ADVERTISEMENT

ವಾರದೊಳಗೆ ಕ್ರಮಕ್ಕೆ ಒತ್ತಾಯ: ಬರ ಪ್ರದೇಶ ಘೋಷಣೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2011, 6:00 IST
Last Updated 8 ಅಕ್ಟೋಬರ್ 2011, 6:00 IST

ಧಾರವಾಡ: “ಹುಬ್ಬಳ್ಳಿ ತಾಲ್ಲೂಕಿನ ಶಿರಗುಪ್ಪಿ ಹೋಬಳಿಯ 14 ಹಳ್ಳಿಗಳನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಬೇಕು” ಎಂದು ಹುಬ್ಬಳ್ಳಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸದಸ್ಯ ಶಿವಾನಂದ ಕರಿಗಾರ ಒತ್ತಾಯಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಒಂದು ವಾರದೊಳಗೆ ಈ ಬಗ್ಗೆ ಕ್ರಮ ತೆಗೆದುಕೊಳ್ಳದಿದ್ದರೆ ಇಲ್ಲಿನ ಆಲೂರ ವೆಂಕಟರಾವ್ ವೃತ್ತದಲ್ಲಿ ಟ್ರ್ಯಾಕ್ಟರ್, ಎತ್ತಿನ ಚಕ್ಕಡಿಗಳ ಸಮೇತ ಧರಣಿ ನಡೆಸಲಾಗುವುದು. ರಸ್ತೆಯಲ್ಲಿಯೇ ಅಡುಗೆ ಮಾಡಿಕೊಂಡು ಊಟ ಮಾಡಲಾಗುವುದು ಎಂದು ಹೇಳಿದರು.

ಮುಂಗಾರು ಮಳೆ ಆಗದ ಕಾರಣ ಬಿತ್ತಿದ ಬೆಳೆ ಹಾಳಾಗಿದೆ. ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ರೈತರಿಗೆ ಪ್ರತಿ ಎಕರೆಗೆ 25,000 ರೂ. ಪರಿಹಾರಧನ ನೀಡಬೇಕು. ದನಕರುಗಳಿಗೆ ಮೇವು, ಹೊಟ್ಟು ಒದಗಿಸಬೇಕು. ಗೋ ಶಾಲೆ ಪ್ರಾರಂಭಿಸಬೇಕು. ಬೆಳೆ ಸಾಲ ಹಾಗೂ ಟ್ರ್ಯಾಕ್ಟರ್ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು. 2004 ರಿಂದ 2011ರ ವರೆಗಿನ ಬೆಳೆ ವಿಮೆಯನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಕರಿಗಾರ ಆಗ್ರಹಿಸಿದರು.

ರೈತರ ಬಗ್ಗೆ ಈಗಿರುವ ಸರ್ಕಾರಕ್ಕೆ ಎಳ್ಳಷ್ಟೂ ಕಾಳಜಿಯಿಲ್ಲ. ಕೃಷಿ ಸಚಿವರು ಐಷಾರಾಮಿ ಬದುಕು ನಡೆಸುತ್ತಿದ್ದು, ರೈತರ ಕಡೆಗೆ ಗಮನ ಹರಿಸುತ್ತಿಲ್ಲ. ಬರಗಾಲ ಪ್ರದೇಶ ಎಂದು ಘೋಷಿಸಲು ನಡೆಸಿದ ಸಮೀಕ್ಷೆಯು ಸರಿಯಾಗಿ ನಡೆದಿಲ್ಲ. ಅಧಿಕಾರಿಗಳು ಗ್ರಾಮಗಳಿಗೆ ಆಗಮಿಸದೇ ಕೇವಲ ತಮ್ಮ ಕಚೇರಿಯಲ್ಲಿ ಕುಳಿತು ವರದಿ ತಯಾರಿಸಿದ್ದಾರೆ ಎಂದು ಆರೋಪಿಸಿದರು.

ಬರಗಾಲ ಪರಿಸ್ಥಿತಿ ಉಂಟಾಗಿದ್ದರಿಂದ ಈಗಾಗಲೇ ಭಂಡಿವಾಡ ಹಾಗೂ ಕಾಲವಾಡ ಗ್ರಾಮದಲ್ಲಿ ರೈತರಿಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರ ಕೂಡಲೇ ರೈತರ ಬಗ್ಗೆ ಕಾಳಜಿ ವಹಿಸದಿದ್ದರೆ ಹಾಗೂ ಅವರ ಸಂಕಷ್ಟಗಳ ಪರಿಹಾರಕ್ಕೆ ಮುಂದಾಗದಿದ್ದರೆ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಬಹುದು ಎಂದು ಹೇಳಿದರು.
ಕಲ್ಲಪ್ಪ ಗುಡಿ, ಚನ್ನಪ್ಪ ಕಣ್ಣೂರ, ವಿರೂಪಾಕ್ಷಪ್ಪ ಮೊರಬ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.