆ ಮತ ಹಾಕುವಂಥವರನ್ನು ಗುರುತಿಸಿ ಅವರಿಗೆ ಬೇರೆ ಬೇರೆ ರೂಪದಲ್ಲಿ ಈ ಸ್ಟೌಗಳನ್ನು ವಿತರಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ’ ಎಂದು ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಭಾರತೀಯ ಭ್ರಷ್ಟಾಚಾರ ನಿಗ್ರಹ ಮಂಡಳಿಯ ಬೆಂಬಲಿಗ ಕೆ.ಕೆ.ಸಿಂಗ್‌ ಅವರು, ಈ ಬಗ್ಗೆ ಕಾಂಗ್ರೆಸ್‌ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಬಿಜೆಪಿಯಿಂದಲೂ ದೂರು ನೀಡಲಾಗುವುದು’ ಎಂದು ಶೆಟ್ಟರ್‌ ತಿಳಿಸಿದರು.‘ಸರ್ಕಾರಿ ಸಂಸ್ಥೆಯಾಗಿರುವ ಎಂಎಸ್‌ಐಎಲ್‌ಗೆ ಸ್ಟೌ ವಿತರಣೆಯ ಜವಾಬ್ದಾರಿ ನೀಡಲಾಗಿದೆ. ಅದು ಟೆಂಡರ್‌ ಕರೆದಿತ್ತು. ಒಂದೇ ಸಮೂಹಕ್ಕೆ ಸೇರಿದ್ದು ಎನ್ನಲಾದ ನಾಲ್ಕು ಕಂಪನಿಗಳು ಅರ್ಜಿ ಸಲ್ಲಿಸಿದ್ದವು. ಈ ಪೈಕಿ, ಗ್ರೀನ್‌ಶೆಫ್‌ ಅಪ್ಲೈಯನ್ಸಸ್‌ ಲಿಮಿಟೆಡ್‌ನ ಸುಖಲಾಲ್‌ ಜೈನ್, ಸ್ಟೌಕ್ರಾಫ್ಟ್‌ ಪ್ರೈವೇಟ್‌ ಲಿಮಿಟೆಡ್‌ನ ಎಸ್.ಎನ್. ಪ್ರವೀಣ್‌ ಎಂಬುವರಿಗೆ ಸ್ಟೌ ವಿತರಣೆ ಮಾಡಲು ಆದೇಶ ನೀಡಲಾಗಿದೆ’ ಎಂದರು.‘ಸ್ಟೌಗಳನ್ನಿಟ್ಟಿರುವ ಗೋದಾಮುಗಳನ್ನು ಜಪ್ತಿ ಮಾಡಬೇಕು. ಕಾಂಗ್ರೆಸ್‌ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಶೆಟ್ಟರ್‌ ಆಯೋಗವನ್ನು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT