ADVERTISEMENT

ಶಾಲ್ಮಲಾ ಹಾಸ್ಟೆಲ್ ಫಳಫಳ; ಒಡೆದ ಪೈಪ್ ರಿಪೇರಿ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2012, 6:47 IST
Last Updated 5 ಡಿಸೆಂಬರ್ 2012, 6:47 IST

ಧಾರವಾಡ: ಬೆಳಿಗ್ಗೆ ಎದ್ದ ತಕ್ಷಣ ಕರ್ನಾಟಕ ವಿಶ್ವವಿದ್ಯಾಲಯದ ಶಾಲ್ಮಲಾ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಅಚ್ಚರಿಯೋ ಅಚ್ಚರಿ. ಕಳೆದ ಹಲವು ತಿಂಗಳಿಂದ ನೀರು ಕಾಣದ ನೆಲವನ್ನು ಮಂಗಳವಾರ ಬೆಳಿಗ್ಗೆ ಫಿನಾಯಿಲ್‌ನಿಂದ ಕೆಲಸಗಾರರು ಒರೆಸಿದರು.. ನೀರು ಸೋರಿ ಜಂಗು ಹಿಡಿದು ಹೋಗಿದ್ದ ಮೊದಲ ಮಹಡಿಯ ಪೈಪ್ ಬದಲಿಸಿ ಹೊಸ ಪೈಪ್ ಅಳವಡಿಸಿದರು...!

`ಪ್ರಜಾವಾಣಿ'ಯ ಮಂಗಳವಾರದ ಸಂಚಿಕೆಯಲ್ಲಿ ವಿ.ವಿ.ಯೊಳಗೊಂದು ಸುತ್ತು ಅಂಕಣದಲ್ಲಿ  `ಕಾಯಕಲ್ಪಕ್ಕೆ ಕಾಯುತಿದೆ ಶಾಲ್ಮಲಾ ಹಾಸ್ಟೆಲ್' ಎಂಬ ಶೀರ್ಷಿಕೆಯಡಿ ಪ್ರಕಟವಾದ ವರದಿಯ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಹಾಸ್ಟೆಲ್ ವಾರ್ಡನ್ ಹಾಗೂ ಅಧಿಕಾರಿಗಳು ಬೆಳಿಗ್ಗೆಯೇ ಕೆಲಸಗಾರರಿಗೆ ಈ ಬಗ್ಗೆ ಸೂಚನೆ ನೀಡಿ ಇಡೀ ಹಾಸ್ಟೆಲ್ ಫಿನಾಯಿಲ್ ಮಿಶ್ರಿತ ನೀರಿನಿಂದ ಒರೆಸುವಂತೆ ಸೂಚಿಸಿದ್ದರು.
ಹಾಸ್ಟೆಲ್ ಮುಂಭಾಗದಲ್ಲಿ ಚೆಲ್ಲಿದ್ದ ಕಸವನ್ನು ಬೇರೆಡೆ ಸಾಗಿಸಿದರು. ಕೆಟ್ಟು ಮೂಲೆ ಸೇರಿದ್ದ ಸೌರ ವಿದ್ಯುತ್ ಫಲಕ ಹಾಗೂ ವಿದ್ಯುತ್ ಪೂರೈಕೆಗೆಂದು ಅಳವಡಿಸಿದ ಸ್ವಿಚ್ ಬೋರ್ಡ್‌ಗಳನ್ನು ಪರಿಶೀಲಿಸಿದರು.

ವರದಿ ಪ್ರಕಟವಾಗಲಿರುವ ಸೂಚನೆ ಅರಿತ ವಿ.ವಿ.ಯ ವಿದ್ಯಾರ್ಥಿ ಕಲ್ಯಾಣ ವಿಭಾಗದ ನಿರ್ದೇಶಕರಾದ ಡಾ.ಎಂ.ಟಿ.ಕಾಂಬಳೆ ಅವರು ಶಾಲ್ಮಲಾ ಹಾಸ್ಟೆಲ್ ವಾರ್ಡನ್ ಡಾ.ಎಂ.ಜಯರಾಜ್ ಅವರನ್ನು ಸೋಮವಾರ ಸಂಜೆಯೇ ಕರೆಸಿಕೊಂಡು ರಿಪೇರಿ ಕಾರ್ಯವನ್ನು ಕೈಗೆತ್ತಿಕೊಳ್ಳುವಂತೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದರು.

ತಮ್ಮ ಕಚೇರಿಗೆ ಕರೆಸಿಕೊಂಡ ಕುಲಪತಿ ಡಾ.ಎಚ್.ಬಿ.ವಾಲೀಕಾರ, ಹಾಸ್ಟೆಲ್ ಸಮಸ್ಯೆಗಳ ಬಗ್ಗೆ ಮೇಲಿಂದ ಮೇಲೆ ಪರಿಶೀಲನೆ ನಡೆಸಬೇಕು ಎಂದೂ ಸೂಚನೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಹಾಸ್ಟೆಲ್ ಸ್ವಚ್ಛಗೊಂಡಿದ್ದರಿಂದ ಹರ್ಷಗೊಂಡ ಹಾಸ್ಟೆಲ್ ವಿದ್ಯಾರ್ಥಿ ರವಿ, `ನಾವು ಹಲವು ಬಾರಿ ಪ್ರತಿಭಟನೆ ಮಾಡಿದ್ದರೂ ಯಾರೂ ಕ್ಯಾರೇ ಎಂದಿರಲಿಲ್ಲ. ಆದರೆ ವರದಿ ಪ್ರಕಟವಾದ ಬಳಿಕ ಇಡೀ ಹಾಸ್ಟೆಲ್ ಆವರಣ ಸ್ವಚ್ಛಗೊಂಡಿತು' ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.