ADVERTISEMENT

ರೆಡ್ ರಿಬ್ಬನ್ ಎಕ್ಸ್‌ಪ್ರೆಸ್: ಪ್ರತಿ ಬೋಗಿಯಲ್ಲೂ ಮಾಹಿತಿ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2012, 6:25 IST
Last Updated 8 ಏಪ್ರಿಲ್ 2012, 6:25 IST

ಧಾರವಾಡ: ಎಚ್‌ಐವಿ ನಿಯಂತ್ರಣ ಹಾಗೂ ಸೇವಾ ಸೌಲಭ್ಯಗಳ ಕುರಿತು ಜಾಗೃತಿಯನ್ನು ಮೂಡಿಸುವುದರ ಜೊತೆಯಲ್ಲಿ ಇನ್ನಿತರ ಸೋಂಕುಗಳಾದ ಟಿಬಿ, ಮಲೇರಿಯಾ ಮತ್ತು ತಾಯಿ- ಮಗುವಿನ ಆರೋಗ್ಯ ಸೇವೆಗಳ ಬಗ್ಗೆ ಗ್ರಾಮೀಣ ಸಮುದಾಯದಲ್ಲಿ ತಿಳಿವಳಿಕೆ ನೀಡುವ ಉದ್ದೇಶದಿಂದ ರಾಷ್ಟ್ರೀಯ ಗ್ರಾಮೀಣ ಅಭಿಯಾನ, ಭಾರತೀಯ ರೈಲ್ವೆ ಮತ್ತು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಆಯೋಸಿರುವ ರೆಡ್‌ರಿಬ್ಬನ್ ಎಕ್ಸ್‌ಪ್ರೆಸ್ ಅಭಿಯಾನಕ್ಕೆ ಶನಿವಾರ ಧಾರವಾಡ ರೈಲ್ವೆ ನಿಲ್ದಾಣದಲ್ಲಿ ಚಾಲನೆ ನೀಡಲಾಯಿತು.

ಎಂಟು ಬೋಗಿಗಳನ್ನು ಹೊಂದಿರುವ ರೆಡ್‌ರಿಬ್ಬನ್ ಎಕ್ಸಪ್ರೆಸ್ ರೈಲಿನಲ್ಲಿ ನಾಲ್ಕು ವಸ್ತು ಪ್ರದರ್ಶನ ಬೋಗಿಗಳಿವೆ. ಮೂರು ಬೋಗಿಗಳು ಎಚ್‌ಐವಿ ಕುರಿತಾದ ಮಾಹಿತಿಯನ್ನು ನೀಡುತ್ತವೆ. ನಾಲ್ಕನೇ ಬೋಗಿಯಲ್ಲಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದ ಮಾಹಿತಿ ಸಿಗುತ್ತದೆ. ಇನ್ನೊಂದು ಬೋಗಿಯಲ್ಲಿ ಆಪ್ತ ಸಮಾಲೋಚನೆ, ಲೈಂಗಿಕ ಸೋಂಕುಗಳಿಗೆ ಚಿಕಿತ್ಸೆ, ಮತ್ತೊಂದು ಬೋಗಿಯಲ್ಲಿ ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಪಂಚಾಯತ್ ಸದಸ್ಯರು, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು, ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ವ್ಯವಸ್ಥೆ ಕಲ್ಪಿಸಲಾಗಿದೆ. ಶನಿವಾರ ಮೂರು ಅಧಿವೇಶನಗಳಲ್ಲಿ ತರಬೇತಿ ನೀಡಲಾಯಿತು.

ಎಚ್‌ಐವಿ ಏಡ್ಸ್ ಕುರಿತಂತೆ ಗ್ರಾಮಾಂತರ ಜನರಲ್ಲಿ ಅರಿವು ಮೂಡಿಸಲು ಈ ರೈಲಿನ ಜೊತೆಯಲ್ಲಿ ಮೂರು ಕಲಾತಂಡಗಳು ಆಗಮಿಸಿದ್ದು, ಒಂದು ತಂಡ ರೈಲ್ವೆ ನಿಲ್ದಾಣದಲ್ಲಿ ಜಾಗೃತಿ ಕಾರ್ಯಕ್ರಮ ಪ್ರದರ್ಶನ ಮಾಡಿತು. ಇನ್ನೆರಡು ತಂಡಗಳು ಗ್ರಾಮಗಳಿಗೆ ತೆರಳಿ ಜಾಗೃತಿ ಕಾರ್ಯಕ್ರಮ ನೀಡಿದವು.

