ADVERTISEMENT

ವಿಜೃಂಭಣೆಯ ವಿರೂಪಾಕ್ಷೇಶ್ವರ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2013, 10:04 IST
Last Updated 16 ಏಪ್ರಿಲ್ 2013, 10:04 IST

ಉಪ್ಪಿನ ಬೆಟಗೇರಿ (ತಾ.ಧಾರವಾಡ): ಇಲ್ಲಿಯ ವಿರೂಪಾಕ್ಷೇಶ್ವರ ಜಾತ್ರಾ ಮಹೋತ್ಸವವು ಸೋಮವಾರ ಸಾವಿರಾರು ಭಕ್ತಾದಿಗಳ ಹರ್ಷೋ ದ್ಘಾರಗಳ ಮಧ್ಯೆ ವಿಜೃಂಭಣೆಯಿಂದ ನಡೆಯಿತು.

ರಥೋತ್ಸವಕ್ಕೂ ಮುನ್ನ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಘಟಪ್ರಭಾದ ಮಲ್ಲಿಕಾರ್ಜುನ ಸ್ವಾಮೀಜಿಗಳ ಅಡ್ಡ ಪಲ್ಲಕ್ಕಿ ಉತ್ಸವ ನಡೆಯಿತು. ಈ ಭಾಗದ ಆರಾಧ್ಯ ದೈವ ಎನಿಸಿಕೊಂಡಿರುವ ವಿರೂಪಾಕ್ಷೇಶ್ವರ ರಥೋತ್ಸವವು ಸರಿಯಾಗಿ ಸಂಜೆ 6ಕ್ಕೆ ಆರಂಭವಾಗುತ್ತಿದ್ದಂತೆ ಅಲ್ಲಿ ಸೇರಿದ್ದ ಸಾವಿರರಾರು ಭಕ್ತರು `ಹರ ಹರ ಮಹಾದೇವ' ಎಂದು ಘೋಷಣೆಗಳನ್ನು ಕೂಗುತ್ತ ಸಾಗುತ್ತಿದ್ದ ರಥಕ್ಕೆ ಉತ್ತತ್ತಿ, ನಿಂಬೆಹಣ್ಣು ಹಾಗೂ ಬಾಳೆಹಣ್ಣುಗಳನ್ನು ತೂರಿದರು.

ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮದ ಪ್ರಮುಖ ಬೀದಿಗಳನ್ನು ತಳಿರು ಹಾಗೂ ತೋರಣಗಳಿಂದ ಸಿಂಗರಿಸಲಾಗಿತ್ತು.

ಸಿದ್ಧಿವಿನಾಯಕ ಯುವಕ ಮಂಡಳ, ಗಜಾನನ ಯುವಕ ಮಂಡಳ, ಅಕ್ಕಮಹಾದೇವಿ ವಿವಿಧೋದ್ದೇಶ ಸಂಘ ಸೇರಿದಂತೆ ಅನೇಕ ಸಂಘದ ಕಾರ್ಯಕರ್ತರು ತಮ್ಮ ತಮ್ಮ ಓಣಿಗಳಲ್ಲಿ ಪರಪರಿ ಹಾಗೂ ಕೇಸರಿ ಧ್ವಜಗಳನ್ನು ಕಟ್ಟಿ ಸಿಂಗರಿಸಿದ್ದರು.

ರಥೋತ್ಸವಕ್ಕೂ ಮುನ್ನ ನಡೆದ ಅಡ್ಡಪಲ್ಲಕ್ಕಿ ಉತ್ಸವದಲ್ಲಿ ಅನೇಕ ಜಾಂಜ್ ಮಜಲುಗಳು, ಭಜನೆ ಮೇಳಗಳು, ಹೆಜ್ಜೆ ಮಜಲಿನ ತಂಡಗಳು ಪಾಲ್ಗೊಂಡು ಉತ್ಸವಕ್ಕೆ ಹೆಚ್ಚಿನ ಮೆರುಗು ತಂದಿದ್ದವು. ಮಾದನಬಾವಿ ಗ್ರಾಮದ ಬಸಪ್ಪ ಕಂಬಾರಗಣಿ ಎಂಬುವವರಿಗೆ ಸೇರಿದ ಎತ್ತು ರಸ್ತೆಯಲ್ಲಿ ದೀಡ ನಮಸ್ಕಾರ ಹಾಕುತ್ತಾ ಸಾಗುತ್ತಿದ್ದುದು ವಿಶೇಷವಾಗಿತ್ತು.

ಅಡ್ಡ ಪಲ್ಲಕ್ಕಿ ಉತ್ಸವ ವಿರೂಪಾಕ್ಷೇಶ್ವರ ಕರ್ತೃ ಗದ್ದುಗೆಗೆ ಬಂದು ತಲುಪುತ್ತಿದ್ದಂತೆ ರಥೋತ್ಸವಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಯಿತು. ನಂತರ ಭಕ್ತಾದಿಗಳು ರಥವನ್ನು ಎಳೆಯಲು ನಾ ಮುಂದೆ ತಾ ಮುಂದೆ ಎಂದು ಸಾಗಿದರು.

ರಥೋತ್ಸವಕ್ಕೂ ಮುನ್ನ ಸಾಮೂಹಿಕ ವಿವಾಹ ಗಳನ್ನು ನಡೆಸಲಾಯಿತು. ಮೂರು ಜೋಡಿಗಳು ನವಜೀವನಕ್ಕೆ ಕಾಲಿಟ್ಟರು.

ಕುಮಾರ ವಿರೂಪಾಕ್ಷ ಸ್ವಾಮೀಜಿ, ಅಮರೇಶ್ವರ ದೇವರು, ಹುಚ್ಚೇಶ್ವರ ಸ್ವಾಮೀಜಿ, ಮುರುಘೇಂದ್ರ ಸ್ವಾಮೀಜಿ, ಶಂಕರರಾಜೇಂದ್ರ ಸ್ವಾಮೀಜಿ ರಥೋತ್ಸವದ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.