ADVERTISEMENT

ಶರಣರ ತತ್ವದಿಂದ ಜೀವನ ಮೌಲ್ಯ ಸುಧಾರಣೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2011, 6:05 IST
Last Updated 8 ನವೆಂಬರ್ 2011, 6:05 IST
ಶರಣರ ತತ್ವದಿಂದ ಜೀವನ ಮೌಲ್ಯ ಸುಧಾರಣೆ
ಶರಣರ ತತ್ವದಿಂದ ಜೀವನ ಮೌಲ್ಯ ಸುಧಾರಣೆ   

ನವಲಗುಂದ: ಸಂತರು, ಶರಣರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಮನಸ್ಸಿಗೆ ನೆಮ್ಮದಿ ಸಮಾಧಾನ ಸಿಗುತ್ತದೆ. ಶರಣರ ಮೌಲ್ಯಗಳು ಜೀವನಕ್ಕೆ ಬೆಳಕು ನೀಡುತ್ತವೆ ಎಂದು ಗದುಗಿನ ನೀಲಮ್ಮತಾಯಿ ಆಶ್ರಮದ ನೀಲಮ್ಮತಾಯಿ  ಹೇಳಿದರು.

ಇಲ್ಲಿಯ ಹುರಕಡ್ಲಿ ಅಜ್ಜನವರ ಪುಣ್ಯಾಶ್ರಮದಲ್ಲಿ ಜರುಗುತ್ತಿರುವ ಸಾಹಿತ್ಯ ಹಾಗೂ ಸಂಸ್ಕೃತಿ ಉತ್ಸವದ ಸೋಮವಾರದ ಕಾರ್ಯಕ್ರಮಗಳ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.  ಹಣಕ್ಕಾಗಿ, ಆಸ್ತಿ ಅಂತಸ್ತಿಗಾಗಿ ಜೀವನ ನಡೆಸಬಾರದು. ಮಹಾತ್ಮರ ಮೌಲ್ಯಗಳನ್ನು ತಿಳಿದು ಸಮಾಜ ಸೇವೆ ಮಾಡಿದಾಗ ಜೀವನ ಸಾರ್ಥಕವಾಗುತ್ತದೆ ಎಂದು ನುಡಿದರು.

`ಪ್ರಜಾವಾಣಿ~ ದಿನಪತ್ರಿಕೆಯ ಸಹಸಂಪಾದಕ ಗೋಪಾಲಕೃಷ್ಣ ಹೆಗಡೆ ಮಾತನಾಡಿ, `ದಿನಬೆಳಗಾಗುವುದರ ಒಳಗಾಗಿ ಶ್ರೀಮಂತರಾಗಬೇಕೆಂಬ ಹುಚ್ಚು ಕಲ್ಪನೆಯಿಂದ ದುಡ್ಡಿನ ವ್ಯಾಮೋಹ ಹೆಚ್ಚಾಗಿ ಮೌಲ್ಯಗಳನ್ನು ಕಳೆದುಕೊಂಡಿದ್ದೇವೆ~ ಎಂದು ಆತಂಕ ವ್ಯಕ್ತಪಡಿಸಿದರು.

ಮಕ್ಕಳನ್ನು ದುಡ್ಡು ತರುವ ಎಟಿಎಂನಂತೆ ಪಾಲಕರು ತಿಳಿದಿದ್ದಾರೆ. ಇದರಿಂದಾಗಿ ಬೆಂಗಳೂರಿನಲ್ಲಿ ಪ್ರತಿದಿನವೂ ನೂರಾರು ವಿಚ್ಛೇದನ ಪ್ರಕರಣಗಳು ದಾಖಲಾಗುತ್ತಿವೆ. ರಾಜಕೀಯ ಪ್ರಭಾವದಿಂದ ಮಠಾಧೀಶರೂ ಮೌಲ್ಯಗಳನ್ನು ಕಳೆದುಕೊಂಡು ಸಮಾಜಕ್ಕೆ ತಮ್ಮ ಕೊಡುಗೆ ಏನು ಎಂಬುದನ್ನೇ ಮರೆತಿದ್ದಾರೆ ಎಂದು ಹೇಳಿದರು.

ದುಡ್ಡನ್ನು ನ್ಯಾಯವಾಗಿ, ಕಷ್ಟಪಟ್ಟು ದುಡಿದಾಗ ಅದಕ್ಕೊಂದು ಅರ್ಥ ಬರುತ್ತದೆ. ಕೆಲವು ಪತ್ರಕರ್ತರು ರಾಜಕಾರಣಿಗಳ ಬೆನ್ನು ಹತ್ತಿದ್ದರಿಂದ ಮೌಲ್ಯಗಳನ್ನು ಕಳೆದುಕೊಂಡಿದ್ದಾರೆ. ರಾಜಕಾರಣಿಗಳಿಗೆ ಪಾಠ ಕಲಿಸಿದರೆ ಎಲ್ಲ ಸಮಸ್ಯೆಗೂ ಪರಿಹಾರ ಸಿಗಲಿದೆ. ಕೃಷಿ ಫಸಲಿಗೆ ತಕ್ಕ ಬೆಲೆ ಸಿಗದೆ ರೈತರು ಸಂಕಷ್ಟದಲ್ಲಿದ್ದಾರೆ. ಇದಕ್ಕೆ ಪ್ರತಿಯಾಗಿ ಅಧಿಕಾರಿಗಳು, ರಾಜಕಾರಣಿಗಳು ಸಂಕಷ್ಟದ ದುರ್ಲಾಭ ಪಡೆಯಲು ಮುಂದಾಗಿರುವುದು ದುರಾದೃಷ್ಟಕರ. ಭ್ರಷ್ಟಾಚಾರದ ವಿರುದ್ಧ ಸಂಘಟಿತ ಹೋರಾಟ ಮುಂದುವರಿಯಬೇಕಾಗಿದೆ ಎಂದು ಹೇಳಿದರು.

ಪತ್ರಕರ್ತ ಗಣಪತಿ ಗಂಗೊಳ್ಳಿ ಅಧ್ಯಕ್ಷತೆ ವಹಿಸಿದ್ದರು. ರಿಯಾಜ್ ಅಹ್ಮದ್ ಫಿರ್ಜಾದೆ ಪಾಲ್ಗೊಂಡಿದ್ದರು.  ಹಂಚಿನಾಳದ ಗಾಯತ್ರಿದೇವಿ ಜಾನಪದ ನೃತ್ಯ ಮತ್ತು ಗಾಯನ ಕಲಾ ತಂಡದ ಮುಖ್ಯಸ್ಥ ಬಿ.ಸಿ. ಪಾಟೀಲ ಜಾನಪದ ಗೀತ ಗಾಯನ ಮಾಡಿದರು. ಗೀತಾ ಮೆಣಸಿನಕಾಯಿ ಭಕ್ತಿ ಸಂಗೀತ ಪ್ರಸ್ತುತ ಪಡಿಸಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿದ ಗಣ್ಯರನ್ನು ಸನ್ಮಾನಿಸಲಾಯಿತು. ಆರ್.ಬಿ. ಕಮತರ ಸ್ವಾಗತಿಸಿದರು. ಶ್ರೀಕಾಂತ ಪಾಟೀಲ ನಿರೂಪಿಸಿದರು. ಬಿ.ಐ.ಚಕ್ರಸಾಲಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.