ಯುವಜನಾಂಗಕ್ಕೆ ಎಚ್‌ಐವಿ ಬಗ್ಗೆ ಹೆಚ್ಚಿನ ತಿಳಿವಳಿಕೆ ನೀಡುವುದು ಈ ಬಾರಿಯ ಅಭಿಯಾನದ ಉದ್ದೇಶವಾಗಿದ್ದು ಕಾಲೇಜು ವಿದ್ಯಾರ್ಥಿಗಳು ತಂಡೋಪಂಡವಾಗಿ ಆಗಮಿಸಿ ಮಾಹಿತಿ ಪಡೆದರು.

ಈ ರೈಲು ಏಡ್ಸ್‌ನ ಕುರಿತಾದ ಮಾಹಿತಿಯ ಕಣಜವನ್ನೇ ಹೊತ್ತು ತಂದಿದೆ. ಟಿವಿ ಮೂಲಕ ಮಾಹಿತಿ ಹಾಗೂ ರೈಲಿನ ಬೋಗಿಯಲ್ಲಿಯೇ ಒಂದು ದೂರವಾಣಿ ವ್ಯವಸ್ಥೆ ಸಹ ಇದೆ. ಅಲ್ಲದೆ ಏಡ್ಸ್ ರೋಗ ತಗುಲಿದ ವ್ಯಕ್ತಿಗಳ ಜೊತೆಗೆ ಹೇಗಿರಬೇಕು, ಗರ್ಭಿಣಿಯಿಂದ ಮಗುವನ್ನು ಹೇಗೆ ರಕ್ಷಿಸಬೇಕು ಎಂಬುದರ ಕುರಿತಾದ ಚಿತ್ರಗಳನ್ನು ಪ್ರದರ್ಶಿಸಲಾಗಿದೆ. ಹತ್ತು ಹಲವಾರು ಮಾಹಿತಿ ನೀಡುವ ಚಿತ್ರಗಳಿಗಂತೂ ಕೊರತೆ ಇಲ್ಲ. ಇನ್ನೂ ಎರಡು ದಿನಗಳವರೆಗೆ (ಭಾನುವಾರ, ಸೋಮವಾರ) ರೈಲು ಧಾರವಾಡ ನಿಲ್ದಾಣದಲ್ಲಿದ್ದು, ಮಾಹಿತಿ ನೀಡಲಿದೆ.

ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ ಶಾಸಕರಾದ ವೀರಭದ್ರಪ್ಪ ಹಾಲಹರವಿ, ಸೀಮಾ ಮಸೂತಿ, ಶ್ರೀನಿವಾಸ ಮಾನೆ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಅಶೋಕ ಕಾಟವೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವೈ.ಎಸ್.ರವಿಕುಮಾರ, ಜಿ.ಪಂ. ಉಪಾಧ್ಯಕ್ಷೆ ಮಮತಾಜಬಿ ನದಾಫ್, ಜಿ.ಪಂ. ಸದಸ್ಯೆ ರತ್ನವ್ವ ಕಳ್ಳಿಮನಿ, ಪ್ರೇಮಾ ಕೋಮಾರ ದೇಸಾಯಿ, ಪಾಲಿಕೆ ಸದಸ್ಯ  ಶಿವು ಹಿರೇಮಠ, ಸಲ್ಮಾ  ಪಾಹೀಮ್, ಡಾ. ಹಲಸಂಗಿಮಠ, ಹೆಚ್ಚುವರಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಎಸ್.ಬಿ.ಮುಳ್ಳೊಳ್ಳಿ, ಡಾ. ಎಸ್. ಎಂ.ಹೊನಕೇರಿ, ರೈಲು ನಿಲ್ದಾಣ ವ್ಯವಸ್ಥಾಪಕ ಎಂ.ರಾಮಮೂರ್ತಿ, ಡಾ. ಬಬ್ರುವಾಡ ವೇದಿಕೆಯಲ್ಲಿದ್ದರು.

ಡಾ. ಎನ್.ಎಂ.ಅಂಗಡಿ ಸ್ವಾಗತಿಸಿದರು. ಲೀಲಾ ಸಂಪಿಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಗದೀಶ ಬೀಳಗಿ ನಿರೂಪಿಸಿದರು. ಡಾ. ಬಿ.ಡಿ.ಕಿತ್ತೂರ ವಂದಿಸಿದರು. ಇದಕ್ಕೂ ಮುನ್ನ ಶಾಸಕಿ ಸೀಮಾ ಮಸೂತಿ ವಸ್ತು ಪ್ರದರ್ಶನ ಉದ್ಘಾಟಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.