ADVERTISEMENT

ರೈಲ್ವೆ ಚುನಾವಣೆ: ಹುಬ್ಬಳ್ಳಿಯಲ್ಲಿ ಹೆಚ್ಚು ಮತದಾನ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2013, 6:32 IST
Last Updated 26 ಏಪ್ರಿಲ್ 2013, 6:32 IST

ಹುಬ್ಬಳ್ಳಿ: ರೈಲ್ವೆ ನೌಕರರ ಸಂಘಟನೆಯ ಮಾನ್ಯತೆಗಾಗಿ ದೇಶದ ವಿವಿಧ ರೈಲ್ವೆ ವಲಯಗಳಲ್ಲಿ ಚುನಾವಣೆ ಪ್ರಕ್ರಿಯೆ ಗುರುವಾರ ಆರಂಭಗೊಂಡಿತು. ಮತದಾನ ಮೂರು ದಿನ ನಡೆಯಲಿದೆ. ಮೊದಲ ದಿನ ನೈರುತ್ಯ ರೈಲ್ವೆ ವಲಯ ವ್ಯಾಪ್ತಿಯಲ್ಲಿ ಒಟ್ಟು 50 ಶೇಕಡಾ ಮತದಾನವಾಗಿದೆ ಎಂದು ನೈರುತ್ಯ ರೈಲ್ವೆ ಮಜ್ದೂರ್ ಯೂನಿಯನ್ ತಿಳಿಸಿದೆ.

ವಲಯ ವ್ಯಾಪ್ತಿಯಲ್ಲಿ ಹುಬ್ಬಳ್ಳಿ ವಿಭಾಗದಲ್ಲಿ ಅತಿ ಹೆಚ್ಚು 80 ಶೇಕಡಾ ಮತದಾನವಾಗಿದೆ ಎಂದು ಯೂನಿಯನ್‌ನ ಪ್ರಧಾನ ಕಾರ್ಯದರ್ಶಿ ಎ.ಎಂ. ಡಿಕ್ರೂಸ್ ತಿಳಿಸಿದರು.

ವಲಯ ವ್ಯಾಪ್ತಿಯಲ್ಲಿ ಒಟ್ಟು 35 ಸಾವಿರ ಮತದಾರರಿದ್ದು ಒಟ್ಟು 57 ಬೂತ್‌ಗಳನ್ನು ಸ್ಥಾಪಿಸಲಾಗಿದೆ. ಈ ಪೈಕಿ ಹುಬ್ಬಳ್ಳಿ ವಿಭಾಗದಲ್ಲಿ ಒಂಬತ್ತು ಮತಗಟ್ಟೆಗಳು ಇವೆ. ಕಾರ್ಯಾಗಾರದ ಹೊರತಾದ ಮತದಾರರು 26 ಹಾಗೂ 27ರಂದು ಮತದಾನ ಮಾಡಲಿದ್ದಾರೆ.

ಗುರುವಾರ ಬೆಳಿಗ್ಗೆಯಿಂದಲೇ ಕಾರ್ಯಾಗಾರ ಆವರಣದ ಮತಗಟ್ಟೆ ಬಳಿ ನೌಕರರು ಮತದಾನಕ್ಕಾಗಿ ಪಾಳಿ ಹಚ್ಚಿ ನಿಂತಿದ್ದರು. ಮಹಿಳೆಯರು ಕೂಡ ಸಾಕಷ್ಟು ಸಂಖ್ಯೆಯಲ್ಲಿ ಇದ್ದರು. ಚಲಾವಣೆಯಾದ ಒಟ್ಟು ಮತಗಳ ಪೈಕಿ ಶೇಕಡಾ 35ಕ್ಕಿಂತ ಹೆಚ್ಚು ಮತಗಳನ್ನು ಗಳಿಸಿದ ಸಂಘಟನೆಗೆ ರೈಲ್ವೆ ಮಂಡಳಿಯಲ್ಲಿ ಸಮಸ್ಯೆಗಳನ್ನು ಮಂಡಿಸಲು ಆರು ವರ್ಷಗಳ ಅವಧಿಗೆ ಮಾನ್ಯತೆ ಸಿಗುತ್ತದೆ. 2007ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ನೈರುತ್ಯ ರೈಲ್ವೆ ವಲಯದಲ್ಲಿ ರೈಲ್ವೆ ಮಜ್ದೂರ್ ಯೂನಿಯನ್ ಮೇಲುಗೈ ಸಾಧಿಸಿತ್ತು. 

ಗುರುವಾರ ಮತದಾನ ಮಾಡಿದ ಎಲ್ಲರಿಗೂ ಎ.ಎಂ.ಡಿಕ್ರೂಸ್, ಡಬ್ಲ್ಯು. ಎ. ಯಾದವಾಡ, ವಿ.ಇ.ಚಾರಖಾನೆ, ಹರಿದಾಸ, ಚನ್ನಯ್ಯ, ಸುಭಾಸ ಮಲಾಡ, ಜೋಸೆಫ್ ಮುಂತಾದವರು ಕೃತಜ್ಞತೆ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.