ADVERTISEMENT

ಶೀಘ್ರವೇ ಗ್ರಾಮಗಳಲ್ಲಿ ಪರಿಶೀಲನಾ ಸಭೆ

ಯೋಜನೆ ಲಾಭ ಫಲಾನುಭವಿಗಳಿಗೆ ತಲುಪಿಸಲು ಕ್ರಮ: ಸಚಿವ ಲಾಡ್

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2013, 6:27 IST
Last Updated 4 ಸೆಪ್ಟೆಂಬರ್ 2013, 6:27 IST

ಹುಬ್ಬಳ್ಳಿ: `ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆ ಸೇರಿದಂತೆ ಸರ್ಕಾರದ ಪಿಂಚಣಿ ಯೋಜನೆಗಳು ಫಲಾನುಭವಿಗಳನ್ನು ತಲುಪುತ್ತಿವೆಯೇ ಎಂಬುದನ್ನು ಅರಿಯಲು ಅಧಿಕಾರಿಗಳೊಂದಿಗೆ ಶೀಘ್ರ ಗ್ರಾಮಗಳಿಗೆ ತೆರಳಿ ಪರಿಶೀಲನಾ ಸಭೆ ನಡೆಸುವುದಾಗಿ' ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಹೇಳಿದರು.

ಕಲಘಟಗಿ ತಾಲ್ಲೂಕಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಕೈಗೊಂಡಿರುವ ರೂ 22,03 ಕೋಟಿ ಮೊತ್ತದ ವಿವಿಧ ಕಾಮಗಾರಿಗಳಿಗೆ ಮಂಗಳವಾರ ದಾಸ್ತಿಕೊಪ್ಪ ಗ್ರಾಮದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ (ಆರ್‌ಎಂಎಸ್) ಅಭಿಯಾನದಡಿಯಲ್ಲಿ ಕಲಘಟಗಿ ತಾಲ್ಲೂಕಿಗೆ ರಾಜ್ಯ ಸರ್ಕಾರ ಬಂಪರ್ ಕೊಡುಗೆ ನೀಡಿದೆ. ದೊಡ್ಡ ಮೊತ್ತದ ಹಣ ವಿನಿಯೋಗಿಸುತ್ತಿರುವುದರಿಂದ ಕಾಮಗಾರಿಯ ಗುಣಮಟ್ಟ ಕಳಪೆಯಾಗದಂತೆ ತಡೆಯಲು ಸಮುದಾಯದ ಸಹಭಾಗಿತ್ವ ಅಗತ್ಯ ಎಂದು ಹೇಳಿದರು.

`ಯಾವುದೇ ಒತ್ತಡಗಳಿಗೆ ಮಣಿಯದೆ ಕಾಮಗಾರಿ ಕೈಗೊಳ್ಳುವಂತೆ ಗುತ್ತಿಗೆ ಕಂಪೆನಿಗೆ ಸೂಚನೆ ನೀಡಿದ ಅವರು, ನನ್ನ ಆಪ್ತ ಸಹಾಯಕರ ಹೆಸರಿನಲ್ಲಿ ಯಾರಾದರೂ ಕರೆ ಮಾಡಿ ಒತ್ತಡ ಹೇರಿದರೂ ಕೇಳದೆ ಗುಣಮಟ್ಟದ ಕಾಮಗಾರಿ ನಡೆಸುವಂತೆ' ತಿಳಿಸಿದರು.
ಸ್ಥಳೀಯ ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯಿತಿ ಆಡಳಿತ, ಕಟ್ಟಡಗಳ ಕಾಮಗಾರಿ ಕಳಪೆಯಾಗದಂತೆ ಮೇಲ್ವಿಚಾರಣೆ ನಡೆಸುವಂತೆ ಸಚಿವರು ಕಿವಿಮಾತು ಹೇಳಿದರು.

ಜಿಲ್ಲೆಯಲ್ಲಿ ಆರ್‌ಎಂಎಸ್ ಯೋಜನೆಯಡಿ 39.84 ಕೋಟಿ ರೂಪಾಯಿಯ ಕಾಮಗಾರಿಗಳಿಗೆ ಅನುಮೋದನೆ ದೊರೆತಿದೆ. ಅದರಲ್ಲಿ ಶೇ 85ರಷ್ಟು ಪಾಲು ಕೇಂದ್ರ ಸರ್ಕಾರ ಭರಿಸಿದರೆ ರಾಜ್ಯ ಸರ್ಕಾರ ಶೇ 15ರಷ್ಟು ಹಣ ನೀಡುತ್ತಿದೆ. ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಪಕ್ಷಾತೀತವಾಗಿ ಕೆಲಸ ಮಾಡಬೇಕಿದೆ. ಅಲ್ಲಿ ರಾಜಕೀಯ ಮಾಡುವ ಅಗತ್ಯವಿಲ್ಲ ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ಬಿ.ಕೆ.ಎಸ್. ವರ್ಧನ ಮಾತನಾಡಿ, ಮಕ್ಕಳನ್ನು ತಪ್ಪದೇ ಶಾಲೆಗೆ ಕಳುಹಿಸುವಂತೆ ಮನವಿ ಮಾಡಿದರು. ಪ್ರತಿ ಮಗು ಶಾಲೆಗೆ ಹೋಗುವುದು ಸಂವಿಧಾನಬದ್ಧ ಹಕ್ಕು ಆಗಿದೆ. ಅದನ್ನು ಶಾಲೆಗೆ ಕಳುಹಿಸುವ ಜವಾಬ್ದಾರಿ ಸಮುದಾಯದ್ದಾಗಿದೆ. ಶಿಕ್ಷಕರು ತಮ್ಮ ಹೊಣೆಗಾರಿಕೆ ಅರಿತು ಕೆಲಸ ಮಾಡಬೇಕಿದೆ ಎಂದು ಹೇಳಿದರು.

ಬಿಇಒ ಎಂ.ಬಿ. ಮಾಳಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭದಲ್ಲಿ ಕಲಘಟಗಿ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಕಾಶವ್ವ ಕಲ್ಲಪ್ಪ ಮುಂದಿನಮನಿ, ದಾಸ್ತಿಕೊಪ್ಪ ಹಿರೇಮಠದ ವೇದಮೂರ್ತಿ ಚೆನ್ನಯ್ಯ ಸ್ವಾಮೀಜಿ, ಜಿಲ್ಲಾ ಪಂಚಾಯಿತಿ ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿಸಮಿತಿ ಅಧ್ಯಕ್ಷ ಟಿ.ಜಿ.ಬಾಲಣ್ಣವರ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಶಂಕರಣ್ಣ ಅಗಡಿ, ವೈ.ಬಿ.ದಾಸನಕೊಪ್ಪ, ಕಸ್ತೂರೆವ್ವ ಶಾಂತರಾಮ ಧಾರವಾಡ, ಬಸವರಾಜ ಕರಡಿಕೊಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಬಸವಣ್ಣಯ್ಯ ಮಹಾಂತಯ್ಯ ಹಿರೇಮಠ, ಯಲ್ಲಾರಿ ಹನುಮಂತ ಶಿಂಧೆ, ನಿರ್ಮಲಾ ಚಂದ್ರಗೌಡ ಪಾಟೀಲ, ಮಲ್ಲೇಶಪ್ಪ ಫಕ್ಕೀರಪ್ಪ ಜಾವುರ, ದಾಸ್ತಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಸವ್ವ ಕಲ್ಲಪ್ಪ ಕೊಪ್ಪದ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.