ADVERTISEMENT

ವಾರೆಂಟ್‌ಗೆ ತಡೆ

ಓಲೇಕಾರ, ಪುತ್ರರ ವಿರುದ್ಧದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2013, 5:28 IST
Last Updated 24 ಸೆಪ್ಟೆಂಬರ್ 2013, 5:28 IST

ಧಾರವಾಡ: ಹಾವೇರಿಯ ಮಾಜಿ ಶಾಸಕ ನೆಹರೂ ಓಲೇಕಾರ ಮತ್ತು ಅವರ ಪುತ್ರರ ವಿರುದ್ಧ ಲೋಕಾಯುಕ್ತ ನ್ಯಾಯಾಲಯ ಹೊರಡಿಸಿದ್ದ ಜಾಮೀನುರಹಿತ ಬಂಧನ ವಾರೆಂಟ್‌ಗೆ ಇಲ್ಲಿನ ಹೈಕೋರ್ಟ್ ಪೀಠ ಸೋಮವಾರ ತಡೆಯಾಜ್ಞೆ ನೀಡಿದೆ.

ಶಾಸಕರು ತಮ್ಮ ಅಧಿಕಾರದ ಅವಧಿಯಲ್ಲಿ ಶಾಸಕರ ನಿಧಿ ಕಾಮಗಾರಿಗಳನ್ನು ತಮ್ಮ ಮಕ್ಕಳಿಗೆ ಕೊಡಿಸುವ ಮೂಲಕ ಅಧಿಕಾರ ದುರುಪಯೋಗ ಮಾಡಿಕೊಂಡು ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಅಪರಾಧವೆಸಗಿದ್ದಾರೆ ಎಂದು ಶಶಿಧರ ಹಳ್ಳಿಕೇರಿ ಎನ್ನುವವರು 2012ರ ಅಕ್ಟೋಬರ್ 9ರಂದು ಖಾಸಗಿ ದೂರು ದಾಖಲಿಸಿದ್ದರು.

ದೂರಿನ ವಿಚಾರಣೆ ನಡೆಸಿದ್ದ ಲೋಕಾಯುಕ್ತ ಪೊಲೀಸರು ಮಾಜಿ ಶಾಸಕ ಮತ್ತು ಅವರ ಪುತ್ರರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ ಆರೋಪಿಗಳ ವಿರುದ್ಧ 2013ರ ಸೆಪ್ಟೆಂಬರ್ 16ರಂದು ಜಾಮೀನುರಹಿತ ವಾರೆಂಟ್ ಹೊರಡಿಸಿತ್ತು. 

ನ್ಯಾಯಾಲಯದ ಈ ಆದೇಶವನ್ನು ಪ್ರಶ್ನಿಸಿ ನೆಹರೂ ಓಲೇಕಾರ ಅವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ಅವರಿದ್ದ ಏಕಸದಸ್ಯಪೀಠ, ನ್ಯಾಯಾಲಯದ ಆದೇಶಕ್ಕೆ ತಡೆಯಾಜ್ಞೆ ನೀಡಿತು.  ಅರ್ಜಿದಾರರ ಪರ ಎಫ್.ವಿ. ಪಾಟೀಲ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.