ADVERTISEMENT

ಲಿಂಗಾಯತ ಧರ್ಮ ಹೋರಾಟ ನಿಲ್ಲದು

‘ವಚನ ಶ್ರೀಗಂಧ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಶಾಸಕ ಬಸವರಾಜ ಹೊರಟ್ಟಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2018, 7:57 IST
Last Updated 17 ಜೂನ್ 2018, 7:57 IST
ಹುಬ್ಬಳ್ಳಿಯಲ್ಲಿ ಶನಿವಾರ ಪ್ರೊ.ಎಸ್‌.ವಿ. ಶೆಟ್ಟರ್‌ ಅವರ ವಚನ ಶ್ರೀಗಂಧ ಪುಸ್ತಕವನ್ನು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಬಿಡುಗಡೆ ಮಾಡಿದರು
ಹುಬ್ಬಳ್ಳಿಯಲ್ಲಿ ಶನಿವಾರ ಪ್ರೊ.ಎಸ್‌.ವಿ. ಶೆಟ್ಟರ್‌ ಅವರ ವಚನ ಶ್ರೀಗಂಧ ಪುಸ್ತಕವನ್ನು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಬಿಡುಗಡೆ ಮಾಡಿದರು   

ಹುಬ್ಬಳ್ಳಿ: ‘ನನಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಬೇಸರವಿಲ್ಲ. ಪಕ್ಷ ನಿಷ್ಠೆ, ಅನುಭವ ಕಡೆಗಣಿಸಲಾಯಿತು. ಲಿಂಗಾಯತ ಹೋರಾಟದಿಂದಾಗಿ ಸಚಿವ ಸ್ಥಾನ ತಪ್ಪಿದೆ. ಹಾಗೆಂದು ಹೋರಾಟದಿಂದ ಹಿಂದೆ ಸರಿಯುವುದಿಲ್ಲ’ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ಧಾರವಾಡ ಜಿಲ್ಲಾ ಘಟಕ, ಬಸವ ಕೇಂದ್ರ, ಬಸವ ಸಮಿತಿ, ಬಸವ ಸಂರಕ್ಷಣಾ ಸಮಿತಿ, ಪ್ರೊಬಸ್ ಕ್ಲಬ್ ಸಹಯೋಗದಲ್ಲಿ ಪ್ರೊ.ಎಸ್.ವಿ. ಪಟ್ಟಣಶೆಟ್ಟಿ ಅವರ ‘ವಚನ ಶ್ರೀಗಂಧ’ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಎಷ್ಟೇ ವರ್ಷ ಸಚಿವನಾದರೂ ಕೊನೆಗೆ ಮಾಜಿ ಎಂದು ಕರೆಯಿಸಿಕೊಳ್ಳಬೇಕು. ಸಚಿವನಾಗಲೀ, ಬಿಡಲೀ ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುತ್ತೇನೆ’ ಎಂದರು.

ADVERTISEMENT

‘ಪ್ರಸ್ತುತ ಅಪ್ಪಂದಿರ ದಿನ ಆಚರಿಸುವವರು ತುಂಬಾ ಕಡಿಮೆ. ಆದರೆ, ಅಪ್ಪಂದಿರ ‘ದಿನ’ ಮಾಡಲು ಕಾಯುತ್ತಿರುತ್ತಾರೆ. ಮಕ್ಕಳಿಗೆ ಒಳ್ಳೆಯ ಹವ್ಯಾಸಗಳನ್ನು ಬೆಳೆಸದಿದ್ದರೆ, ಅವರು ವೈರಿಗಳಾಗುತ್ತಾರೆ. ಹೆತ್ತವರನ್ನು ವೃದ್ಧಾಶ್ರಮಗಳಿಗೆ ಸೇರಿಸಬೇಡಿ’ ಎಂದು ಸಲಹೆ ಮಾಡಿದರು.

ಬೈಲೂರಿನ ತೋಂಟದಾರ್ಯ ಮಠದ ನಿಜಗುಣ ಪ್ರಭು ತೋಂಟದಾರ್ಯ ಸ್ವಾಮೀಜಿ ಮಾತನಾಡಿ, ‘ವಚನಗಳು ನಿತ್ಯ  ಬದುಕಿಗೆ ಹತ್ತಿರವಾಗಿವೆ. ಅವುಗಳ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಜೀವನದ ಅಮೂಲ್ಯ ನಿರ್ಣಯಗಳನ್ನು ಕೈಗೊಳ್ಳುವಲ್ಲಿ ವಚನಗಳು ಸಹಕಾರಿಯಾಗಿವೆ’ ಎಂದರು.

‘ಹೊರಟ್ಟಿ ಅವರ ಕರ್ತವ್ಯ ನಿಷ್ಠೆ ಹಾಗೂ ಕಾರ್ಯಗಳನ್ನು ನೋಡಿ ಅಧಿಕಾರ ನೀಡಬೇಕಿತ್ತು. ಅಧಿಕಾರ ಯಾವತ್ತೂ ಶಾಶ್ವತವಲ್ಲ, ಆದರೆ, ಕಾರ್ಯಗಳು ಶಾಶ್ವತವಾಗಿರುತ್ತವೆ’ ಎಂದರು.

‍‍ಲೇಖಕ ಪ್ರೊ.ಎಸ್.ವಿ.ಪಟ್ಟಣಶೆಟ್ಟಿ ಮಾತನಾಡಿ, ‘ಅನುಭವ ಮತ್ತು ಅನುಭಾವಗಳ ಸಂಗಮವೇ ವಚನ ಸಾಹಿತ್ಯ. ವಚನಕಾರರು ವರ್ಗ, ವರ್ಣರಹಿತ ಸಮಾಜ ನಿರ್ಮಾಣಕ್ಕೆ ಮುಂದಾಗಿದ್ದರು. ವಚನಗಳು ಇಂದಿಗೂ ಪ್ರಸ್ತುತವಾಗಿವೆ’ ಎಂದರು.

ಕನ್ನಡ ಸಾಹಿತ್ಯ ಪರಿಷತ್‌ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ ಮಾತನಾಡಿ, ‘ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುವವರಿಗೆ ವಯಸ್ಸಿನ ಮಿತಿ ಇರುವುದಿಲ್ಲ. ವಚನ ಸಾಹಿತ್ಯದ ಮಹತ್ವವನ್ನು ಜನರಿಗೆ ತಿಳಿಸಬೇಕು’ ಎಂದು ಹೇಳಿದರು.

ಸಾಹಿತಿ ಡಾ. ಶ್ಯಾಮಸುಂದರ ಬಿದರಕುಂದಿ, ದಾಕ್ಷಾಯಿಣಿ ಪಟ್ಟಣಶೆಟ್ಟಿ, ಪ್ರೊ.ಕೆ. ಎಸ್. ಕೌಜಲಗಿ, ಬಸವರಾಜ ಕೆಂಧೊಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.